ಗದಗ: ಮದುವೆ ಸಮಾರಂಭಗಳಿಗೆ ಸರ್ಕಾರ ನಿಗದಿಪಡಿಸಿದ ಸಂಖ್ಯೆಗಿಂತ ಅಧಿಕ ಜನ ಸೇರಿದರೆ ವಧು-ವರ, ಪಾಲಕರು ಮತ್ತು ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಎಚ್ಚರಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ತಾಲೂಕಿನ ಕಲ್ಯಾಣ ಮಂಟಪ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮದುವೆ ಸಮಾರಂಭಗಳಿಗೆ ಪೂರ್ವಾನುಮತಿ ಪಡೆದು, ನಿಯಮಾನುಸಾರ ಅವಕಾಶವಿರುವಂತೆ ತೆರೆದ ಪ್ರದೇಶಗಳಲ್ಲಿ 200 ಜನ ಹಾಗೂ ಸಭಾಂಗಣ, ಒಳಾಂಗಣಗಳಲ್ಲಿ 100 ಜನರಿಗೆ ಮೀರದಂತೆ ಮಾತ್ರ ಜನರು ಭಾಗವಹಿಸಬಹುದು. ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಜಾತ್ರೆ, ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ ಎಂದರು.
ಸರ್ಕಾರದ ಮಾರ್ಗಸೂಚಿಗಳನ್ನು ಪ್ರಚುರ ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ನಿಯಮ ಪಾಲಿಸದವರಿಗೆ ದಂಡ ವಿಧಿಸುವ ಕ್ರಮ ಅನುಸರಿಸಲಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯ ಸಾರ್ವಜನಿಕರು ಕೋವಿಡ್ ಸಾಂಕ್ರಾಮಿಕ ರೋಗದ ಗಂಭೀರತೆ ಅರ್ಥ ಮಾಡಿಕೊಂಡು ಸರ್ಕಾರ ನೀಡಿರುವ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸೋಂಕು ನಿಯಂತ್ರಣ ಮಾಡುವಲ್ಲಿ ಸಹಕಾರ ನೀಡಬೇಕು. ಕೋವಿಡ್ ಸೋಂಕಿನ 2ನೇ ಅಲೆಯು ಹೆಚ್ಚು ಬೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ತಗಲುತ್ತಿದೆ. ಸಾರ್ವಜನಿಕರು ಉದಾಸೀನತೆ ಹಾಗೂ ನಿರ್ಲಕ್ಷÂ ತೋರದೇ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಕನಿಷ್ಠ ಸಾಮಾಜಿಕ ಅಂತರ ಕಾಪಾಡಬೇಕು. ಆಗಾಗ ಸೋಪಿನಿಂದ ಕೈತೊಳೆದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು. ಇವುಗಳ ಪಾಲನೆಯಿಂದ ಮಾತ್ರ ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಬಹುದಾಗಿದೆ. ಕೋವಿಡ್ ವೈರಸ್‌ನಿಂದ ಸುರಕ್ಷಿತವಾಗಿ ಇದ್ದು, ಜೀವಹಾನಿ ತಡೆಯಬಹುದಾಗಿದೆ ಎಂದು ತಿಳಿಸಿದರು.
ಸಿಪಿಐ ಪಿ.ವಿ. ಸಾಲಿಮಠ ಮಾತನಾಡಿ, ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹೊರಡಿಸಿರುವ ಆದೇಶಕ್ಕನುಗುಣವಾಗಿ ಮಾತ್ರ ಸಾಮಾಜಿಕ ಆಚರಣೆ, ಸಮಾರಂಭ, ಮದುವೆ ಇತರೆ ಸಮಾರಂಭ ಏರ್ಪಡಿಸಲು ಷರತ್ತು ಬದ್ಧ ಅವಕಾಶವಿದೆ. ನಿಯಮಗಳನ್ನು ಉಲ್ಲಂಘಿ ಸಿದರೆ ಪ್ರಕರಣ ದಾಖಲಿಸಿಕೊಂಡು ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಅನ್ವಯವಾಗಬಹುದಾದ ಇತರ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು. ಜನತೆ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು. ತಾಲೂಕಿನ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಗ್ರಾಮೀಣ ಠಾಣೆ ಹಾಗೂ ಬೆಟಗೇರಿ ಠಾಣೆ ವೃತ್ತ ನಿರೀಕ್ಷಕರು, ಕಲ್ಯಾಣ ಮಂಟಪದ ಮಾಲೀಕರು, ವ್ಯವಸ್ಥಾಪಕರು ಇದ್ದರು.