Advertisement
ನಿರ್ದೇಶಕ ಶಿವಕುಮಾರ್ ಭದ್ರಯ್ಯ ಕಥೆ ಎಳೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. ಇದೊಂದು ರಾಜಕೀಯ ವಿಡಂಬಣೆ ಅಂದುಕೊಳ್ಳಲ್ಲಡ್ಡಿಯಿಲ್ಲ. ಒಂದು ಕೆಟ್ಟ ವ್ಯವಸ್ಥೆಯಲ್ಲಿ ಏನೆಲ್ಲಾ ನಡೆಯುತ್ತೆ ಎಂಬ ಸಣ್ಣ ಸಂದೇಶದೊಂದಿಗೆ ಅವರದೇ ಧಾಟಿಯಲ್ಲಿ ನಿರೂಪಿಸುತ್ತಾ ಹೋಗಿದ್ದಾರೆ. ಇಡೀ ಚಿತ್ರ ರಾಜಕೀಯ ಮತ್ತು ರಾಜಕಾರಣಿಗಳ ಸುತ್ತ ಸುತ್ತುತ್ತದೆ. ಅಧಿಕಾರ, ಹೆಣ್ಣು, ಹಣ, ಭ್ರಷ್ಟಾಚಾರ, ಟೊಳ್ಳು ನುಡಿವ ಸ್ವಾಮೀಜಿಗಳು ಇತ್ಯಾದಿ ವಿಷಯಗಳು ರಾಜಕೀಯಕ್ಕೆ ಅಂಟಿಕೊಂಡ ನಂಟು.
Related Articles
Advertisement
ಅದನ್ನು ಸಹಿಸಿಕೊಂಡು ನೋಡುವುದಾದರೆ, ಒಮ್ಮೆ “ಕಳದೋದ ಮುಖ್ಯಮಂತ್ರಿ’ಯನ್ನೊಮ್ಮೆ ಕಣ್ತುಂಬಿಕೊಂಡು ಬರಲು ಅಡ್ಡಿಯಿಲ್ಲ. ಶೌಚಾಲಯ ಹಗರಣದಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾನೆ. ಆ ಸಿಎಂ ಪಟ್ಟಕ್ಕೇರಲು ಸಂಪುಟದ ಬೆರಳೆಣಿಕೆ ಸಚಿವರು ಕಸರತ್ತು ಮಾಡುತ್ತಾರೆ. ಆದರೆ, ಅವರೆಲ್ಲರೂ ಹಗರಣದಲ್ಲಿ ಸಿಲುಕಿಕೊಂಡವರೇ. ಅವರ್ಯಾರಿಗೂ ಆ ಸ್ಥಾನ ಸಿಗಲ್ಲ. ಸಿಎಂ ಸ್ಥಾನ ಕಳಕೊಂಡ ವಡ್ಡೋರಪ್ಪ, ತಾನು ಹೇಳಿದಂತೆ ಕೇಳುವ, ಹಳ್ಳಿ ಹೈದನೊಬ್ಬನನ್ನು ಸಿಎಂ ಮಾಡುವ ಯೋಚನೆ ಮಾಡುತ್ತಾನೆ.
