ಸಿನಿಮಾರಂಗದಲ್ಲಿ ರೀ – ರಿಲೀಸ್ ಟ್ರೆಂಡ್ ಹೆಚ್ಚಾಗಿವೆ. ಕಲೆಕ್ಷನ್ ವಿಚಾರದಲ್ಲಿ ಇದು ನಿರ್ಮಾಪಕರಿಗೆ ಪ್ಲಸ್ ಆದರೆ ಪ್ರದರ್ಶನದ ವಿಚಾರದಲ್ಲಿ ಕಲಾವಿದರಿಗೆ ರೀ – ರಿಲೀಸ್ ಸಿನಿಮಾಗಳು ಪ್ಲಸ್ ಆಗುತ್ತಿವೆ.
ಒಂದು ಕಾಲದಲ್ಲಿ ವಾರಕ್ಕೊಂದು ಸಿನಿಮಾ ತೆರೆಕಂಡು ಇನ್ನೊಂದು ವಾರದವರೆಗೂ ಥಿಯೇಟರ್‌ನಲ್ಲಿ ಉಳಿದಿದ್ದರೆ ಆ ಸಿನಿಮಾ ಮೂರನೇ ವಾರಕ್ಕೆ ಕಾಲಿಡುತ್ತಿತ್ತು. ಆದರೀಗ ಕಾಲ ಬದಲಾಗಿದೆ. ರಿಲೀಸ್ ಆದ ಸಿನಿಮಾ ಹೇಗಿದೆ, ಏನು, ಎತ್ತ ಎನ್ನುವುದರ ಬಗ್ಗೆ ಒಂದೇ ದಿನದಲ್ಲಿ ಪ್ರೇಕ್ಷಕರು ಸಿನಿಮಾದ ಭವಿಷ್ಯವನ್ನು ನಿರ್ಧರಿಸಿ ಬಿಡುತ್ತಾರೆ.
ಇತ್ತ ನಿರ್ಮಾಪಕ ಹೇಗಾದರೂ ಮಾಡಿ ತಮ್ಮ ಸಿನಿಮಾವನ್ನು ಒಂದೆರೆಡು ವಾರ ಆದರೂ ಥಿಯೇಟರ್‌ನಲ್ಲಿ ಓಡಿಸಬೇಕೆನ್ನುವ ಪ್ರಯತ್ನದಲ್ಲೇ ನಿರತರಾಗುತ್ತಾರೆ. ಅದೂ ಸಾಧ್ಯವಾಗಿಲ್ಲವೆಂದರೆ ಕಿಸೆಗೆ ಬಂದದ್ದು ಪಂಚಾಮೃತವೆಂದುಕೊಂಡೇ ರಿಲೀಸ್ ಆದ ಕೆಲವೇ ದಿನಗಳ ಬಳಿಕ ಸಿನಿಮಾವನ್ನು ಓಟಿಟಿ ತೆಕ್ಕೆಗೆ ಕೊಟ್ಟು ಬಿಡುತ್ತಾರೆ.
ರೀ ರಿಲೀಸ್ ಎನ್ನುವ ಹೊಸ ಟ್ರೆಂಡ್ ಕಳೆದ ಎರಡು ವರ್ಷದಲ್ಲಿ ಜಾಸ್ತಿ ಆಗಿದೆ. ಫ್ಯಾನ್ಸ್ ಬೇಡಿಕೆ ಒಂದು ಕಡೆಯಾದರೆ ಸಿನಿಮಾ ಬಂದು 10 -15 ಅಥವಾ 25 ವರ್ಷ ಆಯಿತು ಎನ್ನುವ ಖುಷಿಗೆ ಚಿತ್ರವನ್ನು ಮರು ಬಿಡುಗಡೆ ಮಾಡುವುದುಂಟು. ಇದು ಬಿಟ್ಟರೆ ಸ್ಟಾರ್‌ಗಳ ಹುಟ್ಟುಹಬ್ಬಕ್ಕೆ ರೀ – ರಿಲೀಸ್ ಮಾಡುತ್ತಾರೆ.
ಸೌತ್ ಸಿನಿಮಾರಂಗದಲ್ಲಿ ಈ ರೀ – ರಿಲೀಸ್ ತಂತ್ರ ತುಸು ಹೆಚ್ಚಾಗಿಯೇ ಇದೆ. ಕನ್ನಡ, ತಮಿಳು, ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಸ್ಟಾರ್ ಕಲಾವಿದರ ಸಿನಿಮಾಗಳು ರೀ – ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುವುದರ ಜತೆಗೆ ಬಾಕ್ಸ್ ಆಫೀಸ್‌ನಲ್ಲಿ ನಿರ್ಮಾಪಕರ ಕಿಸೆ ತುಂಬಿಸುವ ಕೆಲಸವನ್ನು ಮಾಡಿಕೊಟ್ಟಿವೆ.
