Advertisement

Tourism: ಕರ್ನಾಟಕದಲ್ಲಿ ಪ್ರವಾಸಿ ತಾಣಗಳ ಕೊರತೆಯಿಲ್ಲ…ಇಷ್ಟಾದರೂ ಸುತ್ತಾಡಿ!

12:31 PM Oct 12, 2024 | Team Udayavani |

“ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಈ ಗಾದೆ ಮನುಷ್ಯನಿಗೆ ಲೋಕಜ್ಞಾನ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ದೇಶವನ್ನು ಸುತ್ತಿದಂತೆ ನಾವು ವಿವಿಧ ಪ್ರದೇಶಗಳ ಜನರ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಪದ್ಧತಿ, ಆಚರಣೆ ಮತ್ತು ನಂಬಿಕೆಗಳ ಕುರಿತ ಅನುಭವ ಪಡೆಯುತ್ತೇವೆ. ಅದೇ ರೀತಿ ಕೋಶವನ್ನು ಹಿಡಿದು ಒಂದು ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಓದುವ ಮೂಲಕ ಅನೇಕ ವಿಷಯ ಮತ್ತು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಒಟ್ಟಾರೆಯಾಗಿ ದೇಶ ಸುತ್ತಿದಾಗ ಮತ್ತು ಕೋಶ ಓದಿದಾಗ ನಾವು ಗಳಿಸುವ ಜ್ಞಾನ ಒಂದೇ ಆಗಿದೆ.

Advertisement

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಪ್ರವಾಸ, ತಿರುಗಾಟಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲ ಒಂದು ರೀತಿಯಲ್ಲಿ ರೀಲ್ಸ್‌, ಸಾಮಾಜಿಕ ಮಾಧ್ಯಮಗಳ ಪ್ರಭಾವ ಎಂದೂ ಹೇಳಬಹುದು. ಇದರಲ್ಲಿ ಕೆಲವರು ತಮ್ಮ ಮನಃಶಾಂತಿಗಾಗಿ ಸುತ್ತಾಟ ನಡೆಸಿದರೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೀಡಿಯೋಗಳನ್ನು ಹಾಕಿ ಖುಷಿ ಪಡುವುದಕ್ಕಾಗಿಯೇ ತಿರುಗಾಡುವವರು ಹಲವರು.

ನಮ್ಮ ರಾಜ್ಯ ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನು ಕಡಿಮೆಯಿಲ್ಲ. ಪ್ರಾಚೀನ ದೇವಾಲಯಗಳಿಂದ ಹಿಡಿದು ರಮಣೀಯ ಭೂದೃಶ್ಯಗಳ ವರೆಗೆ ವೈವಿಧ್ಯಮಯ ಆಕರ್ಷಣೆಗಳ ನಿಧಿ ನಮ್ಮಲ್ಲಿದೆ. ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ನಮ್ಮ ಕರ್ನಾಟಕ ಕೂಡ ಒಂದು. ದೇಶ ವಿದೇಶ ಸುತ್ತುವ ಮೊದಲು ಕರ್ನಾಟಕದಲ್ಲಿರುವ ನಾವು ಒಮ್ಮೆಯಾದರು ನೋಡಲೇಬೇಕಾದ ಕೆಲವು ಪ್ರವಾಸಿ ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ.

*ಬೆಂಗಳೂರು: ನಮ್ಮ ರಾಜಧಾನಿಯಾದ ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಪ್ರಸಿದ್ಧಿ ಪಡೆದಿದೆ. ಈ ನಗರ ಟೆಕ್‌ಹಬ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದಲ್ಲದೆ ಹಲವಾರು ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಮತ್ತು ಐತಿಹಾಸಿಕ ತಾಣಗಳಿಗೆ ನೆಲೆಯಾಗಿದೆ. ಇವುಗಳ ಪೈಕಿ ಮುಖ್ಯವಾದವುಗಳು ಟ್ಯೂಡರ್‌ ಶೈಲಿಯಲ್ಲಿ ನಿರ್ಮಿಸಲಾದ “ಬೆಂಗಳೂರು ಅರಮನೆ’. ಇದು ನಗರದ ರಾಜಮನೆತನದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.

Advertisement

ಅದೇ ರೀತಿ ಲಾಲ್‌ಬಾಗ್‌ ಬೊಟಾನಿಕಲ್‌ ಗಾರ್ಡನ್‌ ಮತ್ತು ಕಬ್ಬನ್‌ ಪಾರ್ಕ್‌, ನವ-ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿರುವ ವಿಧಾನಸೌಧ ಭೇಟಿ ನೀಡಲೇ ಬೇಕಾದ ಪ್ರಮುಖ ತಾಣಗಳು.

