Advertisement

ಪ್ರವಾಸೋದ್ಯಮ ಅಭಿವೃದ್ಧಿ ಯಾವಾಗ?

04:01 PM Sep 27, 2021 | Team Udayavani |

ಕಲಬುರಗಿ: ಪ್ರವಾಸವನ್ನು ಉದ್ಯಮ ಎನ್ನಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಪ್ರವಾಸಕ್ಕೂ ಹಾಗೂ ಉದ್ಯಮಕ್ಕೂ ಸಂಬಂಧವಿಲ್ಲ ಎನ್ನುವಂತಿದೆ. ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರವಾಸಿ ತಾಣಗಳಿಗೆ ಆ ಭಾಗಕ್ಕೆ ಕಾಲಿಡುತ್ತಿದ್ದಂತೆ ಎಲ್ಲೆಂದರಲ್ಲೂ ಮಾಹಿತಿ ಫ‌ಲಕ ಹಾಗೂ ಉತ್ತಮ ರಸ್ತೆ ಕಂಡು ಬರುತ್ತದೆ. ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳಿಗೆ ಹೋದರೆ ಅಲ್ಲಿ ಉತ್ತಮ ಹೋಟೆಲ್‌ ಹಾಗೂ ವಸತಿ ವ್ಯವಸ್ಥೆ ಕಂಡು ಬರುತ್ತದೆ. ಆದರೆ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಐತಿಹಾಸಿಕ ಸ್ಥಳಗಳ ಒತ್ತಟ್ಟಿಗಿರಲಿ, ಸ್ಥಳಗಳು ಎಲ್ಲಿವೆ? ಎನ್ನುವಂತಹ ದುಸ್ಥಿತಿಯಿದೆ.

Advertisement

ಪ್ರವಾಸೋದ್ಯಮ ಇಲಾಖೆ ದಾಖಲಾತಿಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಹಾಗೂ ಎಷ್ಟು ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿಯಾಗಿದೆ ಹಾಗೂ ಸೌಕರ್ಯಗಳಿವೆ ಎನ್ನಲಾಗುತ್ತದೆ. ಆದರೆ ವಾಸ್ತವವಾಗಿ ನೋಡಿದರೆ ಏನೂ ಇಲ್ಲದಿರುವುದನ್ನು ನಾವು ಪ್ರಮುಖವಾಗಿ ಕಾಣಬಹುದಾಗಿದೆ. ಹೇಳಿಕೆಗೆ ಸಿಮೀತವಾದ ಸಚಿವರ ಹೇಳಿಕೆ: ಶುಕ್ರವಾರ ಮುಕ್ತಾಯಗೊಂಡ ಅಧಿವೇಶನದಲ್ಲೇ ವಿಧಾನ ಪರಿಷತ್‌ ಸದಸ್ಯ ಸುನೀಲ ವಲ್ಲಾಪುರೆ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ ಸೇರಿದಂತೆ ಇತರ ಕಾಮಗಾರಿಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ ಸಚಿವರ ಹೇಳಿದಂತೆ ಒಂದೇರಡು ಸ್ಥಳಗಳಲ್ಲಿ ಬಿಟ್ಟರೆ ಉಳಿದ ಯಾವ ತಾಣದಲ್ಲೂ ಮೂಲಸೌಕರ್ಯ ಕಂಡು ಬರುವುದೇ ಇಲ್ಲ.

ಪ್ರವಾಸೋದ್ಯಮ ಇಲಾಖೆ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಕಲಬುರಗಿ ಮಹಾನಗರದಲ್ಲಿ ಐತಿಹಾಸಿಕ ಬಹುಮನಿ ಕಲಬುರಗಿ ಕೋಟೆ, ಚೋರ ಗುಂಬಜ, ಹಫ¤ ಗುಂಬಜ, ಬುದ್ಧ ವಿಹಾರ, ತಾಲೂಕಿನ ಹೋಳಕುಂದಾ, μರೋಜಾಬಾದ, ಸನ್ನತಿ, ಆಳಂದ ತಾಲೂಕಿನಲ್ಲಿ ನರೋಣಾ, ಅಮರ್ಜಾ ಜಲಾಶಯ, ಹೆಬಳಿ, ಸೇಡಂ ತಾಲೂಕಿನ ಮಳಖೇಡ ಕೋಟೆ, ಮೋತಕಪಲ್ಲಿ, ಯಾನಾಗುಂದಿ, ಬಿಜನಳ್ಳಿ, ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ, ಅಣೆಕಟ್ಟು, ಎತ್ತಿಪೋತ ಜಲಪಾತ, ಪಂಚಲಿಂಗೇಶ್ವರ ಬುಗ್ಗಿ, ಗೊಟ್ಟಂಗೊಟ್ಟ, ಮೋಘಾ, ಜೇವರ್ಗಿ ತಾಲೂಕಿನ ಕುಳಗೇರಿ, ಯಡ್ರಾಮಿ, ರಾಮತೀರ್ಥ, ಚಿತ್ತಾಪುರ ತಾಲೂಕಿನ ಕಾಳಗಿ, ಛಾಯಾ ಭಗವತಿ, ಸನ್ನತಿ, ಕನಗನಹಳ್ಳಿ, ನಾಗಾವಿ, ದಿಗ್ಗಾವಿ, ರಟಕಲ್‌, ಕೋರವಾರ ಪ್ರವಾಸಿ ತಾಣಗಳಾಗಿವೆ. ಆದರೆ ಈ ತಾಣಗಳಿಗೆ ಪ್ರವಾಸಿಗರು ಹೋಗಬೇಕೆಂದರೆ ಸೂಕ್ತ ಮಾಹಿತಿಯೇ ಇಲ್ಲ. ಮುಖ್ಯವಾಗಿ ಈ ತಾಣಗಳಲ್ಲಿ ಮೂಲ ಸೌಕರ್ಯಗಳಿಲ್ಲ. ದಿನಾಚರಣೆಗೆ ಸಿಮೀತ ಇಲಾಖೆ ಸೆ. 27 ವಿಶ್ವ ಪ್ರವಾಸೋದ್ಯಮ ದಿನ. ಈ ದಿನದಂದು ಮಾತ್ರ ಕಾರ್ಯಕ್ರಮವೊಂದನ್ನು ಆಯೋಜಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಇಲಾಖೆ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ.