ಸದಾ ಸೌತ್ ಸಿನಿಮಾದತ್ತ ಒಂದು ನೋಟವನ್ನಿಟ್ಟು ಅಲ್ಲಿ ಹಿಟ್ ಆಗುವ ಸಿನಿಮಾವನ್ನು ರಿಮೇಕ್ ಮಾಡುವ ಸಾಹಸಕ್ಕಿಳಿಯುವ ಬಾಲಿವುಡ್ ದಕ್ಷಿಣ ಭಾರತದ ಸಿನಿಮಾಗಳು ರೀ – ರಿಲೀಸ್ ಆಗಿ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದನ್ನು ನೋಡಿ ತಮ್ಮ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದೆ.
ಈ ವರ್ಷ ಬಾಲಿವುಡ್‌ನಲ್ಲಿ ಕೆಲ ಸಿನಿಮಾಗಳು ರೀ ರಿಲೀಸ್ ಆಗಿದ್ದು, ಈ ಚಿತ್ರಗಳಿಗೆ ಬಿಡುಗಡೆ ಆಗುವ ಸಮಯದಲ್ಲಿ ಕೇಳಿಬಂದ ರೆಸ್ಪಾನ್ಸ್‌ಕ್ಕಿಂತ ಈಗ ಕೇಳಿಬಂದ ಪ್ರತಿಕ್ರಿಯೆಯೇ ಅಮೋಘವಾಗಿದೆ.
ಹಾಗಾದರೆ ಬನ್ನಿ ಯಾವೆಲ್ಲ ಬಾಲಿವುಡ್ ಸಿನಿಮಾಗಳು ಮರು ಬಿಡುಗಡೆ ಮಾಡಿ ಹೆಚ್ಚು ಗಳಿಕೆ ಕಂಡಿದೆ ಎನ್ನುವುದನ್ನು ನೋಡಿಕೊಂಡು ಬರೋಣ..
‘ತುಂಬಾಡ್ʼ: ರಾಹಿ ಅನಿಲ್ ಬರ್ವೆ ನಿರ್ದೇಶನದ, ಸೋಹುಂ ಶಾ ಪ್ರಧಾನ ಭೂಮಿಕೆಯಲ್ಲಿ 2018ರಲ್ಲಿ ಬಂದಿದ್ದ ಹಾರರ್ ‘ತುಂಬಾಡ್ʼ (Tumbbad) ಸಿನಿಮಾ ಸೆ.13 ರಂದು ರೀ- ರಿಲೀಸ್ ಆಗಿತ್ತು. ಬಹುಶಃ ರಿಲೀಸ್ ಸಮಯದಲ್ಲೇ ಈ ಸಿನಿಮಾಕ್ಕೆ ಅದ್ಭುತವಾದ ರೆಸ್ಪಾನ್ಸ್ ಬಂದಿದ್ದರೆ ಆಸ್ಕರ್ ಅಂಗಳದಲ್ಲಿ ಖಂಡಿತವಾಗಿ ʼತುಂಬಾಡ್ʼ ವಿಜಯ ಪತಾಕೆಯನ್ನು ಹಾರಿಸುತ್ತಿತ್ತೋ ಏನೋ.
ಬಂಗಾರದ ನಾಣ್ಯಕ್ಕಾಗಿ ಜೀವ ಪಣಕ್ಕಿಟ್ಟು ಸಾಹಸಕ್ಕೆ ಹೊರಡುವ ಹಾರರ್ – ಥ್ರಿಲ್ಲರ್ ‘ತುಂಬಾಡ್ʼ ಸಿನಿಮಾದ ತಯಾರಿಗೆ 6 ವರ್ಷ ಬೇಕಾಗಿತ್ತು. ಮಹಾರಾಷ್ಟ್ರದ ಹೊರವಲಯದಲ್ಲಿ ಚಿತ್ರೀಕರಣಗೊಂಡ ಸಿನಿಮಾ ನೈಜ ಘಟನೆಯಂತೆ ಮೂಡಿಬಂದಿದೆ.
ತನ್ನ ಕಥೆ ಹಾಗೂ ಭೀತಿ ಹುಟ್ಟಿಸುವ ದೃಶ್ಯಗಳು ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ನೈಜ ಅನುಭವವನ್ನು ನೀಡಿತು.
ಸಿನಿಮಾದ ರೀ – ರಿಲೀಸ್‌ಗೆ ಪ್ರೇಕ್ಷಕರು ಹರಿದು ಬಂದಿದ್ದರು. ಮರು ಬಿಡುಗಡೆಯಲ್ಲಿ ಭಾರತದಲ್ಲಿ 31.35 ಕೋಟಿ ರೂ. ಗಳಿಕೆ ಕಂಡಿತು. ಆ ಮೂಲಕ ಈ ವರ್ಷ ಬಿಡುಗಡೆ ಆದ ಎಲ್ಲಾ ರೀ ರಿಲೀಸ್ ಸಿನಿಮಾಗಳಿಗಿಂತ ʼತುಂಬಾಡ್ʼ ಅತೀ ಹೆಚ್ಚು ಗಳಿಕೆಯನ್ನು ಕಂಡಿದೆ.
