ಉಡುಪಿ ಸಮೀಪ ಕುತ್ಯಾರಿನಂತಹ ಗ್ರಾಮೀಣ ಪ್ರದೇಶದಲ್ಲಿ ನೂರಾರು ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆಯುತ್ತಿರುವ ವಿದುಷಿ ಲತಾ ತಂತ್ರಿಯವರು ತಮ್ಮ “ಗಾನಶ್ರೀ ಸಂಗೀತ ಶಾಲೆ’ಯ ವಾರ್ಷಿಕೋತ್ಸವವನ್ನು ಶಿರ್ವ ಮಹಿಳಾ ಮಂಡಲದ ಕುತ್ಯಾರು ಕನ್ಯಾನ ಪ್ರೇಮಾ ಆರ್. ಶೆಟ್ಟಿ ವೇದಿಕೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡರು.
ಸಾಂಸ್ಕೃತಿಕ ಸೌಲಭ್ಯವೇ ಇಲ್ಲದ ಕುತ್ಯಾರಿನಂತಹ ಕುಗ್ರಾಮದಲ್ಲಿ ಆ ಕೊರತೆಯನ್ನು ನೀಗಿಸುವಲ್ಲಿ ಲತಾ ತಂತ್ರಿಯವರು ಸಫಲರಾಗಿದ್ದಾರೆ. ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದು, ಕಾಂಚನದಲ್ಲಿ ಸಂಗೀತ ಶಿಕ್ಷಣವನ್ನು ಪಡೆದ ಇವರು ಅದನ್ನು ಹಳ್ಳಿಯ ಮಕ್ಕಳಿಗೆ ಕಲಿಸಿ ಕೊಡುತ್ತಿರುವುದು ಶ್ಲಾಘನೀಯ.
ಈ ನಿಟ್ಟಿನಲ್ಲಿ ಇವರ ಸಂಗೀತ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ವಿದ್ಯಾರ್ಥಿಗಳಿಗಲ್ಲದೆ, ನಾಡಿನ ಪ್ರಸಿದ್ಧ ಕಲಾವಿದರನ್ನು ಕರೆಸಿ ವೇದಿಕೆ ಕಲ್ಪಿಸಿ ಕೊಡುವುದು ಅಭಿನಂದನಾರ್ಹ. ಹೀಗೆ ಮಾಡಿದಲ್ಲಿ ಕಲಾವಿದರ ಪರಿಚಯ, ವಿದ್ಯಾರ್ಥಿಗಳು ಸಾಗಬೇಕಾದ ದೂರ, ಏರಬೇಕಾದ ಎತ್ತರ ಎಲ್ಲವೂ ಅರಿವಾಗುತ್ತದೆ.
ಅಂದು ಪ್ರಧಾನ ಕಛೇರಿ ನೀಡಿದವರು ಕಾಂಚನ ಸಹೋದರಿಯರೆಂದೇ ಹೆಸರು ಮಾಡುತ್ತಿರುವ ಶ್ರೀರಂಜನಿ ಮತ್ತು ಶ್ರುತಿರಂಜನಿ. ಈ ಸಹೋದರಿಯರು ವಲಚಿ ನವರಾಗಮಾಲಿಕೆಯನ್ನು ನಾಲ್ಕೂ ಕಾಲಗಳಲ್ಲಿ ಹಾಡಿ ಆರಂಭದಲ್ಲೇ ಕಛೇರಿ ಕಳೆಗಟ್ಟುವಲ್ಲಿ ಸಫಲರಾದರು. ಮುಂದೆ ಜಯ-ಜಯಾ ನಾಟ ರಾಗದಲ್ಲಿ (ಖಂಡಛಾಪು) ಸ್ವರ ಪ್ರಸ್ತಾರದೊಂದಿಗೆ ಅಚ್ಚುಕಟ್ಟಾಗಿ ಮೂಡಿಬಂತು. ರವಿಚಂದ್ರಿಕೆ ರಾಗದಲ್ಲಿ ಆಲಾಪನೆಯನ್ನು ಮಾಡಿ ಶ್ರೋತೃಗಳ ಮನ ಗೆದ್ದರು. ಈರ್ವರೂ ಜತೆಯಾಗಿ ಮಾಕೇಲರಾ ಕೃತಿಯನ್ನು ಶುದ್ಧವಾಗಿ ಪ್ರಸ್ತುತಪಡಿಸಿ, ಅಚ್ಚುಕಟ್ಟಾದ ಸ್ವರ ಪ್ರಸ್ತಾರದ ಸೊಬಗನ್ನು ನೀಡಿದರು.
ಪ್ರಧಾನ ರಾಗವಾಗಿ ಕಲ್ಯಾಣಿಯನ್ನು ಎತ್ತಿಕೊಂಡು ಕಮಲಾಂಬಿಕೆ ವಿಳಂಬಕಾಲದ ಕೀರ್ತನೆಯನ್ನು ಸ್ವರಪ್ರಸ್ತಾರದೊಂದಿಗೆ ವಿದ್ವತ್‌ಪೂರ್ಣವಾಗಿ ಪ್ರಸ್ತುತ ಪಡಿಸಿದರು. ಕಾಂಚನ ಪರಂಪರೆಯ ಪ್ರತಿನಿಧಿಯಾಗಿ ವೇಣುಗೋಪಾಲ ಶ್ಯಾನುಭೋಗ್ ಅವರು ಕಲಾವಿದರನ್ನು ಅನುಸರಿಸಿದ್ದೂ ಅಲ್ಲದೆ, ಉತ್ತಮ ಸಹಕಾರ ನೀಡಿದರು. ತನಿ ಆವರ್ತನದಲ್ಲಿ ಆನೂರು ದತ್ತಾತ್ರೇಯ ಶರ್ಮ ಮೃದಂಗದಲ್ಲಿ ಉತ್ತಮ ಸಹಕಾರ ನೀಡಿದರೆ, ಯುವ ಉತ್ಸಾಹಿ ಕಾರ್ತಿಕ್ ಇವರು ಖಂಜೀರ ವಾದನದಲ್ಲಿ ಸೈ ಅನಿಸಿಕೊಂಡರು.
ಮುಂದೆ ನೀಲಾಂಬರಿ ರಾಗದ “ಮಾಮವ ಮಾಧವ’,ಯಮನ್ ರಾಗದಲ್ಲಿ ಜಗದೋದ್ಧಾರನಾ ಹಾಗೂ ಕೆಲವು ದೇವರ ನಾಮಗಳೊಂದಿಗೆ ಕಛೇರಿಯು ಮುಕ್ತಾಯಗೊಂಡಿತು. ಇಂತಹ ಉತ್ತಮ ಕಛೇರಿಯನ್ನು ಆಯೋಜಿಸಿದ ಲತಾ ತಂತ್ರಿಯವರು ಅಭಿನಂದನಾರ್ಹರು. ತಮ್ಮ ವಿದ್ಯಾರ್ಥಿವೃಂದ, ಪೋಷಕರ, ಊರ ಸಹೃದಯ ಬಳಗದವರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರೆ ಹೆಚ್ಚಾಗಲಾರದು. “ಗಾನಶ್ರೀ’ ಸಂಗೀತ ಕಲಾಶಾಲೆ ಕುತ್ಯಾರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನಮ್ಮೆಲ್ಲರ ಆಶಯ.
ಉಮಾಶಂಕರಿ