ಬೀಳಗಿ (ಬಾಗಲಕೋಟೆ): ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕೆಂದು ಸಂಕಲ್ಪಿಸಿ ತಾಲೂಕಿನ ತೋಳಮಟ್ಟಿ ರೈತ ಮೂರು ದಿನಗಳಿಂದ ಅನ್ನ, ನೀರು ತ್ಯಜಿಸಿ ಕಠೊರ ಮೌನಾನುಷ್ಠಾನ ಕೈಗೊಂಡಿದ್ದಾರೆ. ತೋಳಮಟ್ಟಿ ಗ್ರಾಮದ ಮಲ್ಲಪ್ಪ ಅಪ್ಪಣ್ಣ ಭಾವಿ (75) ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮೌನಾನುಷ್ಠಾನ ಕೈಗೊಂಡಿದ್ದಾರೆ. ಹಿಂದೆ ಘಟಪ್ರಭಾ ಎಡದಂಡೆ ಕಾಲುವೆಗೆ ಟೆಲೆಂಡ್‌ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಮೂರು ದಿನ ಒಂಟಿ ಕಾಲಿನ ಮೇಲೆ ನಿಂತು ಕಠಿಣ ಹೋರಾಟ ಮಾಡಿದ್ದರು. ಕಬ್ಬಿಗೆ ದರ ನಿಗದಿಗೊಳಿಸಬೇಕೆಂದು ಒತ್ತಾಯಿಸಿ 23 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇವರನ್ನು ರೈತಪರ ಧ್ವನಿಯಾಗಿ ಜನ ಗುರುತಿಸುತ್ತಾರೆ. ರೈತಸಂಘದಲ್ಲಿನ ಸೇವೆ ಇವರಲ್ಲಿ ಹೋರಾಟದ ಕಿಚ್ಚು ತುಂಬಿದೆ. ಮಲ್ಲಪ್ಪ ಭಾವಿ, ಮಲ್ಲಿಕಾರ್ಜುನ ಸ್ವಾಮಿಯ ಪರಮಭಕ್ತ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು. ದೇಶದಲ್ಲಿ ಸಮೃದ್ಧವಾದ ಮಳೆ, ಬೆಳೆ ಬರಬೇಕು, ವಿಶ್ವ ಶಾಂತಿ ನೆಲೆಸಬೇಕೆಂದು ಕಠಿಣ ಮೌನಾನುಷ್ಠಾನ ಆರಂಭಿಸಿದ್ದಾರೆ. ಅವರ ಆರೋಗ್ಯದ ಮೇಲೆ ಸ್ಥಳೀಯರು ನಿಗಾ ಇಟ್ಟಿದ್ದಾರೆ.
● ರವೀಂದ್ರ ಕಣವಿ