Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಿದೆ ಉತ್ತೇಜನ

06:00 AM Sep 27, 2018 | |

ಕುಂದಾಪುರ: ಕಡಲ ಕಿನಾರೆ, ನದಿ, ಜಲಪಾತ, ಪರ್ವತ ಶಿಖರಗಳಂತಹ ಹತ್ತಾರು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಊರು ಕುಂದಾಪುರ ತಾಲೂಕು. ಇಲ್ಲಿ  ಪ್ರೇಕ್ಷಣೀಯ ಸ್ಥಳಗಳಿಗೆ ಏನೂ ಕೊರತೆಯಿಲ್ಲ. ಆದರೆ ಪ್ರವಾಸಿ ತಾಣಗಳಲ್ಲಿ  ಮೂಲ ಸೌಕರ್ಯದ ಕೊರತೆಯಿದೆ. 

Advertisement

ಕುಂದಾಪುರ – ಬೈಂದೂರು ತಾಲೂಕಿನ ವ್ಯಾಪಿ ಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಕುರಿತ ಚಿತ್ರಣ ಇಲ್ಲಿದೆ. 

ಮರವಂತೆ- ತ್ರಾಸಿ ಬೀಚ್‌
ಕಡಲು – ನದಿ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಿರುವ ಅಪರೂಪದ ಸ್ಥಳ ತ್ರಾಸಿ – ಮರವಂತೆ ಬೀಚ್‌. ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಇಲಾಖೆಯೂ ಈ ಬೀಚ್‌ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈ ಬೀಚ್‌ ಪಕ್ಕದಲ್ಲೇ ಇತಿಹಾಸ ಪ್ರಸಿದ್ಧ ಮಾರಸ್ವಾಮಿ ದೇವಸ್ಥಾನವಿದೆ. ಇಲ್ಲಿಯೇ ಸಮೀಪ ಪ್ರವಾಸೋದ್ಯಮ ಇಲಾಖೆಗೆ ಸೇರಿದ 1.1 ಎಕರೆ ಜಾಗವಿದ್ದು, ಅಲ್ಲಿ ದೂರದೂರುಗಳಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬಹುದು.ತ್ರಾಸಿಯಲ್ಲಿ ಸರಕಾರದ ವತಿಯಿಂದಲೇ ನಿರ್ಮಿಸಿರುವ ಪ್ರವಾಸಿ ಬಂಗಲೆ ಪಾಳು ಬಿದ್ದಿದ್ದು, ಅದನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ. 

ಸುಂದರ ಸೋಮೇಶ್ವರ ಬೀಚ್‌
ಉಡುಪಿ ಜಿಲ್ಲೆಯ ಅತ್ಯಂತ ಸುಂದರ ಹಾಗೂ ಸುರಕ್ಷಿತ ಬೀಚ್‌ ಎನಿಸಿಕೊಂಡಿರುವುದು ಬೈಂದೂರು ತಾಲೂಕಿನಲ್ಲಿರುವ ಪಡುವರಿ ಸೋಮೇಶ್ವರ ಬೀಚ್‌. ಈಗಾಗಲೇ ಸೋಮೇಶ್ವರ ಬೀಚ್‌ ತೀರ ಅಭಿವೃದ್ಧಿಗೆ ಕೊಸ್ಟಲ್‌ ಸರ್ಕಿಟ್‌ ಯೋಜನೆಯಡಿ ಅನುದಾನ ಮಂಜೂರಾಗಿದ್ದು ಕಂಪೌಂಡ್‌ ವಾಲ್‌, ಇಂಟರ್‌ಲಾಕ್‌ ನಿರ್ಮಾಣ ಕಾಮಗಾರಿ ಹೆಚ್ಚಿನ ಭಾಗ ಪೂರ್ಣಗೊಂಡಿದೆ. 

ಕೋಡಿ, ಕೋಟೇಶ್ವರ ಬೀಚ್‌
ಕುಂದಾಪುರ ಪೇಟೆಗೆ ಹತ್ತಿರದಲ್ಲೇ ಇರುವ ಕೋಡಿ ಮತ್ತು ಕೋಟೇಶ್ವರ ಬೀಚ್‌ ಅಭಿವೃದ್ಧಿಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಿದೆ.
 
