ಬೆಂಗಳೂರು: ಸೋಮವಾರದಿಂದ ನಡೆಯಲಿರುವ ಅಧಿವೇಶನದ ಕುರಿತು ಪ್ರಸ್ತಾಪಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅಧಿವೇಶನ ಮೊದಲ ದಿನ ಸಂತಾಪ, ನಾಮನಿದೇರ್ಶಿತರ ಪ್ರಮಾಣ ವಚನದೊಂದಿಗೆ ಮಳೆಗಾಲದ ಅಧಿವೇಶನ ಆರಂಭವಾಗಲಿದೆ.
ಪ್ರತಿ ಬಾರಿ ಸಂತಾಪ ಸೂಚನೆಯ ನಂತರ ಉಳಿದ ಕಲಾಪಗಳನ್ನು ಆರಂಭಿಸಲಾಗುತ್ತಿತ್ತು ಈ ಬಾರಿ ಸದನದ ಹಾಲಿ ಸದಸ್ಯೆ ವಿಮಲಾಗೌಡ ನಿಧನ ಹೊಂದಿರುವುದರಿಂದ ಅವರ ಗೌರವಾರ್ಥ ಮೊದಲ ದಿನ ಕೇವಲ ಸಂತಾಪ ಸೂಚನೆ ಮಾಡಿ ಸದನ ಮುಂದೂಡಲಾಗುವುದು ಎಂದು ಹೇಳಿದರು.ಅದಕ್ಕೂ ಮೊದಲು ರಾಜ್ಯ ಪಾಲರಿಂದ ನಾಮ ನಿರ್ದೇಶನಗೊಂಡ ಇಬ್ಬರು ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಸಾಮಾಜಿಕ, ಶೈಕ್ಷಣಿಕ ಸಾಧನೆಯಡಿ ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್. ರಮೇಶ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಕಳುಹಿಸಿದ್ದಾರೆ. ಅವರಿಗೆ ಪ್ರಮಾಣ ವಚನ ಬೋಧಿಸಲಾಗುವುದು ಎಂದು ತಿಳಿಸಿದರು.
ಜೂನ್ 6 ರಂದು ಪರಿಷತ್ ಸದಸ್ಯರಿಗೆ ಜಿಎಸ್‌ಟಿ ಕಾಯ್ದೆ ಬಗ್ಗೆ ಮಾಹಿತಿ ನೀಡಲು ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ ಪರಿಷತ್ ಸದಸ್ಯರಿಗೆ ಜಿಎಸ್‌ಟಿ ಸಾಧಕ ಬಾಧಕಗಳ ಕುರಿತು ದೆಹಲಿ ಮೂಲದ ಸಂಸ್ಥೆ ಮೂಲಕ ಮಾಹಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಹತ್ತು ದಿನ ನಡೆಯುವ ಈ ಅಧಿವೇಶನದಲ್ಲಿ 905 ಪ್ರಶ್ನೆಗಳು ಬಂದಿದ್ದು, 75
ಚುಕ್ಕೆಗುರುತಿನ ಪ್ರಶ್ನೆಗಳು ಬಂದಿವೆ. ಈ ಅಧಿವೇಶನದಲ್ಲಿ ಸರ್ಕಾರದ ಧನ ವಿನಿಯೋಗ ವಿಧೇಯಕ, ಮತ್ತು ಜಿಎಸ್‌ಟಿ ಬಿಲ್ ಮಂಡನೆಯಾಗಲಿವೆ ಎಂದರು.