ಸಾಗರ: ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿಲ್ಲ. ಒಂದೊಮ್ಮೆ ಅಂತಹ ವ್ಯಕ್ತಿಗಳು, ಸಂಘಟನೆಗಳು ಇದ್ದಲ್ಲಿ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ತಿಳಿಸಿದರು.
ನಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರಿಕರ ಬೀಟ್ ಸದಸ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಹಿಂದೆ ಹಾಕಿದ್ದ ಸಿಸಿ ಕ್ಯಾಮೆರಾ ಹಾಳಾಗಿದ್ದು, ದಾನಿಗಳ ಸಹಕಾರದಿಂದ ಹೊಸ ಸಿಸಿ ಕ್ಯಾಮೆರಾ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಾಗರದ ಜನರು ಶಾಂತಿಪ್ರಿಯರು. ಪೊಲೀಸ್ ಇಲಾಖೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರ ನೀಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಪೊಲೀಸ್ ಇಲಾಖೆ ಸದಾ ಸ್ಪಂದಿಸುತ್ತದೆ. ನಗರದ ಇಂದಿರಾ ಗಾಂಧಿ ಕಾಲೇಜು ರಸ್ತೆಯಲ್ಲಿರುವ ಪರವಾನಗಿ ಇಲ್ಲದೆ ನಡೆಯುತ್ತಿರುವ ಗೂಡಂಗಡಿಯನ್ನು ತಕ್ಷಣ ತೆರವುಗೊಳಿಸುವಂತೆ ನಗರಸಭೆ ಅಧ್ಯಕ್ಷರಿಗೆ ಎಸ್‌ಪಿ
ಸೂಚನೆ ನೀಡಿದರು.
ಜೋಗ ಜಲಪಾತ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಸಿಗರು ಅಪಘಾತ, ಜಲಪಾತದಿಂದ ಬಿದ್ದು ಮೃತಪಟ್ಟಾಗ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಗಡಿ ಎನ್ನುವ ಚರ್ಚೆಗೆ ಪೊಲೀಸರು ಆದ್ಯತೆ ನೀಡಬೇಡಿ. ಮೊದಲು ಪ್ರಕರಣ ದಾಖಲಿಸಿ, ನಂತರ ಪ್ರಕರಣ ನಮ್ಮ ಜಿಲ್ಲೆಗೆ ಸಂಬಂಧ ಪಡದೆ ಇದ್ದಲ್ಲಿ ವರ್ಗಾಯಿಸಲು ಸಾಧ್ಯವಿದೆ. ಶಾಲಾ-ಕಾಲೇಜು ಬಿಡುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎರಡು ಪಿಸಿಆರ್ ವಾಹನವನ್ನು ಗಸ್ತಿಗೆ ಬಿಡಲು ಜಿಲ್ಲಾ ಪೊಲೀಸ್
ವರಿಷ್ಠಾ ಧಿಕಾರಿಗಳು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪರಿಮಳ, ಹೆಚ್ಚುತ್ತಿರುವ ಮಟ್ಕಾ, ಓಸಿ, ಅಕ್ರಮ ಚಟುವಟಿಕೆ ಬಗ್ಗೆ ಕ್ರಮ ಕೈಗೊಳ್ಳಿ. ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ನಗರಸಭಾ ಸದಸ್ಯ ಎಸ್. ಎಲ್. ಮಂಜುನಾಥ್, ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಟ್ರಾಫಿಕ್ ಹಾಗೂ ಮಹಿಳಾ ಪೊಲೀಸ್ ಠಾಣೆ ಅಗತ್ಯವಿದೆ. ಇದನ್ನು ತಕ್ಷಣ ತೆರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಟಿಪ್ಪು ಸಹರಾ ಯುವಜನ ಸಂಘದ ಸೈಯದ್ ಜಮೀಲ್ ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಅಲ್ಪಸಂಖ್ಯಾತರು ದೂರು ನೀಡಿದರೆ ತಕ್ಷಣ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.ನಗರಸಭಾ ಸದಸ್ಯ ಆರ್. ಶ್ರೀನಿವಾಸ್ ಮಾತನಾಡಿ, ನಗರದ ಹೊರಭಾಗದಲ್ಲಿರುವ ಒಂಟಿ ಮನೆಗಳಲ್ಲಿ ಕಳ್ಳತನ ಪ್ರಕರಣ ಜಾಸ್ತಿಯಾಗುತ್ತಿದೆ.
ಈತನಕ ಒಂದು ಪ್ರಕರಣ ಪತ್ತೆಯಾಗಿಲ್ಲ. ತಕ್ಷಣ ಕಳ್ಳರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದರು. ನಗರಸಭೆ ಅಧ್ಯಕ್ಷೆ
ಉಷಾ ಎನ್., ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್, ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್. ಜನಾರ್ದನ್ ಇದ್ದರು.