ನಾವು ಆಗ ಇದ್ದದ್ದು ಒಂದು ತಾಲೂಕು ಕೇಂದ್ರದಲ್ಲಿ. ಅಲ್ಲಿ ಎರಡು ಸಿನೆಮಾ ಟಾಕೀಸುಗಳಿದ್ದವು. ಆಗೆಲ್ಲ ಅತಿ ಮುಖ್ಯ ಮನೋರಂಜನೆ ಎಂದರೆ ಸಿನೆಮಾ ನೋಡುವುದು ಮತ್ತು ಪುಸ್ತಕ ಓದುವುದು. ನಮ್ಮ ಅಪ್ಪ-ಅಮ್ಮ ಇಬ್ಬರೂ ಸಿನೆಮಾ ಪ್ರಿಯರೇ. ವಾರಕ್ಕೆ ಒಂದು ಸಿನೆಮಾ ನೋಡುವುದು ಸಾಮಾನ್ಯವಾಗಿತ್ತು. ಹಾಗಾಗಿ, ನಮಗೂ ಸಿನೆಮಾ ನೋಡುವ ಅವಕಾಶ ಧಾರಾಳವಾಗಿ ಸಿಕ್ಕಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು- ಹೀಗೆ ಭಾಷೆಯ ಭೇದವಿಲ್ಲದೆ ಟಾಕೀಸಿನವರು ತರಿಸುವ ಎಲ್ಲ ಸಿನೆಮಾಗಳನ್ನು ತಪ್ಪದೆ ನೋಡುತ್ತಿದ್ದೆವು. ಮಕ್ಕಳು ನೋಡದಂತಹ ಸಿನೆಮಾಗಳನ್ನು ನಮಗೆ ತೋರಿಸುತ್ತಿರಲಿಲ್ಲ. ಅಂತಹ ಸಿನೆಮಾ ನೋಡಲು ಅವಕಾಶವಿರಲಿಲ್ಲ. ಆಗೆಲ್ಲ ಅಮ್ಮ-ಅಪ್ಪ ಇಬ್ಬರೇ ಸಿನೆಮಾ ನೋಡಲು ಹೊರಡುತ್ತಿದ್ದರು. ನಮಗೆ ಬೇಗ ಊಟ ಮಾಡಿಸಿ ನಮ್ಮನ್ನು ಮಲಗಿಸಿ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಎರಡನೆಯ ಆಟಕ್ಕೆ ಹೋಗಿ ನಮಗೆ ಗೊತ್ತಾಗದಂತೆ ನೋಡಿ ಬಂದು ಬಿಡುತ್ತಿದ್ದರು. ಗೊತ್ತಾದರೂ ನಾವು ಗೊತ್ತಿಲ್ಲದವರಂತೆ ಇದ್ದು ಬಿಡುತ್ತಿದ್ದೆವು. ಏಕೆಂದರೆ, ಅದು ನಾವು ನೋಡುವ ಸಿನೆಮಾ ಅಲ್ಲ. ಹಾಗೆಂದೇ ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂತ ನಮಗೆ ಚೆನ್ನಾಗಿ ಅರ್ಥವಾಗಿತ್ತು.
ಅಲ್ಲಿ ಇದ್ದ ಎರಡು ಟೂರಿಂಗ್ ಟಾಕೀಸುಗಳಲ್ಲಿ ಒಂದು ನಮ್ಮ ಮನೆಯ ಹತ್ತಿರವೇ ಇತ್ತು. ಅದು ನನ್ನ ಗೆಳತಿ ರಾಜೇಶ್ವರಿ ಎಂಬವಳ ತಂದೆಯದ್ದು. ರಾಜೇಶ್ವರಿ ಟಾಕೀಸು ನನ್ನ ಗೆಳತಿಯದ್ದು ಅನ್ನೋ ಹೆಮ್ಮೆ ನನ್ನದು. ಹಿರಿಯ ಮಗಳಾದ ಅವಳ ಹೆಸರನ್ನೇ ಟಾಕೀಸಿಗೆ ಇಟ್ಟಿದ್ದರು. ಪಾಪ ಅವಳಿಗಂತೂ ತಾನು ಟಾಕೀಸಿನ ಒಡತಿ ಅನ್ನೋ ಯಾವ ಬಿಂಕ-ಬಿನ್ನಾಣವೂ ಇಲ್ಲದೆ ಎಲ್ಲರಂತೆ ಸಹಜವಾಗಿರುತ್ತಿದ್ದಳು.ಒಂಚೂರೂ ಜಂಬ ಇರದ ಸೀದಾ ಸಾದಾಸರಳ ಹುಡುಗಿ ನನ್ನ ಗೆಳತಿ.