*ಮೈಸೂರು: ಪರಂಪರೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಈ ನಗರವು ರಾಜಮನೆತನದ ಐತಿಹಾಸಿಕ ವೈಭವವನ್ನು ಸಾರುತ್ತದೆ. ನಗರದ ಮುಖ್ಯ ಆಕರ್ಷಣೆ ಇಂಡೋ-ಸಾರ್ಸೆನಿಕ್‌ ವಾಸ್ತುಶಿಲ್ಪದಲ್ಲಿ ನಿರ್ಮಿತವಾಗಿರುವ “ಮೈಸೂರು ಅರಮನೆ’. ಪ್ರತೀ ರವಿವಾರ ಸಂಜೆ ವಿದ್ಯುತ್‌ ದೀಪಗಳಿಂದ ಸಿಂಗರಿಸಲ್ಪಟ್ಟ ಅರಮನೆಯನ್ನು ನೋಡುವುದೇ ಆನಂದ.

ಅದೇ ರೀತಿ ಇಲ್ಲಿನ ಮತ್ತೊಂದು ಆಕರ್ಷಣೆ ದಸರಾ ಹಬ್ಬ. ಇದರ ಹೊರತಾಗಿ ಭೇಟಿ ನೀಡಲೇಬೇಕಾದ ಮತ್ತೊಂದು ಸ್ಥಳವೆಂದರೆ ಚಾಮುಂಡಿ ಬೆಟ್ಟ, ಇಲ್ಲಿಂದ ನಗರದ ವಿಹಂಗಮ ನೋಟವನ್ನು ಕಾಣಬಹುದು. ಸಂಗೀತ ಕಾರಂಜಿ ಪ್ರದರ್ಶನಕ್ಕೆ ಹೆಸರುವಾಸಿಯಾದ ಬೃಂದಾವನ ಉದ್ಯಾನವು ಮೈಸೂರು ಬಳಿಯ ಮತ್ತೊಂದು ಜನಪ್ರಿಯ ಆಕರ್ಷಣೆಯಾಗಿದೆ.

*ಹಂಪಿ: ಯುನೆಸ್ಕೋ ವಿಶ್ವ ಪರಂಪರಿಕಾ ತಾಣವಾಗಿ ಗುರುತಿಸಿಕೊಂಡಿರುವ ಹಂಪಿಯು ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ನಗರಗಳಲ್ಲಿ ಒಂದಾಗಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿದೆ. ವಿಶ್ವದ ಅತಿದೊಡ್ಡ ಓಪನ್‌-ಏರ್‌ ಮ್ಯೂಸಿಯಂ ಎನಿಸಿಕೊಂಡಿರುವ ಹಂಪಿ ತುಂಗಭದ್ರ ನದಿಯ ದಡದಲ್ಲಿರುವ ಈ ನಗರದಲ್ಲಿ ಬೃಹತ್‌ ಐತಿಹಾಸಿಕ ಅವಶೇಷಗಳು ಸೇರಿದಂತೆ ಹಲವು ಸಂಸ್ಕೃತಿಯನ್ನು ಬಿಂಬಿಸುವ ಹೆಗ್ಗರುತು ಇಲ್ಲಿವೆ.

ಶಿವನಿಗೆ ಸಮರ್ಪಿತವಾದ ವಿರೂಪಾಕ್ಷ ದೇಗುಲ, ಪ್ರಸಿದ್ಧ ಕಲ್ಲಿನ ರಥವನ್ನು ಹೊಂದಿರುವ ವಿಜಯ ವಿಟಲ ದೇಗುಲ ಮತ್ತು ಇಸ್ಲಾಮಿಕ್‌ ಮತ್ತು ಹಿಂದೂ ವಾಸ್ತುಶಿಲ್ಪವನ್ನು ಮಿಶ್ರಿತ ಲೋಟಸ್‌ ಮಹಲ್‌ ಇಲ್ಲಿನ ಕೆಲವು ಪ್ರಮುಖ ತಾಣಗಳಾಗಿವೆ. ಬಂಡೆಗಳಿಂದ ಹರಡಿರುವ ಇಲ್ಲಿನ ಭೂದೃಶ್ಯವು ಐತಿಹಾಸಿಕ ತಾಣಕ್ಕೆ ಭೇಟಿ ನೀಡುವ ಕೌತುಕತೆಯನ್ನು ಹೆಚ್ಚಿಸುತ್ತದೆ.

*ಕೊಡಗು: ಭಾರತದ ಸ್ಕಾಟ್‌ಲ್ಯಾಂಡ್‌ ಎಂದೇ ಪ್ರಸಿದ್ಧಿಯಾಗಿರುವ ಕೊಡಗು ಜಿಲ್ಲೆ ಹಸುರು ಗಿರಿವನಗಳಿಂದ ಕೂಡಿದ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ನದಿ ತೊರೆಗಳು, ದಟ್ಟ ಕಾನನ, ಎಲ್ಲಿ ನೋಡಿದರು ಕಾಫಿ, ಏಲಕ್ಕಿ ತೋಟ. ಇವುಗಳ ಮಧ್ಯೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್‌ನಿಂದ ಪ್ರಕೃತಿಯ ವಿಹಂಗಮ ನೋಟವನ್ನು ಆನಂದಿಸಬಹುದು. ಅದೇ ರೀತಿ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಚಾರಣ, ಅಬ್ಬೆ ಜಲಪಾತ, ತಲಕಾವೇರಿ, ಮಡಿಕೇರಿ ಕೋಟೆ, ಗೋಲ್ಡನ್‌ ಟೆಂಪಲ್‌, ಕಾವೇರಿ ನಿಸರ್ಗಧಾಮ, ಮಾಂದಲಪಟ್ಟಿ ಜನಪ್ರಿಯ ಸ್ಥಳಗಳು. ಒಟ್ಟಾರೆ ಕೊಡಗು ವಿಶ್ರಾಂತಿ ಮತ್ತು ಸಾಹಸ ಪ್ರಿಯರಿಗೆ ಪರಿಪೂರ್ಣ ಪ್ಯಾಕೇಜ್‌ ಎನ್ನಬಹುದು.

