Advertisement

ಪ್ರವಾಸ ಪ್ರವರ  

06:00 AM Oct 28, 2018 | |

ನಮ್ಮ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು  ಎಂಬುದನ್ನು  “ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನ  ಮೂಲಕ ನಮ್ಮ ಹಿರಿಯರು ಬೋಧಿಸಿದ್ದಾರೆ. ಹಿಂದಿನ ಕಾಲದಲ್ಲಿ ದೇಶ ಸುತ್ತುವ ಮುಖ್ಯ ಉದ್ದೇಶ  ತೀರ್ಥಯಾತ್ರೆ ಆಗಿತ್ತು. ಬಾಲ್ಯ, ಯೌವನ ಕಳೆದು ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನೂ ನಿರ್ವಹಿಸಿ ಜೀವನ ಪಕ್ವವಾದ ಮೇಲೆ ದೇಶದುದ್ದಕ್ಕೂ ಪ್ರಯಾಣಿಸಿ ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿಕೊಟ್ಟು ಸಾರ್ಥಕತೆಯನ್ನು ಅನುಭವಿಸುತ್ತಿದ್ದರು. ಆ ದಿನಗಳ ಯಾತ್ರೆಗಳಲ್ಲಿ, ಮಾರ್ಗ ಮಧ್ಯೆ ಕುದುರೆ, ದೋಣಿ, ಬಸ್ಸು, ರೈಲು ಮೊದಲಾದ ಸ್ಥಳೀಯ ಸಾರಿಗೆ ಲಭಿಸಿದರೆ ಸರಿ, ಇಲ್ಲವಾದರೆ, ತಿಂಗಳಾನುಗಟ್ಟಲೆ ಕಾಲ್ನಡಿಗೆಯ ಮೂಲಕ ದೇಶದ ಉದ್ದಗಲ ಸಂಚರಿಸಿದವರೂ ಇದ್ದರು. ಸಂಜೆ ಸಮಯ ಯಾವ ಊರಿಗೆ ತಲಪಿದರೋ ಆ ಊರಲ್ಲಿ ವಿಶ್ರಾಂತಿ ಪಡೆಯಲು ಊಟ-ವಸತಿಗೆ ಯಾವುದಾದರೂ ಛತ್ರವನ್ನೋ ದೇವಾಲಯವನ್ನೋ ಆಶ್ರಯಿಸುತ್ತಿದ್ದರು. ಪುಣ್ಯಕಾರ್ಯವೆಂದು, ಅಪರಿಚಿತ ಯಾತ್ರಿಕರಿಗೂ ತಮ್ಮ ಮನೆಯಲ್ಲಿ ಆದರಿಸಿ ವಿಶ್ರಾಂತಿಗೆ ಅನುವು ಮಾಡಿಕೊಡುವ ಗೃಹಸ್ಥರೂ ಬಹಳಷ್ಟು ಮಂದಿ ಇದ್ದರು. ಕಾಶಿ, ಪ್ರಯಾಗ ಇತ್ಯಾದಿ ದೂರದಲ್ಲಿರುವ ಕ್ಷೇತ್ರಗಳಿಗೆ ಹೊರಟವರು ಬದುಕಿ ಬಾರದಿರುವ ಸಾಧ್ಯತೆಯೂ ಇತ್ತು.

