ಬೃಹತ್ ಸೆಟ್, ಅದರೊಳಗೆ ಅಡಕವಾಗಿರುವ ಎಲ್ಇಡಿ ಪರದೆ. ವಿಭಿನ್ನ ಆಕಾರದ ವೇದಿಕೆಯಲ್ಲಿ ಜಗ್ಗೇಶ್. ಒಂದೇ ಕಾರ್ಯಕ್ರಮದಲ್ಲಿ ಒಂದಾದ ನಾನಾ ದೇಶಗಳ ಕನ್ನಡ ಮನಸ್ಸುಗಳು… ಇವೆಲ್ಲವೂ “ತೋತಾಪುರಿ’ ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮದ ಹೈಲೈಟ್.
ಭರ್ತಿ ಮೂರೂವರೆ ತಾಸು ನಡೆದ ಕಾರ್ಯಕ್ರಮದಲ್ಲಿ ಜಗ್ಗೇಶ್ ಸಿನಿ ಜೀವನ ಯಾನ, ಅವರ ಕುಟುಂಬ, ಕನ್ನಡ ಭಾಷೆ, ಹೋರಾಟ, ಡಾ.ರಾಜ್‌ಕುಮಾರ್ ಅವರೊಂದಿಗಿನ ಒಡನಾಟ, ಪುನೀತ್ ಅವರೊಟ್ಟಿಗೆ ಸಾಗಿದ ದಿನಗಳ ಮೆಲುಕು ಹಾಕಿದರು ನವರಸ ನಾಯಕ ಜಗ್ಗೇಶ್.
“ತೋತಾಪುರಿ’ ಚಿತ್ರದ “ಬಾಗ್ಲು ತೆಗಿ ಮೈರಿ ಜಾನ್’ ಮಿಲಿಯನ್‌ಗಟ್ಟಲೇ ಹಿಟ್ಸ್ ದಾಖಲಿಸಿರುವ ಖುಷಿಗಾಗಿ ವಿದೇಶಿ ಕನ್ನಡಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಗ್ಗೇಶ್ ಮನಬಿಚ್ಚಿ ಮಾತನಾಡಿದರು. ತಮ್ಮ ಬಾಲ್ಯ, ದಾಂಪತ್ಯ ಜೀವನ, ಸಿನಿ ಯಾನ ಹಾಗೂ ತೋತಾಪುರಿ ಸಿನಿಮಾದ ಕೆಲವೊಂದು ಸನ್ನಿವೇಶಗಳನ್ನು ಹಂಚಿಕೊಂಡರು. ಕೆನಡಾದ “ಡ್ರೀಮ್ಸ್ ಮೀಡಿಯಾ’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಶನ್, ಹ್ಯಾರಿಸºರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾ ಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ಜಗ್ಗೇಶ್ ಅವರೊಟ್ಟಿಗೆ ಮಾತುಕತೆ ನಡೆಸಿದರು.
ಇದನ್ನೂ ಓದಿ:ಸರ್ಕಾರದ ತಿದ್ದುಪಡಿ ಕಾಯ್ದೆ ರದ್ದು; ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾನೆ
ಭಾನುವಾರ ಬೆಳಗ್ಗೆ 8 ಗಂಟೆಗೆ ಶುರುವಾದ ಈ ಕಾರ್ಯಕ್ರಮ ಸತತವಾಗಿ 11.30ರವರೆಗೂ ನಡೆಯಿತು. ಅನಿವಾಸಿ ಕನ್ನಡಿಗರ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡುವುದರ ಜೊತೆಗೆ ಕೆಲವು ಸಿನಿಮಾಗಳ ಕಾಮಿಡಿ ಝಲಕ್, ಹಾಡು ಹಾಡುತ್ತಾ “ತೋತಾಪುರಿ’ ಸಿನಿಮಾದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
“ಈ ಥರದ ಕಾರ್ಯಕ್ರಮ ಬಹುಶಃ ಕನ್ನಡದ ಮಟ್ಟಿಗೆ ಇದೇ ಮೊದಲು. ತಾಂತ್ರಿಕತೆ ಬೆಳೆದಂತೆ ಅದನ್ನು ಬಳಸಿಕೊಳ್ಳುತ್ತಾ ಸಾಗಬೇಕು. ಆಗಲೇ ನಾವು ಈ ಟ್ರೆಂಡ್ ಜೊತೆ ಸಾಗಲು ಸಾಧ್ಯ’ ಎಂದು ಹೇಳಿದ ಜಗ್ಗೇಶ್, ದೇಶ-ವಿದೇಶಗಳಲ್ಲಿ “ತೋತಾಪುರಿ’ ಹಾಡು ಸಖತ್ ಹಿಟ್ ಆಗಿದೆ. ಈಗಾಗಲೇ ಮಿಲಿಯನ್‌ಗಟ್ಟಲೇ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ನೋಡಿ ಹರಸಿ’ ಎಂದರು.
ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರ ನಿರ್ಮಿಸಿದ್ದಾರೆ.