*ಗೋಕರ್ಣ: ಪ್ರಶಾಂತ ಕಡಲ ತೀರಗಳಿಗೆ ಗೋಕರ್ಣ ಹೆಸರುವಾಸಿ. ಗೋವಾದ ಗದ್ದಲದ ಕಡಲತೀರಗಳಿಗಿಂತ ಭಿನ್ನವಾಗಿ ಗೋಕರ್ಣವು ಓಂ ಬೀಚ್‌, ಕುಡ್ಲೆ ಬೀಚ್‌ ಮತ್ತು ಪ್ಯಾರಡೈಸ್‌ ಬೀಚ್‌ನಂತಹ ಪ್ರಶಾಂತ ಕಡಲತೀರಗಳನ್ನು ಹೊಂದಿದೆ. ಈ ಪ್ರದೇಶವು ಒಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿವು ಪ್ರಸಿದ್ಧಿಯನ್ನು ಪಡೆದಿದ್ದು ಮಹಾಬಲೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

*ಚಿಕ್ಕಮಗಳೂರು: ಕಾಫಿ ಪ್ರಿಯರ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿರುವ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಚಿಕ್ಕಮಗಳೂರು ಕಾಫಿ ಎಸ್ಟೇಟ್‌ ಮತ್ತು ಮಂಜಿನ ಪರ್ವತಗಳಿಂದ ಜನಪ್ರಿಯವಾಗಿದೆ . ಈ ಪ್ರದೇಶವು ಚಾರಣ ಪ್ರಿಯರಿಗೆ ಹೇಳಿಮಾಡಿಸಿದ ಪ್ರದೇಶವಾಗಿದೆ.

ಕರ್ನಾಟಕದ ಅತೀ ಎತ್ತರದ ಶಿಖರ ಎಂದು ಗುರುತಿಸಿಕಂಡಿರುವ ಮುಳ್ಳಯ್ಯನಗಿರಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅದೇ ರೀತಿ ಬಾಬಾ ಬುಡನ್‌ ಗಿರಿ, ಭದ್ರಾ ವನ್ಯಜೀವಿ ಅಭಯಾರಣ್ಯ, ಕ್ಯಾತನಮಕ್ಕಿ, ಸಿರಿಮನೆ ಜಲಪಾತ, ಕಳಸ, ಹೊರನಾಡು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಪ್ರಕೃತಿ ಪ್ರಿಯರಿಗೆ ಚಿಕ್ಕಮಗಳೂರು ಸ್ವರ್ಗ ಎಂದೇ ಹೇಳಬಹುದು.

*ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು: ಈ ಮೂರು ಪಟ್ಟಣಗಳು ಕರ್ನಾಟಕದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿದ್ದು, ಇಲ್ಲಿನ ಪ್ರಾಚೀನ ಭಾರತೀಯ ಶಿಲ್ಪಕಲೆ, ವಾಸ್ತುಶಿಲ್ಪ ನೋಡುಗರಲ್ಲಿ ಖಂಡಿತವಾಗಿಯೂ ಅಚ್ಚರಿ ಮೂಡಿಸುತ್ತದೆ. ಗುಹಾ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಬಾದಾಮಿಯು ಹಿಂದೂ ದೇವತೆಗಳಿಗೆ ಸಮರ್ಪಿತವಾದ ಸಂಕೀರ್ಣ ಕೆತ್ತನೆಗಳನ್ನು ಹೊಂದಿದೆ.

ಐಹೊಳೆಯನ್ನು ಹಿಂದೂ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು ಎಂದು ಪರಿಗಣಿಸಿದರೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಗಳನ್ನು ಮಿಶ್ರಣದಿಂದ ಮಾಡಿರುವ ಚಾಲುಕ್ಯರ ಕಾಲದ ದೇವಾಲಯಗಳನ್ನು ಹೊಂದಿದೆ. ನಮ್ಮ ಇತಿಹಾಸ, ಪರಂಪರೆ, ವಾಸ್ತುಶಿಲ್ಪದ ಕುರಿತು ತಿಳಿದುಕೊಳ್ಳುವ ಆಸಕ್ತಿಯುಳ್ಳವರು ಖಂಡಿತವಾಗಿಯೂ ಇಲ್ಲಿಗೆ ಭೇಟಿನೀಡಬೇಕು.

*ಜಯಶಂಕರ್‌ ಜೆ. ಬಿಳಿನೆಲೆ

Advertisement

Udayavani is now on Telegram. Click here to join our channel and stay updated with the latest news.

Next