Advertisement

ಸಾಮಾನ್ಯ ಕಾರ್ಯಕರ್ತೆಗೆ ಮೇಲ್ಮನೆ ಗೌರವ

04:11 PM May 25, 2022 | Team Udayavani |

ಕೊಪ್ಪಳ: ಅಚ್ಚರಿ ಹಾಗೂ ದಿಢೀರ್‌ ಬೆಳವಣಿಗೆಯಲ್ಲಿ ಬಿಜೆಪಿ ನಾಯಕಿ, ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ್‌ಗೆ ‘ಮೇಲ್ಮನೆ’ಗೆ ಬಡ್ತಿ ಸಿಕ್ಕಿದೆ. ರೇಸ್‌ನಲ್ಲಿ ಇಲ್ಲದಿದ್ದರೂ ಅದೃಷ್ಟ ಖುಲಾಯಿಸಿದೆ.

Advertisement

ಈ ಹಿಂದೆ ರಾಯಚೂರು ಜಿಲ್ಲೆಯ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಪಕ್ಷ ಸಂಘಟನೆಯಲ್ಲಿ ತೊಡಗಿದವರಿಗೆ ಮೊದಲ ಆದ್ಯತೆ ಎನ್ನುವಂತೆ ಈಗ ಹೇಮಲತಾ ನಾಯಕ್‌ ಅವರಿಗೂ ಅದೃಷ್ಟದ ಉಡುಗೊರೆ ನೀಡಿದೆ.

ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನವರಾದ ಹೇಮಲತಾ, ಹಲವು ವರ್ಷದಿಂದ ಕೊಪ್ಪಳದಲ್ಲಿಯೇ ನೆಲೆಸಿದ್ದಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಕಟ್ಟಾ ಬೆಂಬಲಿಗರಾಗಿದ್ದಾರೆ. ಈ ಹಿಂದೆ ಸಂಗಣ್ಣ ಕರಡಿ ಅವರ ಜತೆ ಹೇಮಲತಾ ಕೂಡ ಜೆಡಿಎಸ್‌ ನಲ್ಲಿದ್ದರು. 2011ರ ಉಪ ಚುನಾವಣೆಯಲ್ಲಿ ಸಂಗಣ್ಣ ಕರಡಿ ಬಿಜೆಪಿ ಸೇರ್ಪಡೆಯಾದಾಗ ಹೇಮಲತಾ ಕೂಡ ಬಿಜೆಪಿಗೆ ಬಂದಿದ್ದರು. ಕಳೆದ 11 ವರ್ಷಗಳಿಂದ ಪಕ್ಷ ನಿಷ್ಠೆ, ಸಂಘಟನೆಯಲ್ಲಿ ತೊಡಗಿದ್ದರು. ಜಿಲ್ಲಾ ಬಿಜೆಪಿ ಮಹಿಳಾ ಘಟಕದಲ್ಲಿ ವಿವಿಧ ಸ್ಥಾನ ನಿರ್ವಹಿಸಿ, ಎಸ್‌ಟಿ ಮೋರ್ಚಾದಲ್ಲೂ ಸ್ಥಾನ ಪಡೆದು ಸಂಘಟನಾತ್ಮಕ ವಿಷಯದಲ್ಲಿ ಮುಂದಿದ್ದರು. ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನಾಲ್ಕೈದು ದಿನ ವಾಸ್ತವ್ಯ ಮಾಡಿ ಪಕ್ಷ ಸೂಚಿಸುವ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದರು. ಎಂತಹ ಸಂಕಷ್ಟ ಎದುರಾಗಿದ್ದರೂ ಬಿಜೆಪಿ ತೊರೆದಿರಲಿಲ್ಲ.

ನಗರಸಭೆಗೆ ಸ್ಪರ್ಧಿಸಿ ಸೋತಿದ್ದರು: 2008ರಲ್ಲಿ ಜೆಡಿಎಸ್‌ನಲ್ಲಿದ್ದಾಗ ಕೊಪ್ಪಳ ನಗರಸಭೆ 19ನೇ ವಾರ್ಡ್‌ಗೆ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಸೇರಿದ ಬಳಿಕ ಪಕ್ಷದ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿ ರಾಜ್ಯ ನಾಯಕರ ಗಮನ ಸೆಳೆದಿದ್ದರು. 2014ರಲ್ಲಿ ದಿಶಾ ಕಮಿಟಿ ನಾಮ ನಿರ್ದೇಶಿತ ಸದಸ್ಯರಾಗಿದ್ದರು. ಈ ಅವಧಿಗೆ ನಗರಸಭೆ ಸದಸ್ಯ ಸ್ಥಾನಕ್ಕೂ ಟಿಕೆಟ್‌ ಕೇಳಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್‌ ಕೊಟ್ಟಿರಲಿಲ್ಲ. ಈಗ ಅದೃಷ್ಟವೆಂಬಂತೆ ವಿಧಾನ ಪರಿಷತ್‌ ನೀಡಿ ಅಚ್ಚರಿಯ ಉಡುಗೊರೆ ನೀಡಿದೆ.

ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ ವ್ಯವಸ್ಥೆ: ಹೇಮಲತಾ ನಾಯಕ್‌ ಅವರು ಮಂಗಳವಾರ ಕೊಪ್ಪಳದ ತಮ್ಮ ನಿವಾಸದಲ್ಲಿಯೇ ಇದ್ದರು. ಬೆಳಗ್ಗೆ ಪಕ್ಷದ ಕಚೇರಿಯಿಂದ ಮಾಹಿತಿ ರವಾನೆಯಾದ ತಕ್ಷಣ ಕಾರಿನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದರು. ಆದರೆ ಟ್ರಾಫಿಕ್‌ ಜಾಮ್‌ ಹೆಚ್ಚಿರುವ ಹಿನ್ನೆಲೆಯಲ್ಲಿ ಅಲ್ಲದೇ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾದ ಪ್ರಯುಕ್ತ ತುಮಕೂರು ವರೆಗೂ ಕಾರಿನಲ್ಲಿ ತೆರಳಿ ಸಮಯದ ಅಭಾವದಿಂದ ಪಕ್ಷವೇ ಅವರಿಗೆ ತುಮಕೂರಿನಲ್ಲಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಬರುವಂತೆ ಮಾಡಿದರು. ಅಲ್ಲಿಂದ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಪಡೆದು ನೇರ ವಿಧಾನಸೌಧಕ್ಕೆ ದೌಡಾಯಿಸಿ ಮಧ್ಯಾಹ್ನ ವೇಳೆಗೆ ನಾಮಪತ್ರ ಸಲ್ಲಿಸಿದರು.

Advertisement

ನಾಮಹಿಳೆ, ಎಸ್‌ಟಿ ಕೋಟಾ ಪ್ಲಸ್‌ ಪಾಯಿಂಟ್‌: ಹೇಮಲತಾ ನಾಯಕ್‌ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿ ಬಿಟ್ಟು ಹೋಗದಂತೆ ಹಾಗೂ ಓಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಬಿಜೆಪಿ ಈ ರಣತಂತ್ರ ರೂಪಿಸಿದೆ. ಪ್ರಸ್ತುತ ವಾಲ್ಮೀಕಿ ಶ್ರೀಗಳು ಬೆಂಗಳೂರಿನಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದು, ಅವರಿಗೂ ಸಹಿತ ವಾಲ್ಮೀಕಿ ಸಮಾಜಕ್ಕೆ ಸ್ಥಾನಮಾನ ನೀಡಿದ ಸಂದೇಶ ಕೊಟ್ಟು, ಆ ಮೂಲಕ ಸ್ವಾಮೀಜಿಗಳ ಮನಸ್ಸು ಗೆಲ್ಲುವ ತಂತ್ರಗಾರಿಕೆಯೂ ನಡೆಸಿದೆ. ಇನ್ನು ಬಿಜೆಪಿ ನಾಲ್ವರು ಅಭ್ಯರ್ಥಿಗಳಲ್ಲಿ ಹೇಮಲತಾ ನಾಯಕ್‌ ಅವರಿಗೆ ಮಹಿಳಾ ಕೋಟಾ ಹಾಗೂ ಎಸ್‌ಟಿ ಕೋಟಾದಡಿ ಟಿಕೆಟ್‌ ದೊರೆತಿದೆ.

ವಾಲ್ಮೀಕಿ ಸಮುದಾಯದ ಮಹಿಳೆಯಾದ ನನ್ನ ಗುರುತಿಸಿ ಟಿಕೆಟ್‌ ನೀಡಿದೆ. ಪಕ್ಷದ ಎಲ್ಲ ನಾಯಕರಿಗೆ ನಾನು ಧನ್ಯವಾದ ತಿಳಿಸುವೆ. ನನಗೆ ಬೆಳಗ್ಗೆ ಪಕ್ಷದ ನಾಯಕರಿಂದ ಮಾಹಿತಿ ಬಂತು. ತಕ್ಷಣವೇ ಕೊಪ್ಪಳದಿಂದ ಬೆಂಗಳೂರಿನತ್ತ ತೆರಳಿದೆ. ಎಸ್ಕಾರ್ಟ್‌ ವ್ಯವಸ್ಥೆ ನನಗಿರಲಿಲ್ಲ. ಸಮಯದ ಅಭಾವದಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದೇನೆ.  -ಹೇಮಲತಾ ನಾಯಕ್‌, ಬಿಜೆಪಿ ವಿಧಾನ ಪರಿಷತ್‌ ಅಭ್ಯರ್ಥಿ        

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next