ಸಿನೆಮಾ ಶುರುವಾಗುವ ಮುನ್ನ ಜನರು ಬರಲೆಂದು ಹಾಡುಗಳನ್ನು ಜೋರಾಗಿ ಹಾಕುತ್ತಿದ್ದರು. ಏಳು ಗಂಟೆಗೆ ಸರಿಯಾಗಿ ಸಿನೆಮಾ ಶುರುವಾಗುತ್ತಿತ್ತು. ಶ್ರೀಕೃಷ್ಣದೇವರಾಯದ ಶ್ರೀಚಾಮುಂಡೇಶ್ವರಿ ಅಮ್ಮಾ ಶ್ರೀಚಾಮುಂಡೇಶ್ವರಿ ಅಂತ ಹಾಡು ಶುರುವಾದ ಕೂಡಲೇ ಸಿನೆಮಾ ಶುರುವಾಗುತ್ತಿತ್ತು. ಆ ಹಾಡಿನ ಮಧ್ಯೆ ರಾಜೇಶ್ವರಿ ಅಂತ ಬಂದ ಕೂಡಲೇ ಆ ಟಾಕೀಸಿನ ಹೆಸರಾದ ರಾಜೇಶ್ವರಿ ಟಾಕೀಸು ಅನ್ನೋ ಸ್ಲೆ„ಡ್ ತೋರಿಸುತ್ತಿದ್ದರು. ಜನ ತರಾತುರಿಯಲ್ಲಿ ಸಿನೆಮಾ ಶುರುವಾಗಿದೆ ಅಂತ ಟಿಕೆಟ್ ತಗೊಂಡು ಒಳಗೆ ನುಗ್ಗುತ್ತಿದ್ದರು. ಅಲ್ಲಿ ಇದ್ದದ್ದು ನೆಲ ಮತ್ತು ಬೆಂಚ್ ಮಾತ್ರ. ನೆಲಕ್ಕೆ ಐವತ್ತು ಪೈಸೆ ಬೆಂಚ್‌ಗಾದರೆ ಒಂದು ರೂಪಾಯಿ. ಮಕ್ಕಳಿಗೆ ಟಿಕೆಟ್ ಇರಲಿಲ್ಲ. ನಾವಂತೂ ಯಾವ ಭಾಷಾಬೇಧವಿಲ್ಲದೆ ವಾರಕ್ಕೊಂದು ಸಿನೆಮಾ ನೋಡುತ್ತಿದ್ದೆವು. ನಾವು ನೋಡುವ ಸಿನೆಮಾಗಳಲ್ಲಿ ಕನ್ನಡ ಸಿನೆಮಾ ಬಿಟ್ಟು ಬೇರೆ ಯಾವ ಭಾಷೆಯ ಸಿನೆಮಾಗಳು ಅರ್ಥವಾಗುತ್ತಿರಲಿಲ್ಲ. ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕಲ್ಲ ಅನ್ನುವ ಆತಂಕದಿಂದ ಮತ್ತು ನಮಗೆ ಟಿಕೆಟ್ ಇಲ್ಲವಾದ್ದರಿಂದ ಅಪ್ಪ-ಅಮ್ಮ ನಮ್ಮನ್ನು ಧಾರಾಳವಾಗಿ ಎಲ್ಲ ಸಿನೆಮಾಗಳಿಗೂ ಕರೆದುಕೊಂಡು ಹೋಗುತ್ತಿದ್ದರು. ನಮಗೆ ಸಿನೆಮಾ ನೋಡುವುದೆಂದರೆ ಖುಷಿಯೋ ಖುಷಿ. ಅರ್ಥವಾಗಲಿ ಬಿಡಲಿ ಹಾಡು, ನೃತ್ಯ, ಹೊಡೆದಾಟ, ಬಡಿದಾಟ ನೋಡಿ ರೋಮಾಂಚನಗೊಳ್ಳುತ್ತಿ¨ªೆವು. ಆಗಲೇ ನಮಗೆ ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಕಲ್ಪನಾ, ಮಂಜುಳಾ, ಆರತಿ, ಭಾರತಿ ಹೀಗೆ ಕನ್ನಡದ ನಟನಟಿಯರೆಲ್ಲರೂ ಗೊತ್ತಿದ್ದರು. ಅಷ್ಟೇ ಅಲ್ಲ , ಹಿಂದಿಯ ಅಮಿತಾಭ್ ಬಚ್ಚನ್, ಹೇಮಾಮಾಲಿನಿ, ರಾಜೇಶ ಖನ್ನಾ, ರೇಖಾ, ತಮಿಳಿನ ಎಂಜಿಆರ್, ಜೆಮಿನಿಗಣೇಶನ್, ಶಿವಾಜಿ ಗಣೇಶನ್, ತೆಲುಗಿನ ರಾಮರಾವ್, ನಾಗೇಶ್ವರ ರಾವ್, ರಂಗರಾವ್, ಸಾವಿತ್ರಿ, ಸರೋಜಾದೇವಿ- ಹೀಗೆ ಆ ಕಾಲದ ಚಿತ್ರರಂಗದ ಘಟಾನುಘಟಿ ನಟ-ನಟಿಯರ ಸಿನೆಮಾ ನೋಡಿ ಅವರನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದೆವು. ಸಿನೆಮಾ ನೋಡುವಾಗ ಅಲ್ಲಿ ನಡೆಯುತ್ತಿದ್ದ ಫೈಟ್‌ಗಳಲ್ಲಿ ನಮ್ಮ ನೆಚ್ಚಿನ ನಾಯಕ ಸೋಲಬಾರದೆಂದು ದೇವರಲ್ಲಿ, “ದೇವರೆ ದೇವರೆ ನಮ್ಮ ನೆಚ್ಚಿನ ನಾಯಕನ್ನೆ ಗೆಲ್ಲಿಸಪ್ಪ’ ಅಂತ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ನಮ್ಮ ನಾಯಕ ವಿಲನ್‌ನನ್ನು ಚೆನ್ನಾಗಿ ಬಡಿದು ಹೆಡೆಮುರಿ ಕಟ್ಟುವಾಗ ನಾವೆ ಗೆದ್ದೆವು ಎಂದು ಬೀಗುತ್ತಿದ್ದೆವು. ದೇವರು ನಮ್ಮ ಪ್ರಾರ್ಥನೆ ಕೇಳಿಯೇ ನಮ್ಮ ನೆಚ್ಚಿನ ನಾಯಕನನ್ನು ಗೆಲ್ಲಿಸಿದ್ದು ಅಂತಾನೇ ನಾವು ಬಹಳ ದಿನಗಳ ತನಕ ನಂಬಿದ್ದೆವು. ಅಷ್ಟೊಂದು ಮುಗ್ಧತೆ ನಮ್ಮದು. ಆ ಸಿನೆಮಾದ ನಿರ್ದೇಶಕರುಗಳೇ ಆ ನಾಯಕರನ್ನು ಗೆಲ್ಲಿಸುತ್ತಿದ್ದದ್ದು ಅಂತ ನಮಗೆ ತಿಳಿದಿರಲೇ ಇಲ್ಲ.
ಎಡಕಲ್ಲು ಗುಡ್ಡದ ಮೇಲೆ ಸಿನೆಮಾ ನಮ್ಮೂರಿನ ಟಾಕೀಸಿಗೆ ಬಂದಾಗ ಅದನ್ನು ನೋಡಲು ಕಾತುರದಿಂದ ಕಾಯುತ್ತಿ¨ªೆ. ಆದರೆ ನನಗೆ ನಿರಾಶೆ ಕಾದಿತ್ತು. ಅಮ್ಮ-ಅಪ್ಪ ಇಬ್ಬರೇ ಒಂದು ರಾತ್ರಿ ನಮ್ಮನ್ನು ಬಿಟ್ಟು ಸಿನೆಮಾ ನೋಡಲು ಹೋದಾಗ ನನಗೆ ದುಃಖ ವಾಗಿತ್ತು.
