ಫಸ್ಟ್ ಪಿಯೂಸಿ ಓದುವಾಗ ನಡೆದ ಘಟನೆ. ನನಗೆ ಕೆಮಿಸ್ಟ್ರಿ ಎಂದರೆ ಅಚ್ಚುಮೆಚ್ಚು. ತಗೊಂಡ ಕಾಂಬಿನೇಷನ್ ಪಿಸಿಎಂಬಿ ಆದರೂ ಫಿಸಿಕ್ಸ್‌ನಲ್ಲಿ ಆ ಲಾಗಳು, ಅಪ್ಲಿಕೇಶನ್‌ಗಳು ತಲೆಗೆ ಹತ್ತುತ್ತಿರಲಿಲ್ಲ, ಬಯಾಲಜಿ ಹೆಸರುಗಳಂತೂ ಉಚ್ಛರಿಸಲು ನಾಲಗೆ ಹೊರಳುತ್ತಿರಲಿಲ್ಲ. ಜೊತೆಗೆ ಕ್ಲಿಷ್ಟಕರ ಹೆಸರುಗಳು ಒಂದೂ ಜ್ಞಾಪಕವಿರುತ್ತಿರಲಿಲ್ಲ. ಗಣಿತಕ್ಕೆ ದೇವರೇ ಗತಿ! ಆ ರಾಶಿ ರಾಶಿ ಫಾರ್ಮುಲಾಗಳನ್ನು ನೆನಪಿಟ್ಟುಕೊಂಡರೂ ಯಾವ ಸಮಯದಲ್ಲಿ ಯಾವ ಫಾರ್ಮುಲಾ ಉಪಯೋಗಿಸಬೇಕು ಎಂಬುವಲ್ಲಿ ಎಡವುತ್ತಿದ್ದೆ. ಇದ್ಯಾವ ಜಂಜಾಟವೂ ಇಲ್ಲದ ಕೆಮಿಸ್ಟ್ರಿ ನನಗೆ ಸುಲಭ ಎನಿಸಿತ್ತು. ಹಾಗಾಗಿ ಬರೀ ಅದೊಂದೇ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ದೆ. ಎಷ್ಟೋ ವರ್ಷಗಳ ನಂತರ ಈಗ ನನಗೆ ಅನಿಸುತ್ತಿರುವುದು ವಿಜಾnನದ ಬದಲು ಕಲಾ ವಿಭಾಗ ನನ್ನ ಆಯ್ಕೆ ಆಗಬೇಕಿತ್ತೇನೋ ಎಂದು.
ಮೊದಲನೇ ಕಿರುಪರೀಕ್ಷೆಗೆ ಹಾಜರಾಗಿದ್ದಾಯಿತು. ಆಯಾ ವಿಷಯದ ಶಿಕ್ಷಕರು, ಆಯಾ ಪೀರಿಯಡ್ಡಿನಲ್ಲಿ ಉತ್ತರ ಪತ್ರಿಕೆಗಳನ್ನು ನೀಡುತ್ತಾ ಎಲ್ಲರ ಮುಂದೆ ಮಾರ್ಕ್ಸ್ ಅನೌನ್ಸ್ ಮಾಡುವಾಗ ಜೀವವೇ ಬಾಯಿಗೆ ಬಂದಿತ್ತು. ಒಟ್ಟು 25 ಮಾರ್ಕ್ಸ್ಗಳ ಪೇಪರ್‌ನಲ್ಲಿ ಫಿಸಿಕ್ಸ್‌ನಲ್ಲಿ 5, ಬಯಾಲಜಿಯಲ್ಲಿ 7, ಗಣಿತದಲ್ಲಿ 6 ಅಂಕಗಳು ಬಂದಿದ್ದವು. ಮಗಳು ಡಾಕ್ಟರ್ ಆಗುತ್ತಾಳೆಂದು ಕನಸು ಕಾಣುತ್ತಿದ್ದ ಅಪ್ಪನಿಗೆ ಹೇಗೆ ಮುಖ ತೋರಿಸುವುದೆಂದು ನಾನು ಯೋಚಿಸುತ್ತಿದ್ದೆ. ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು ಮುಂದಕ್ಕೆ ಕರೆದು, ತರಗತಿಯಲ್ಲಿ ಎಲ್ಲರ ಮುಂದೆ ಶಹಬ್ಟಾಸ್‌ಗಿರಿ ಕೊಟ್ಟು ಚಪ್ಪಾಳೆ ಹೊಡೆಸುತ್ತಿದ್ದರು. ನನ್ನ ಕರ್ಮಕ್ಕೆ ಕ್ಲಾಸಿಗೆ ಟಾಪರ್ ಆಗಿದ್ದ ಹುಡುಗಿ ನನ್ನ ಪಕ್ಕದಲ್ಲೇ ಕುಳಿತುಕೊಂಡಿರಬೇಕೇ? ಚಪ್ಪಾಳೆ ಹೊಡೆಸಿಕೊಳ್ಳಲು ಅವಳು, ಫೇಲಾಗಿದ್ದಕ್ಕೆ ಉಗಿಸಿಕೊಳ್ಳಲು ನಾನು! ನಮ್ಮ ಜೋಡಿ ಸರಿಯಾಗಿತ್ತು. ಪ್ರತಿಸಲ ಆಕೆ ಹೆಮ್ಮೆಯಿಂದ ಬೀಗುವಾಗ ನಾನು ಅವಮಾನದಿಂದ ಕುಗ್ಗಿ ಹೋಗುತ್ತಿದ್ದೆ.
ಅದರ ಮುಂದಿನ ಕ್ಲಾಸು ಕೆಮಿಸ್ಟ್ರಿಯದು. ನಾನು ಫೇಲಾದ ದುಃಖದಲ್ಲಿದ್ದೆ. ಅದೇ ಸಮಯಕ್ಕೆ ಶಿಕ್ಷಕರು “ಈ ಸಲ ನಳಿನಿ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ’ ಎಂದು ಘೋಷಿಸಿ, ತರಗತಿಯ ಮುಂದಕ್ಕೆ ಕರೆದು ಚಪ್ಪಾಳೆ ಹೊಡೆಸಿದರು. ನಾನು ಪೆಚ್ಚು ಪೆಚ್ಚಾಗಿ ನೋಡಿದ್ದೆ. ಎರಡು ಸಬ್ಜೆಕ್ಟ್ ಫೇಲಾಗಿದ್ದಕ್ಕೆ ಅಳಬೇಕೋ, ಒಂದು ವಿಷಯದಲ್ಲಿ ತರಗತಿಗೇ ಹೆಚ್ಚು ಅಂಕ ಪಡೆದುಕೊಂಡಿದ್ದಕ್ಕೆ ಸಂತೋಷ ಪಡಬೇಕೋ ತಿಳಿಯದೆ ಒದ್ದಾಡಿದ್ದೆ. ಮೂರು ವಿಷಯಗಳಲ್ಲಿ ಅಂಕಗಳು ತಳಹತ್ತಿ, ಒಂದು ವಿಷಯದಲ್ಲಿ ಅತಿ ಹೆಚ್ಚಾಗಿ ತೇಲಾಡಿದ ನನ್ನೆಡೆ ಸಹಪಾಠಿಗಳಂತೂ ವಿಚಿತ್ರ ಪ್ರಾಣಿ ನೋಡುವಂತೆ ನೋಟ ಬೀರುತ್ತಿದ್ದ ನೆನಪು ಹಸಿರಾಗಿದೆ.
ನಳಿನಿ. ಟಿ. ಭೀಮಪ್ಪ, ಧಾರವಾಡ