ಸಿನಿಮಾ ಎಂದರೆ ಮನರಂಜನೆ. ಚಿತ್ರಮಂದಿರದೊಳಗೆ ಹೋದ ಪ್ರೇಕ್ಷಕ ಖುಷಿಯಾಗಬೇಕು, ಆತನ ಮನಸ್ಸು ಹಗುರವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಿನಿಮಾಗಳು ಪ್ರಯತ್ನಿಸುತ್ತವೆ. ಕೆಲವೊಮ್ಮೆ ಪ್ರಯತ್ನ ಫಲಿಸುವುದಿಲ್ಲ. ಆದರೆ, ಜಗ್ಗೇಶ್ ನಾಯಕರಾಗಿರುವ “ತೋತಾಪುರಿ’ ಚಿತ್ರ ಪ್ರೇಕ್ಷಕನನ್ನು ನಗೆಗಡಲಿನಲ್ಲಿ ತೇಲಿಸುವುದು ಪಕ್ಕಾ. ಈ ಭರವಸೆಯನ್ನು ಕೊಟ್ಟಿರೋದು ಚಿತ್ರದ ಟ್ರೇಲರ್. “ತೋತಾಪುರಿ’ ಚಿತ್ರದ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ. ನಟ ಸುದೀಪ್ ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಟ್ರೇಲರ್ ನೋಡಿದವರು ನಗುವಿನಲೆ ಯಲ್ಲಿ ತೇಲುವಂತಿದೆ. ಅದಕ್ಕೆ ಕಾರಣ ಚಿತ್ರದ ಸಂಭಾಷಣೆ. ಇದು ವಿಜಯಪ್ರಸಾದ್ ಸಿನಿಮಾ. ನೀವು ವಿಜಯ ಪ್ರಸಾದ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದರೆ ಅಲ್ಲೊಂದಿಷ್ಟು ಚೇಷ್ಟೆ, ಕಚಗುಳಿ ಇಡುವ ಸಂಭಾಷಣೆ ಸಿಗುತ್ತದೆ. ಈಗ ಬಿಡುಗಡೆಯಾಗಿರುವ “ತೋತಾಪುರಿ’ ಟ್ರೇಲರ್‌ನಲ್ಲೂ ಅದು ಮುಂದುವರೆದಿದೆ.
ಒಂದಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳ ಜೊತೆಗೆ ಚಿತ್ರದಲ್ಲೊಂದು ಗಟ್ಟಿ ಹಾಗೂ ಅಷ್ಟೇ ಸೂಕ್ಷ್ಮವಾದ ಕಥೆ ಇರೋದು ಕಂಡುಬರುತ್ತಿದೆ. ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಧರ್ಮಗಳು ಈ ಟ್ರೇಲರ್‌ನಲ್ಲಿ ಬಂದು ಹೋಗುತ್ತವೆ. ಚಿತ್ರದಲ್ಲಿ ಕಚಗುಳಿ ಇಡುವ ಸಂಭಾಷಣೆಯ ಜೊತೆಗೆ ಒಂದಷ್ಟು ಗಂಭೀರವಾದ ಹಾಗೂ ಇವತ್ತಿನ ಸನ್ನಿವೇಶಕ್ಕೆ ಹೇಳಿಮಾಡಿ ಸಿದಂತಹ ಸಂಭಾಷಣೆಗಳಿವೆ. “ನಾನು ದತ್ತು ತಗೊಂಡಿರೋದು ಜಾತಿ-ಧರ್ಮವನ್ನಲ್ಲ, ಈ ಕಂದಮ್ಮನಾ’, “ಜಾತಿ ಕಾಲಂನಲ್ಲಿ ಭಾರತದವನು ಎಂದು ಬರೀರಿ…’ ಇಂತಹ ಸಂಭಾಷಣೆಗಳು ಇವೆ. ಈ ಮೂಲಕ ನಿರ್ದೇಶಕರು ಗಂಭೀರ ವಿಚಾರವನ್ನು ಹೇಳಹೊರಟಿರೋದು ಕಾಣುತ್ತದೆ.
ನಿರ್ದೇಶಕ ವಿಜಯ ಪ್ರಸಾದ್ ಪ್ರಕಾರ, “ತೋತಾಪುರಿ’ ಒಂದು ಗಲಭೆ ಇಲ್ಲದ ಪುಟ್ಟ ಪ್ರೇಮಕಥೆ. ಜೊತೆಗೆ ಇದು ಭಾವೈಕ್ಯತೆ ಸಾರುವ ಸಿನಿಮಾ. ಈ ಚಿತ್ರ ಫಲವತ್ತಾದ ಫಸಲು ಕೊಡುವ ನಿರೀಕ್ಷೆ ಕೂಡಾ ಅವರಿಗಿದೆ. ಇನ್ನು, “ತೋತಾಪುರಿ’ ಹೊಸ ಜಾನರ್‌ನ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಚಿತ್ರವನ್ನು ಕಟ್ಟಿಕೊಟ್ಟ ಪರಿಸರ ಕೂಡಾ ಭಿನ್ನವಾಗಿದೆ.
ಚಿತ್ರದಲ್ಲಿ ಜಗ್ಗೇಶ್, ಅದಿತಿ, ಧನಂಜಯ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಕೆ.ಎ.ಸುರೇಶ್ ತಮ್ಮ “ಮೋನಿಫಿಕ್ಸ್ ಸ್ಟುಡಿಯೋಸ್’ ಮೂಲಕ ನಿರ್ಮಿಸಿದ್ದಾರೆ.