ಅಲ್ಲಿಗೆ ಆ ಸಿನೆಮಾವನ್ನು ಮಕ್ಕಳು ನೋಡುವಂತಿಲ್ಲ ಅಂತ ಅರ್ಥವಾಗಿತ್ತು. ಆದರೆ ಆ ಸಿನೆಮಾ ನೋಡುವ ಅವಕಾಶ ನನ್ನ ಗೆಳತಿಯಿಂದ ನನಗೆ ಸಿಕ್ಕಿತ್ತು. ಒಂದು ಭಾನುವಾರ ನನ್ನ ಗೆಳತಿ ರಾಜೇಶ್ವರಿ ಮತ್ತು ನಾನು ಆಟವಾಡಲು ಟಾಕೀಸಿಗೆ ಹೋಗಿದ್ದೆವು. ಆಗೆಲ್ಲ ರಾತ್ರಿ ಶೋಗಳು ಮಾತ್ರ ನಡೆಯುತ್ತಿದ್ದವು. ಬೆಳಗ್ಗೆ ಟಾಕೀಸು ಖಾಲಿ ಇರುತ್ತಿತ್ತು. ಹಾಗಾಗಿ, ರಜಾದಿನಗಳಲ್ಲಿ ಗೆಳತಿಯೊಂದಿಗೆ ಆಟವಾಡಲು ಅವಕಾಶವಿತ್ತು. ಹಾಗೆ ಆಟವಾಡುವಾಗ ಟಾಕೀಸಿನವರು ಟ್ರಯಲ್ ನೋಡಲೆಂದು ಎಡಕಲ್ಲು ಗುಡ್ಡದ ಮೇಲೆ ಸಿನೆಮಾ ಹಾಕಿದ್ದಾರೆ. ನಾನು ಆಟವಾಡುವುದನ್ನು ಬಿಟ್ಟು ಸಿನೆಮಾ ನೋಡಲು ಕುಳಿತು ಬಿಟ್ಟೆ. ಸಿನೆಮಾ ಪ್ರಾರಂಭದಲ್ಲಿಯೇ ವಿರಹ ನೂರು ನೂರು ತರಹ ಅನ್ನೋ ಹಾಡು. ಅಭಿನಯ ಶಾರದೆ ಜಯಂತಿ ಉಯ್ನಾಲೆಯಲ್ಲಿ ತೂಗಿಕೊಳ್ಳುತ್ತ ಹಾಡಿಕೊಳ್ಳುವ ಹಾಡು. ಮಧುರವಾಗಿತ್ತು. ಆದರೆ, ವಿರಹ ಪದದ ಅರ್ಥ ಮಾತ್ರ ಆಗ ಗೊತ್ತಿರಲಿಲ್ಲ. ಹಾಡು ಮುಗಿದ ಸ್ವಲ್ಪ ಹೊತ್ತಿಗೆ ಸಿನೆಮಾ ನಿಲ್ಲಿಸಿ ಬಿಟ್ಟರು. ನಿರಾಸೆಯಿಂದ ಬೇಸರ ಪಟ್ಟುಕೊಂಡು ಗೆಳತಿಗೆ ಹೇಳಿ ಪೂರ್ತಿ ಸಿನೆಮಾ ಹಾಕಲು ವಿನಂತಿಸಿಕೊಂಡೆ. ಆಗ ಗೆಳತಿ ರಾಜೇಶ್ವರಿ, ಕೆಲಸದವರಿಗೆ ಹೇಳಿ ಪೂರ್ತಿ ಸಿನೆಮಾ ಹಾಕಿಸಿ ನನ್ನೊಂದಿಗೆ ತಾನೂ ಕುಳಿತು ಸಿನೆಮಾ ನೋಡಿದ್ದಳು. ಏನಿದೆ ಈ ಸಿನೆಮಾದಲ್ಲಿ ನಾವು ನೋಡದೆ ಇರುವಂತಹದ್ದು ಅಂತ ಕೊನೆಯವರೆಗೂ ನನಗೆ ಅರ್ಥವಾಗಲಿಲ್ಲ. ಇನ್ನೇನು