ಸಿನಿಮಾ ಸೀಕ್ವೆಲ್ ಕೂಡ ಇತ್ತೀಚೆಗೆ ಅನೌನ್ಸ್ ಆಗಿದೆ.
ಲೈಲಾ ಮಜ್ನು (Laila Majnu): ಕೆಲ ಸಿನಿಮಾಗಳು ಜನರ ಮನಸ್ಸಿಗೆ ಇಷ್ಟವಾಗಿರುತ್ತದೆ. ಥಿಯೇಟರ್‌ನಲ್ಲಿ ಹೆಚ್ಚು ದಿನ ಉಳಿಯೋದೆ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿರುವುದು 2018ರಲ್ಲಿ ಬಂದಿದ್ದ ʼಲೈಲಾ ಮಜ್ನುʼ ಸಿನಿಮಾ. ಅವಿನಾಶ್ ತಿವಾರಿ ಮತ್ತು ತೃಪ್ತಿ ದಿಮ್ರಿ ಪ್ರಧಾನ ಭೂಮಿಕೆಯಲ್ಲಿ ಬಂದಿದ್ದ ಈ ಸಿನಿಮಾವನ್ನು ಸಾಜಿದ್ ಅಲಿ ನಿರ್ದೇಶಿಸಿದ್ದಾರೆ.
ಪ್ಯೂರ್ ರೊಮ್ಯಾಂಟಿಕ್ ಪ್ರೇಮಾ ಕಥಾಹಂದರದ ಈ ಸಿನಿಮಾ ಪ್ರೇಕ್ಷಕರ ಕೊರತೆಯಿಂದಾಗಿ ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ದಿನ ಉಳಿದಿರಲಿಲ್ಲ. ಆದರೆ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ರೀ ರಿಲೀಸ್ ಆಗಿ ಉತ್ತಮ ಅಭಿಪ್ರಾಯವನ್ನು ಪಡೆದುಕೊಂಡಿತು. ಮರು ಬಿಡುಗಡೆಯಾದ ಮೊದಲ ದಿನವೇ 10 ಲಕ್ಷ ರೂಪಾಯಿ ಗಳಿಕೆಯನ್ನು ಕಂಡಿತು. ಅಂತಿಮವಾಗಿ ರೀ – ರಿಲೀಸ್‌ನಿಂದ ʼಲೈಲಾ ಮಜ್ನುʼ 10 ಕೋಟಿ ರೂ. ಗಳಿಸಿದೆ.
ಕರಣ್ ಅರ್ಜುನ್ (Karan Arjun): 1995ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಸಲ್ಮಾನ್ ಖಾನ್ – ಶಾರುಖ್ ಖಾನ್ ಅವರ ʼಕರಣ್ ಅರ್ಜುನ್ʼ 30 ವರ್ಷದ ಬಳಿಕ ರೀ – ರಿಲೀಸ್ ಆಗಿದೆ.
ನ.22 ರಂದು ʼಕರಣ್ ಅರ್ಜುನ್ʼ ತೆರೆ ಕಂಡಿದೆ. ಮೊದಲ ದಿನವೇ ಸಿನಿಮಾ 25 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ 1114 ಥಿಯೇಟರ್‌ಗಳು, ವಿದೇಶದಲ್ಲಿ 250 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.
ವರದಿಗಳ ಪ್ರಕಾರ ʼಕರಣ್ ಅರ್ಜುನ್ʼ 27 ಕೋಟಿ ರೂ. ಗಳಿಕೆ ಕಾಣುವ ಸಾಧ್ಯತೆಯಿದೆ.
ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shah Rukh Khan) ಜತೆಯಾಗಿ ನಟಿಸಿದ್ದ, ಈ ಸಿನಿಮಾಕ್ಕೆ ರಾಕೇಶ್ ರೋಷನ್ ನಿರ್ದೇಶನ (Rakesh Roshan) ಮಾಡಿದ್ದಾರೆ
ರೀ ರಿಲೀಸ್‌ನಲ್ಲಿ ಹೆಚ್ಚು ಗಳಿಕೆ ಕಂಡ ಇತರೆ ಸಿನಿಮಾಗಳು: ಈ ಮೇಲಿನ ಸಿನಿಮಾಗಳು ಮಾತ್ರವಲ್ಲದೆ ಇತರೆ ಬಾಲಿವುಡ್ ಸಿನಿಮಾಗಳು ರೀ – ರಿಲೀಸ್‌ನಲ್ಲಿ ಕಮಾಲ್ ಮಾಡಿವೆ.
ವೀರ್ ಜಾರಾ : 20 ಲಕ್ಷ ರೂ.ಗಳಿಕೆ
ರೆಹನಾ ಹೈ ತೇರೆ ದಿಲ್ ಮೇ : 20 ಲಕ್ಷ ರೂ. ಗಳಿಕೆ
ಕಲ್ ಹೋ ನಾ ಹೋ : 12 ಲಕ್ಷ ರೂ. ಗಳಿಕೆ
ರಾಕ್ ಸ್ಟಾರ್ : 7 ಲಕ್ಷ ರೂ.