ಅದರಂತೆ, ಒಂದು ಹಳ್ಳಿಯಲ್ಲಿರುವ ಕೃಷ್ಣ ಎಂಬ ಮುಗ್ಧ ಹಳ್ಳಿಗನನ್ನು ಕರೆದುಕೊಂಡು ಬಂದು ಸಿಎಂ ಪಟ್ಟ ಕಟ್ಟುತ್ತಾನೆ. ಆ ಹೆಬ್ಬೆಟ್ಟು ವ್ಯಕ್ತಿಯನ್ನು ಸಿಎಂ ಮಾಡುವ ವಡ್ಡೋರಪ್ಪಗೆ ರಾಜ್ಯದ ಬೊಕ್ಕಸ ಲೂಟಿ ಮಾಡುವ ಯೋಚನೆ. ಅತ್ತ, ರಾಜ್ಯ ಹೊತ್ತಿ ಉರಿಯುತ್ತಿರುತ್ತದೆ, ವಿರೋಧಪಕ್ಷದವರ ಗಲಾಟೆ ಜೋರಾಗಿರುತ್ತದೆ, ಮಾಧ್ಯಮ ಬಿತ್ತರಿಸುವ ಸುದ್ದಿಗಳೂ ಬಿಸಿ ಮುಟ್ಟಿಸಿರುತ್ತವೆ, ಯಾವುದೇ ಪರಿವಿಲ್ಲದ ಕೃಷ್ಣ ತಾನು ಸಿಎಂ ಆಗಿದ್ದರೂ, ನಾಲ್ಕು ಗೋಡೆ ನಡುವಿನ ಜೈಲಿನಲ್ಲಿರುತ್ತಾನೆ.
ಅಲ್ಲಿಂದ ತಪ್ಪಿಸಿಕೊಂಡರೇ ಸಾಕು ಎಂಬ ತೀರ್ಮಾನಕ್ಕೆ ಬಂದು, ಸಮಯ ನೋಡಿ ಅಲ್ಲಿಂದ ತಪ್ಪಿಸಿಕೊಳ್ತಾನೆ! ಆಗ ಬರೋದೇ “ಮುಖ್ಯಮಂತ್ರಿ ಕಳದೋದ್ನಪ್ಪೊ’ ಎಲ್ಲೆಡೆ ಬ್ರೇಕಿಂಗ್ ನ್ಯೂಸ್. ಅಲ್ಲಿಂದ ಆ ಸಿಎಂಗಾಗಿ ಹುಡುಕಾಟ ಶುರುವಾಗುತ್ತೆ. ಕೊನೆಗೆ ಏನಾಗುತ್ತೆ ಎಂಬುದೇ ಕುತೂಹಲ. ಶಿವಕುಮಾರ್ ಒಬ್ಬ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ಇನ್ನಷ್ಟು ಗಟ್ಟಿಯಾಗಬೇಕಿದೆ.
ಭರತ್ ಭದ್ರಯ್ಯ ಡ್ಯಾನ್ಸ್‌ನಲ್ಲಿ ಕೊಡುವ ಖುಷಿ ನಟನೆಯಲ್ಲಿಲ್ಲ. ಅಮೂಲ್ಯ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರಷ್ಟೇ. ಬಾಬು ಹಿರಣ್ಣಯ್ಯ ಪಾತ್ರವನ್ನು ಜೀವಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಅಷ್ಟಾಗಿ ಗಮನಸೆಳೆಯುವುದಿಲ್ಲ. ನಯನ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಕಾರ್ತಿಕ್ ವೆಂಕಟೇಶ್ ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಹರೀಶ್ ಛಾಯಾಗ್ರಹಣದಲ್ಲಿ “ಮುಖ್ಯಮಂತ್ರಿ’ ಇನ್ನಷ್ಟು ಅಂದವಾಗಬಹುದಿತ್ತು ಅನಿಸದೇ ಇರದು.
ಚಿತ್ರ: ಮುಖ್ಯಮಂತ್ರಿ ಕಳೆದೋದ್ನಪ್ಪೊನಿರ್ಮಾಣ ಮತ್ತು ನಿರ್ದೇಶನ: ಶಿವಕುಮಾರ್ ಭದ್ರಯ್ಯ
ತಾರಾಗಣ: ಶಿವಕುಮಾರ್ ಭದ್ರಯ್ಯ, ಭರತ್ ಭದ್ರಯ್ಯ, ಅಮೂಲ್ಯ, ಬಾಬು ಹಿರಣ್ಣಯ್ಯ ಮುಂತಾದವರು * ವಿಜಯ್ ಭರಮಸಾಗರ