ಸಿನೆಮಾ ಮುಗಿಯಬೇಕು ಅನ್ನುವಷ್ಟರಲ್ಲಿ ಅಣ್ಣ ನನ್ನನ್ನು ಹುಡುಕಿಕೊಂಡು ಬಂದಿದ್ದ. ಬೆಳಗ್ಗೆ ಹೋದವಳು ಇನ್ನೂ ಮನೆಗೇ ಬಂದಿಲ್ಲ ಊಟನೂ ಮಾಡಿಲ್ಲ ಅನ್ನೋ ಆತಂಕದಿಂದ ಅಮ್ಮ ನನ್ನನ್ನು ಕರೆದುಕೊಂಡು ಬರಲು ನನ್ನ ಅಣ್ಣನನ್ನು ಕಳಿಸಿದ್ದರು. ನಮ್ಮಣ್ಣ ಮೊದಲೇ ಕಿತಾಪತಿ ಕೆಂಚ ! ಸಿನೆಮಾ ನೋಡುತ್ತಿದ್ದ ನನ್ನನ್ನು ನೋಡಿದ ಮೇಲೆ ಕೇಳಬೇಕೆ! ನಾನು ಮತ್ತು ನನ್ನ ಗೆಳತಿ ಇಡೀ ಟಾಕೀಸಿಗೆ ಇಬ್ಬರೇ ಕುಳಿತು ಸಿನೆಮಾ ನೋಡುತ್ತಿದ್ದುದನ್ನು ಅಮ್ಮನಿಗೆ ಹೇಳಿಯೇ ಬಿಟ್ಟ. ಆಮೇಲೆ ನನಗೆ ಅಮ್ಮನಿಂದ ಚೆನ್ನಾಗಿ ಪೂಜೆ ಆಯಿತು. ಅಂದಿನಿಂದ ಟಾಕೀಸಿನಲ್ಲಿ ಆಡಲು ಹೋಗುವುದು ಬಂದ್!
ಮುಂದೆ ಅಪ್ಪನಿಗೆ ಜಿಲ್ಲಾ ಕೇಂದ್ರಕ್ಕೆ ವರ್ಗವಾಯಿತು. ನಾನು ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಬರಬೇಕಾಯ್ತು. ಗೆಳತಿಯರನ್ನೂ ಬಿಟ್ಟು ಬಂದಾಯ್ತು. ಒಂದಷ್ಟು ದಿನ ಪತ್ರಗಳ ಸಂಪರ್ಕವಿತ್ತು. ನಿಧಾನವಾಗಿ ಅದೂ ಕೂಡ ನಿಂತು ಹೋಯಿತು. ಈಗ ರಾಜೇಶ್ವರಿ ಟಾಕೀಸಿನ ಒಡತಿ ಎಲ್ಲಿದ್ದಾಳ್ಳೋ ಹೇಗಿದ್ದಾಳೊ! ನನ್ನ ನೆನಪಾದರೂ ಇದೆಯೋ ಇಲ್ಲವೋ. ಈಗ ಅಲ್ಲಿ ಟೂರಿಂಗ್ ಟಾಕೀಸುಗಳೇ ಇಲ್ಲ ಅಂತ ತಿಳಿದು ಬಂತು. ಚುನಾವಣೆಯ ಕೆಲಸದ ಮೇಲೆ ಆ ಊರಿಗೆ ಹೋದಾಗ ಟಾಕೀಸು ಇದ್ದ ಜಾಗ ನೋಡಿದೆ. ಅಲ್ಲಿ ಈಗ ಮನೆಗಳು ಆಗಿವೆ. ಟಾಕೀಸು ಅಲ್ಲಿ ಇಲ್ಲವಾದರೂ ಟಾಕೀಸಿನ ಸವಿನೆನಪು ಮಾತ್ರ ಉಳಿದೇ ಇದೆ.
ಎನ್. ಶೈಲಜಾ ಹಾಸನ್