Advertisement

ಇಂದು ಬದಲಾದ ಕಾಲಘಟ್ಟ. ಪ್ರವಾಸದ ಕಾರಣ ಹಾಗೂ ಆಯಾಮಗಳು ದಶದಿಕ್ಕುಗಳಲ್ಲಿಯೂ ವ್ಯಾಪಿಸಿವೆ.  ವಿದೇಶದಲ್ಲಿರುವ ಗರ್ಭಿಣಿ ಹೆಣ್ಣು ಮಗಳು ಹೆರಿಗೆಗೆಂದು ತನ್ನ  ತವರಿಗೆ ಬರುವ ಮೂಲಕ ಗರ್ಭಸ್ಥ ಶಿಶುವಿನಿಂದಲೇ  ಖಂಡಾಂತರಗಳ ಪ್ರವಾಸ ಆರಂಭವಾಗುವುದೂ ಇದೆ. ಆಮೇಲೆ  ಶಾಲಾದಿನಗಳ ಶೈಕ್ಷಣಿಕ ಪ್ರವಾಸ, ನೆಂಟರಿಷ್ಟರ ಮನೆಗೆ ಪ್ರಯಾಣ, ವಿಧ್ಯಾಭ್ಯಾಸ ನಿಮಿತ್ತ ದೂರದ ಕಾಲೇಜಿಗೆ ಸ್ಥಳಾಂತರ, ಉದ್ಯೋಗದ ಅಗತ್ಯವಾಗಿ ಮತ್ತಷ್ಟು  ದೇಶ ಸಂಚಾರ, ಮದುವೆ-ಹನಿಮೂನ್‌  ಸುತ್ತಾಟ,  ಮನೋರಂಜನೆಗೆಂದು ಆಗಾಗ ಪ್ರಯಾಣ ಇತ್ಯಾದಿ ಪ್ರವಾಸಗಳು  ಸಾಮಾನ್ಯವಾಗಿವೆ. ಕೆಲವರು ಪ್ರಕೃತಿ ವೀಕ್ಷಣೆ,  ಚಾರಣ, ಸಾಹಸ ಕ್ರೀಡೆ ಇತ್ಯಾದಿ ಹವ್ಯಾಸಗಳನ್ನು ಹಮ್ಮಿಕೊಂಡು  ಕಾಡುಮೇಡು ಹಿಮಪರ್ವತ, ಸಾಗರದಾಳದಲ್ಲಿ ಅಲೆದಾಡುತ್ತಾರೆ, ಆಸ್ತಿಕರು ಪುಣ್ಯ ಸಂಪಾದನೆಗಾಗಿ ತೀರ್ಥಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಆಯಾ ಋತುವಿಗೆ ತಕ್ಕಂತೆ ವಿಶೇಷ ಪ್ರವಾಸ, ಗತವೈಭವದ ಅಥವಾ ಕರಾಳ ದಿನಗಳ ಐತಿಹ್ಯವುಳ್ಳ ಜಾಗಗಳಿಗೆ ಪ್ರವಾಸ, ದೇಶದ ಗಡಿಭಾಗಗಳಿಗೆ ಪ್ರವಾಸ , ಸಾಂಸ್ಕೃತಿಕ ಪ್ರವಾಸ, ಕೌಟುಂಬಿಕ ಪ್ರವಾಸ, ಏಕಾಂಗಿ ಪ್ರವಾಸ , ಏಕತಾನತೆಯನ್ನು ಮುರಿಯಲು ಪ್ರವಾಸ, ವಾರಾಂತ್ಯದ ಪ್ರವಾಸ… ಹೀಗೆ ಜೀವನದ ಪ್ರತಿ ಹಂತದಲ್ಲಿಯೂ  ಆಸಕ್ತಿ ಉಳ್ಳವರಿಗೆ ಪ್ರವಾಸಕ್ಕೆ ಕಾರಣಗಳು ನೂರಾರು. 

ಇಂದಿನ ದಿನಗಳಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಬಲು ಸುಲಭ. ಕಂಪ್ಯೂಟರ್‌ ಅಥವಾ  ಮೊಬೈಲ್‌  ಫೋನ್‌ನಲ್ಲಿ  ಅಂತರ್ಜಾಲ ಸಂಪರ್ಕವಿದ್ದರೆ ಸಾಕು. ಹೋಗಬೇಕಾದ ಪ್ರವಾಸಿ ಸ್ಥಳದ ಬಗ್ಗೆ ಮಾಹಿತಿ, ಪ್ರವಾಸಕ್ಕೆ ತಗಲುವ ಅಂದಾಜು  ಖರ್ಚುವೆಚ್ಚ, ಹವಾಮಾನ, ಊಟ ವಸತಿಯ ಏರ್ಪಾಡು, ಟಿಕೆಟ್‌, ಅಗತ್ಯವಿದ್ದಲ್ಲಿ ಪಾಸ್‌ ಪೋರ್ಟ್‌,  ವೀಸಾ ಇತ್ಯಾದಿಗಳನ್ನು ಖು¨ªಾಗಿ ಮಾಡಬಹುದು.   ಹೆಚ್ಚಿನ ನಗರಗಳಲ್ಲಿ ಟೂರಿಸ್ಟ್‌ ಏಜೆಂಟ್‌ ಗಳಿರುತ್ತಾರೆ. ನಗರಗಳ ಬಸ್‌ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಲ್ಲಿಯೂ  ಸ್ಥಳೀಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ದೊರೆಯುತ್ತಿದೆ. ಒಟ್ಟಿನಲ್ಲಿ  ತಕ್ಕಷ್ಟು ಹಣ, ಆರೋಗ್ಯ ಹಾಗೂ ಸಮಯವಿದ್ದರೆ ಈ ದಿನಗಳಲ್ಲಿ ಪ್ರವಾಸ ಮಾಡುವುದು ಸುಲಭ. 
        
ಹೇಮಾಮಾಲಾ ಬಿ.

Advertisement

Udayavani is now on Telegram. Click here to join our channel and stay updated with the latest news.

Next