Advertisement
ಸಮಾನತೆ,ಶಾಂತಿ, ಸಹಬಾಳ್ವೆ ಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದ ಶ್ರೀಗಳು ಬಸವಣ್ಣ ಹೇಳಿತ ತತ್ವ ಸಿದ್ಧಾಂತಗಳಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ.
Related Articles
Advertisement
ಜಾತಿ ಮತಗಳ ನಡುವಿನ ವೈಷಮ್ಯದ ಕುರಿತಾಗಿ ಪರಮ ವಿರೋಧ ಹೊಂದಿದ್ದ ಅವರು ಜಾತಿ ರಾಜಕಾರಣದ ಕುರಿತಾಗಿಯೂ ಮನದಲ್ಲಿ ಅಪಾರ ವಿರೋಧ ಹೊಂದಿದ್ದರು ಮತ್ತು ಬಹಿರಂಗವಾಗಿ ವಿರೋಧಿಸಿದ್ದರು. ಹಲವು ಬಾರಿ ನೇರ ಹೇಳಿಕೆಗಳನ್ನು ನೀಡಿ ರಾಜಕಾರಣಿಗಳ ವೈರವನ್ನು ಕಟ್ಟಿಕೊಂಡಿರುವ ಬಗ್ಗೆ ಸ್ವಾಮೀಜಿಗಳ ಬಗ್ಗೆ ಬಲ್ಲವರು ಅವರನ್ನು ನೆನೆಯುತ್ತಾ ಹೇಳಿಕೊಂಡಿದ್ದಾರೆ.
ಏನು ಮುಸ್ಲಿಮರ ರಕ್ತ ಹಸಿರು, ಬ್ರಾಹ್ಮಣರ ರಕ್ತ ಬಿಳಿ, ಬೇರೆಯವರ ರಕ್ತ ಕೆಂಪು ಬಣ್ಣದ್ದೇ, ಸೂಜಿಯನ್ನು ಚುಚ್ಚಿದರೆ ಬರುವ ರಕ್ತ ಕೆಂಪು, ಆಗುವ ಬೇನೆ ಎಲ್ಲರಿಗೂ ಒಂದೇ ಅಲ್ಲವೇ ಎಂದು ಹಲವು ವೇದಿಕೆಗಳಲ್ಲಿ ಸಂದೇಶ ಸಾರುತ್ತಿದ್ದರು.
ಸಾಮಾನ್ಯ ಸ್ವಾಮೀಜಿಯಾಗಿರದೆ ಮಹಾ ಶಕ್ತಿಯಾಗಿದ್ದ ಶ್ರೀಗಳು ಅಪಾರ ಭಕ್ತರ ಆರಾಧ್ಯ ದೈವವಾಗಿದ್ದರು. ನೊಂದವರ ಪಾಲಿಗೆ ಸಾಂತ್ವನ ಹೇಳುವ ಆಪತ್ಬಾಂಧವರಾಗಿದ್ದರು.
ಡಾ.ರಾಜ್ ಹೋರಾಟಕ್ಕೆ ಪ್ರೇರಣೆ ಕನ್ನಡ ನಾಡು ಕಂಡ ದೊಡ್ಡ ಚಳುವಳಿಯಾದ ಗೋಕಾಕ್ ಚಳುವಳಿಗೆ ವರ ನಟ ಡಾ.ರಾಜ್‌ಕುಮಾರ್ ಅವರು ಧುಮುಕಲು ಶ್ರೀಗಳು ಪ್ರೇರಣೆಯಾಗಿದ್ದರು. ನಿರಂತರವಾಗಿ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದ ಶ್ರೀಗಳು ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿ ಕನ್ನಡ ಪರ ದೊಡ್ಡ ಧ್ವನಿಯಾಗಿ ಗೋಚರಿಸಿದ್ದರು. ಜಗದ್ಗುರು ಎನಿಸಿಕೊಂಡ ಸಿದ್ದಲಿಂಗ ಶ್ರೀಗಳಿಗೆ ಕನ್ನಡ ಪರ ಕಾಳಜಿಗೆ , ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿವೆ. “ಕನ್ನಡದಜಗದ್ಗುರು’ ಎಂದೇ ಶ್ರೀಗಳನ್ನು ಕರೆಯುವುದು ಅವರು ಕನ್ನಡ ನಾಡಿಗೆ ಕೊಟ್ಟ ಕೊಡುಗೆಯನ್ನು ಸಾರಿ ಹೇಳುತ್ತದೆ. ಮೌಢ್ಯಗಳ ವಿರೋಧಿ
ಜಾತ್ಯಾತೀತ ತತ್ವವನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡಿದ್ದ ಶ್ರೀಗಳು ಎಂದೂ ಮೌಢ್ಯಗಳಿಗೆ ಬೆಲೆ ನೀಡುತ್ತಿರಲಿಲ್ಲ. ಅಡ್ಡಪಲ್ಲಕ್ಕಿ ಉತ್ಸವನ್ನು ವಿರೋಧಿಸಿದ್ದ ಶ್ರೀಗಳು ಪಲ್ಲಕ್ಕಿಯಲ್ಲಿ ಬಸವಣ್ಣನ ವಚನಗಳ ಪುಸ್ತಕಗಳನ್ನಿಟ್ಟು ಮಾದರಿಯಾಗಿದ್ದರು. ಸಿದ್ದಲಿಂಗ ಶ್ರೀಗಳ ಆದರ್ಶಗಳನ್ನು , ಹೋರಾಟದ ಜೀವನವನ್ನು ಮುಂದುವರಿಸುವ ಮಹತ್ವದ ಜವಾಬ್ಧಾರಿ ಮಠದ ಮುಂದಿನ ಉತ್ತರಾಧಿಕಾರಿಯ ಮುಂದಿದೆ.