ವಿಧಾನಸಭೆ: ಬೆಂಗಳೂರು ಸೇರಿ ರಾಜ್ಯಾದ್ಯಂತ ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ನಿಗ್ರಹಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲಾ-ಕಾಲೇಜುಗಳ ಬಳಿ ಗಾಂಜಾ ಸೇರಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಪೊಲೀಸ್ ಇಲಾಖೆಗೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.
ಸಾರ್ವಜನಿಕರು ಸಹ ಗಾಂಜಾ ಅಥವಾ ಮಾದಕ ವಸ್ತು ಮಾರಾಟ ಕುರಿತು ಮಾಹಿತಿ ಗೊತ್ತಿದ್ದರೆ ನೇರವಾಗಿ 155260 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು. ಬಿಜೆಪಿಯ ಸುರೇಶ್‌ಕುಮಾರ್, ಮಾದಕ ವಸ್ತುಗಳ ಮಾರಾಟ ವಿಚಾರ ಗಂಭೀರವಾದುದು. ನಮ್ಮ ಯುವಶಕ್ತಿಯನ್ನು ಕೊಲ್ಲುತ್ತಿದೆ. ಇದು ದೇಶದ್ರೋಹದ ಕೆಲಸ ಸಹ. ಇದರ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್‌ನ ಶಿವಲಿಂಗೇಗೌಡ ಅವರ ಮತ್ತೂಂದು ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿಯರನ್ನು ಗುರುತಿಸಿ 103 ಪ್ರಕರಣ ದಾಖಲಿಸಿ 369 ಜನರನ್ನು ಬಂಧಿಸಲಾಗಿದೆ. ಇದರಲ್ಲಿ 53 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ಹೇಳಿದರು.
2008ರಿಂದ ಇಲ್ಲಿಯವರೆಗೆ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ನಕಲಿ ದಾಖಲಾತಿ ಸೃಷ್ಟಿಸಿಕೊಂಡಿರುವುದು ಪತ್ತೆ ಮಾಡಿದ್ದು 6 ಪ್ರಕರಣಗಳು ದಾಖಲಾಗಿರುತ್ತವೆ. ಇದರಲ್ಲಿ 17 ಜನರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.