ವರ್ಷಂಪ್ರತಿ ಪ್ರವಾಸೋದ್ಯಮ ದಿನಕ್ಕೆ ಒಂದು ಘೋಷವಾಕ್ಯ ನೀಡಲಾಗುತ್ತದೆ. ಈ ವರ್ಷ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಸಂದೇಶದಡಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳು ಎಂಬುದಿದೆ. ಈ ಘೋಷ ವಾಕ್ಯವನ್ನು ಇಲಾಖೆ ಕಾರ್ಯರೂಪಕ್ಕೆ ತಂದಲ್ಲಿ ನೂರಾರು ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳು ಬೆಳಕಿಗೆ ಬರುತ್ತವೆ. ಪ್ರಮುಖವಾಗಿ ಜಿಲ್ಲಾ ಪ್ರವಾಸೋದ್ಯಮದಲ್ಲಿ ಅಗತ್ಯ ಸಿಬ್ಬಂದಿಗಳೇ ಇಲ್ಲ. ಜಂಟಿ ನಿರ್ದೇಶಕರು ಹಾಗೂ ಉಪನಿರ್ದೇಶಕರೇ ಇಲ್ಲ. ಪ್ರಭಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದ ಮೇಲೆ ಪ್ರವಾಸಿ ತಾಣಗಳು ಅಭಿವೃದ್ಧಿ ಆಗುವುದು ಹೇಗೆ ಎಂದು ಹವ್ಯಾಸಿ ಪ್ರವಾಸಿಗರು ಪ್ರಶ್ನಿಸುತ್ತಾರೆ. ತೆರವು ಯಾವಾಗ?: ಕಲಬುರಗಿ ಮಹಾನಗರದ ಐತಿಹಾಸಿಕ ಕೋಟೆಯೊಳಗೆ ವಾಸವಾಗಿರುವರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಲಾಗುತ್ತದೆ ಎಂಬುದಾಗಿ ಕಳೆದ ದಶಕಗಳ ಅವಧಿಯಿಂದ ಹೇಳುತ್ತಾ ಬರಲಾಗುತ್ತದೆಯೇ ಹೊರತು ಯಾವುದೇ ಕಾರ್ಯವಾಗುತ್ತಿಲ್ಲ. ಕೋಟೆಯೊಳಗಿನ ಜನರ ತೆರವುಗೊಳಿಸಲು ಮುಂದಾಗುವಂತೆ ಆದೇಶಗಳು ಹೊರಬಿದ್ದರೂ ಕಾರ್ಯಗತವಾಗುತ್ತಲೇ ಇಲ್ಲ.

ಜಿಲ್ಲೆಯ ಪ್ರವಾಸಿ ತಾಣಗಳ ಮೂಲಕ ಸೌಕರ್ಯಕ್ಕಾಗಿ 8 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಮಂಜೂರಾತಿಯಾಗಿ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕಲಬುರಗಿ ಬುದ್ಧ ವಿಹಾರ ಸಮೀಪ ಐದು ಎಕರೆ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಲಾವನ ಸಾಂಸ್ಕೃತಿಕ ಲೋಕ ನಿರ್ಮಿಸಲಾಗುತ್ತಿದೆ.

Advertisement

ಪ್ರಭುಲಿಂಗ ತಳಕೇರಿ, ಡಿಡಿ, ಪ್ರವಾಸೋದ್ಯಮ ಇಲಾಖೆ

ಐತಿಹಾಸಿಕ ತಾಣಗಳ ಸಂರಕ್ಷಣೆ, ಅಭಿವೃದ್ಧಿ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ಜಿಲ್ಲೆಯಲ್ಲಿ ಏನು ಮಾಡುತ್ತಿದೆ ಎಂಬುದು ತಿಳಿಯದಂತಾಗಿದೆ. ಪ್ರವಾಸೋದ್ಯಮ ದ್ವಿಗುಣಗೊಳ್ಳುವ ಬದಲು ಪ್ರಯಾಸವಾಗುತ್ತಿದೆ. ಪ್ರವಾಸಿ ಹೆಲ್ಪ ಡೆಸ್ಕ್ವೂ ಇಲ್ಲ. ವರ್ಷಕ್ಕೊಮ್ಮೆ ಪ್ರವಾಸೋದ್ಯಮ ದಿನಾಚರಣೆಗೆ ಇಲಾಖೆ ಸಿಮೀತವಾಗಿದೆ.

ಬಸವರಾಜ ರಾವೂರ, ಪ್ರವಾಸಿ ಮಾರ್ಗದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next