ಬೆಳ್ಕಲ್‌ ತೀರ್ಥ ಜಲಪಾತ
ಕೊಲ್ಲೂರು -ಜಡ್ಕಲ್‌ ಸಮೀಪದ ಬೆಳ್ಕಲ್‌ ತೀರ್ಥ ಜಲಪಾತದಲ್ಲಿ ಸುಮಾರು 500 ಎತ್ತರದಿಂದ ನೀರು ಕೆಳಕ್ಕೆ ಧುಮ್ಮಿಕ್ಕುವ ಸುಂದರ ದೃಶ್ಯವನ್ನು ಕಾಣಬಹುದು. ಆದರೆ ಇಲ್ಲಿಗೆ ಹೋಗುವುದೇ ತ್ರಾಸದಾಯಕ. ಸರಿಯಾದ ದಾರಿಯಿಲ್ಲ. ಕಾಡು ಹಾದಿಯಲ್ಲಿ ಸಂಚರಿಸಬೇಕಾಗಿದೆ. ಇದಲ್ಲದೆ ಮಳೆಗಾಲದಲ್ಲಿ ಹೊಸಂಗಡಿ ಸಮೀಪದ ಇರ್ಕಿಗದ್ದೆ, ಬಾಳೇಬರೆ, ಯಳಜಿತ್‌ ಗ್ರಾಮದ ಕೊರಾತಿಕಲ್ಲು ಗುಡ್ಡದ ತಪ್ಪಲಿನಲ್ಲಿರುವ ಗುಳ್ನಾಡಿ, ಹಕ್ಲುಮನೆ, ಮಂಗನಕಲ್‌ ಜಲಧಾರೆಗಳ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು. 
ದಟ್ಟವಾದ ಅಡವಿಯೊಳಗೆ ಅವಿತುಕೊಂಡಂತಿರುವ ಶಿರೂರು ಗ್ರಾಮದ ಕೂಸಳ್ಳಿ ಜಲಪಾತವು ಆಕರ್ಷಣೀಯವಾಗಿದೆ. 
ಉಡುಪಿ ಜಿಲ್ಲೆಯಲ್ಲಿಯೇ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕೃತಿ ದತ್ತವಾದ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದ್ದು, ಅವುಗಳ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಸಿಕ್ಕರೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. 

Advertisement

ಉದ್ಯೋಗ ಸೃಷ್ಟಿ ಸಾಧ್ಯತೆ
ಅವಿಭಜಿತ ಕುಂದಾಪುರ ತಾಲೂಕಿನ ಬಹುಭಾಗ ಸಮುದ್ರ ತೀರ ಹಾಗೂ ನದಿಗಳೇ ಸುತ್ತಲೂ ಆವರಿಸಿದ್ದು, ಇಲ್ಲಿ ಬೋಟಿಂಗ್‌ಗೆ ವಿಶೇಷ ಬೇಡಿಕೆಯಿದೆ. ಬೋಟಿಂಗ್‌ ಮೂಲಕ ಪ್ರವಾಸಿಗರನ್ನು ಆರ್ಕಷಿಸಬಹುದಾಗಿದೆ. ಕರಾವಳಿ ಖಾದ್ಯ ತಯಾರಿ, ನದಿಯ ಮೂಲಕ ಕುದ್ರುಗಳನ್ನು ಸುತ್ತಾಡಿಸುವುದು ಮೊದಲಾದವುಗಳ ಮೂಲಕ ಇಲ್ಲಿಯವರೆಗೆ ಉದ್ಯೋಗ ಸೃಷ್ಟಿಯು ಆಗುತ್ತದೆ. 

ಮೂಲಸೌಕರ್ಯ ವೃದ್ಧಿಗೆ ಒತ್ತು
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿರುವ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಸರಕಾರದಿಂದ ಈಗಗಾಲೇ ಅನೇಕ ಯೋಜನೆಗಳು ಸಿದ್ಧವಾಗಿದೆ. ಅದರಲ್ಲಿ ಕೆಲವೊಂದು ಈಗಾಗಲೇ ಅನುಷ್ಠಾನಗೊಂಡಿದ್ದು, ಕೆಲವು ಅನುಮೋದನೆ ಹಂತದಲ್ಲಿದೆ. ಮರವಂತೆ, ತ್ರಾಸಿ, ಸೋಮೇಶ್ವರ ಬೀಚ್‌ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು  ಹಾಕಿಕೊಳ್ಳಲಾಗುವುದು.
– ಅನಿತಾ ಬಿ.ಆರ್‌., ಜಿಲ್ಲಾ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next