ಕೋವಿಡ್ ಎರಡನೇ ಲಾಕ್ ಡೌನ್ ನಂತರ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದ್ದ “ಸಲಗ’, “ಕೋಟಿಗೊಬ್ಬ-3′ ಮತ್ತು “ಭಜರಂಗಿ-2′ ಚಿತ್ರಗಳು ಇದೇ ತಿಂಗಳಲ್ಲಿ ತೆರೆ ಕಾಣುತ್ತಿವೆ. ಇದಾದ ಬಳಿಕ ನವೆಂಬರ್‌ನಲ್ಲಿ ಅಂಥದ್ದೇ ನಿರೀಕ್ಷೆ ಮೂಡಿಸಿರುವ ತೆರೆಗೆ ಬರುವ ಚಿತ್ರ ಯಾವುದು ಎಂದರೆ, ಅದಕ್ಕೆ ಉತ್ತರ “ತೋತಾಪುರಿ’.
ಹೌದು, ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ “ತೋತಾಪುರಿ’ ಸೆಟ್ಟೇರಿದಾಗಿನಿಂದಲೂ ಒಂದಷ್ಟು ನಿರೀಕ್ಷೆ ಮೂಡಿಸಿ, ಆಗಾಗ್ಗೆ ಸುದ್ದಿಯಾಗುತ್ತಿರುವ ಚಿತ್ರ. ಅದಕ್ಕೆ ಕಾರಣ ಒಂದು ಚಿತ್ರದ ಕಥಾಹಂದರವಾದರೆ, ಮತ್ತೂಂದು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ತಂಡ. “ನೀರ್‌ದೋಸೆ’ ಚಿತ್ರದ ನಂತರ ನಟ ನವರಸನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಶನ್‌ನಲ್ಲಿ ಈ ಚಿತ್ರ ಮೂಡಿಬರುತ್ತಿರುವುದರಿಂದ ಸಹಜವಾಗಿಯೇ “ತೋತಾಪುರಿ’ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇದೆ. ಈಗಾಗಲೇ ಚಾಪ್ಟರ್-1 ಮತ್ತು ಚಾಪ್ಟರ್-2 ಶೂಟಿಂಗ್ ಮುಗಿಸಿರುವ ಚಿತ್ರತಂಡ, ಟೈಟಲ್‌ಗೆ ಟ್ಯಾಗ್‌ಲೈನ್ ಸಹ ಗಮನ ಸೆಳೆಯುವಂತೆ ಇಟ್ಟಿದೆ “ತೋತಾಪುರಿ’ ತಂಡ.
ಇದನ್ನೂ ಓದಿ;- ಅರಸೊತ್ತಿಗೆಯ ನಾಡಹಬ್ಬದಿಂದ ದಸರೆ ವೈಭವದ ಹೆಜ್ಜೆ ಗುರುತುಗಳು
ಭಾಗ ಒಂದಕ್ಕೆ “ತೊಟ್ಟ್ ಕೀಳ್ಬೇಕಷ್ಟೇ…’ ಎಂದು ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ “ತೊಟ್ಟ್ ಕಿತ್ತಾಯ್ತು’ ಎಂದು ಅಡಿಬರಹವಿಟ್ಟಿದೆ. ಚಿತ್ರದ ಟೈಟಲ್‌ನಲ್ಲೇ ನಿರ್ದೇಶಕ ವಿಜಯಪ್ರಸಾದ್‌ರ ತುಂಟತನ, ಚೇಷ್ಟೆ ಇಷ್ಟಪಟ್ಟವರಿಗೆ ಇಲ್ಲಿ ಅವುಗಳನ್ನು ದುಪ್ಪಟ್ಟು ಅನುಭವಿಸುವಂತೆ ಕಟ್ಟಿಕೊಟ್ಟಿರುತ್ತಾರೆ.
ಕೆ. ಎ ಸುರೇಶ್ “ಸುರೇಶ್ ಆರ್ಟ್ಸ್’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು “ತೋತಾಪುರಿ’ಯಲ್ಲಿ ಜಗ್ಗೇಶ್ ಜೊತೆಗೆ ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ತಾರಾಗಣವಿದೆ.