Advertisement

ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲೊಂದು ವಿಹಾರ

11:31 PM Nov 23, 2021 | Team Udayavani |

ಕಾನ್ಪುರ: ಕಾನ್ಪುರದ “ಗ್ರೀನ್‌ ಪಾರ್ಕ್‌ ಸ್ಟೇಡಿಯಂ’ ಭಾರತದ ಅತ್ಯಂತ ಪುರಾತನ ಕ್ರಿಕೆಟ್‌ ಅಂಗಳಗಳಲ್ಲೊಂದು. ಇದರ ಟೆಸ್ಟ್‌ ಇತಿಹಾಸ 70 ವರ್ಷಗಳಷ್ಟು ಹಿಂದಿನಿಂದ ತೆರೆದುಕೊಳ್ಳತೊಡಗುತ್ತದೆ.

Advertisement

1952ರಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಭಾರತ ಇಲ್ಲಿ ಮೊದಲ ಟೆಸ್ಟ್‌ ಆಡಿತ್ತು. ಮೂರೇ ದಿನದಲ್ಲಿ ಮುಗಿದ ಈ ಪಂದ್ಯವನ್ನು ವಿಜಯ್‌ ಹಜಾರೆ ನಾಯಕತ್ವದ ಭಾರತ 8 ವಿಕೆಟ್‌ಗಳಿಂದ ಕಳೆದುಕೊಂಡಿತ್ತು. ಇಲ್ಲಿ ಮುಂದಿನ ಟೆಸ್ಟ್‌ ಆಡಿದ್ದು 1958ರಲ್ಲಿ. ಎದುರಾಳಿ ವೆಸ್ಟ್‌ ಇಂಡೀಸ್‌. ಫಲಿತಾಂಶ-ಭಾರತಕ್ಕೆ 203 ರನ್ನುಗಳ ಆಘಾತಕಾರಿ ಸೋಲು.

ಹೀಗೆ ಸತತ 2 ಸೋಲುಗಳ ಬಳಿಕ ಭಾರತವಿಲ್ಲಿ ಗೆಲುವಿನ ಖಾತೆ ತೆರೆಯಿತು. 1959ರಲ್ಲಿ ಆಸ್ಟ್ರೇಲಿಯವನ್ನು 119 ರನ್ನುಗಳಿಂದ ಮಣಿಸಿತು.

ಮುಂದಿನ ವರ್ಷಗಳಲ್ಲಿ ಗ್ರೀನ್‌ಪಾರ್ಕ್‌ ಸ್ಟೇಡಿಯಂ ಭಾರತದ ನೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದೆನಿಸಿತು.

ಭಾರತ ಇಲ್ಲಿ 22 ಟೆಸ್ಟ್‌ ಪಂದ್ಯಗಳನ್ನಾಡಿದೆ. ಏಳನ್ನು ಗೆದ್ದು, ಮೂರರಲ್ಲಿ ಸೋಲನುಭವಿಸಿದೆ. ಉಳಿದ 12 ಟೆಸ್ಟ್‌ ಪಂದ್ಯಗಳು ಡ್ರಾಗೊಂಡಿವೆ. 3ನೇ ಹಾಗೂ ಕೊನೆಯ ಸೋಲು ಎದುರಾದದ್ದು 1983ರಲ್ಲಿ, ವೆಸ್ಟ್‌ ಇಂಡೀಸ್‌ ವಿರುದ್ಧ. ಅಂತರ ಇನ್ನಿಂಗ್ಸ್‌ ಹಾಗೂ 83 ರನ್‌.

Advertisement

ನ್ಯೂಜಿಲ್ಯಾಂಡ್‌ ವಿರುದ್ಧ ಅಜೇಯ
ನ್ಯೂಜಿಲ್ಯಾಂಡ್‌ ವಿರುದ್ಧ ಕಾನ್ಪುರದಲ್ಲಿ ಭಾರತ ಈವರೆಗೆ 3 ಟೆಸ್ಟ್‌ ಪಂದ್ಯಗಳನ್ನಾಡಿದೆ. ಎರಡನ್ನು ಗೆದ್ದರೆ, ಇನ್ನೊಂದು ಡ್ರಾಗೊಂಡಿದೆ.

ಭಾರತ-ನ್ಯೂಜಿಲ್ಯಾಂಡ್‌ ಇಲ್ಲಿ ಮೊದಲ ಸಲ ಮುಖಾಮುಖಿಯಾದದ್ದು 1976ರಲ್ಲಿ. ಬಿಷನ್‌ ಸಿಂಗ್‌ ಬೇಡಿ ಮತ್ತು ಗ್ಲೆನ್‌ ಟರ್ನರ್‌ ನಾಯಕರಾಗಿದ್ದರು. ಬೃಹತ್‌ ಮೊತ್ತದ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

1999ರ ಸರಣಿಯ ದ್ವಿತೀಯ ಟೆಸ್ಟ್‌ ಇಲ್ಲಿ ನಡೆದಿತ್ತು. ಸಚಿನ್‌ ತೆಂಡುಲ್ಕರ್‌ ಭಾರತ ತಂಡದ ನಾಯಕರಾಗಿದ್ದರು. ಎದುರಾಳಿ ಕಪ್ತಾನ ಸ್ಟೀಫನ್‌ ಫ್ಲೆಮಿಂಗ್‌. ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬಂದಿತು. ಕರ್ನಾಟಕದ ಐವರು ಈ ಪಂದ್ಯದಲ್ಲಿ ಆಡಿದ್ದರು. ದ್ರಾವಿಡ್‌, ಕುಂಬ್ಳೆ, ಶ್ರೀನಾಥ್‌, ಭಾರದ್ವಾಜ್‌ ಮತ್ತು ಸುನೀಲ್‌ ಜೋಶಿ. ಒಟ್ಟು 10 ವಿಕೆಟ್‌ ಹರಿಸಿದ ಕುಂಬ್ಳೆ ಪಂದ್ಯಶ್ರೇಷ್ಠರಾಗಿ ಮೂಡಿಬಂದರು.

ಇದನ್ನೂ ಓದಿ:ಡಬ್ಲ್ಯುಬಿಬಿಎಲ್‌ ಟೂರ್ನಿಯ ತಂಡ: ಹರ್ಮನ್‌ಪ್ರೀತ್‌ಗೆ ಸ್ಥಾನ

2016ರಲ್ಲಿ ಕೊನೆಯ ಟೆಸ್ಟ್‌
ಭಾರತ-ನ್ಯೂಜಿಲ್ಯಾಂಡ್‌ ಕೊನೆಯ ಸಲ ಗ್ರೀನ್‌ ಪಾರ್ಕ್‌ನಲ್ಲಿ ಎದುರಾದದ್ದು 2016ರಲ್ಲಿ. ನಾಯಕರಾಗಿದ್ದವರು ವಿರಾಟ್‌ ಕೊಹ್ಲಿ. ಸರಣಿಯ ಈ ಮೊದಲ ಪಂದ್ಯವನ್ನು ಭಾರತ 197 ರನ್ನುಗಳ ಭಾರೀ ಅಂತರದಿಂದ ಜಯಿಸಿತು. 90 ರನ್‌ ಬಾರಿಸುವ ಜತೆಗೆ 6 ವಿಕೆಟ್‌ ಉರುಳಿಸಿದ ರವೀಂದ್ರ ಜಡೇಜ ಪಂದ್ಯಶ್ರೇಷ್ಠರಾಗಿ ಮೂಡಿಬಂದಿದ್ದರು.

ಈ ಪಂದ್ಯದ ಬಳಿಕ ಕಾನ್ಪುರದಲ್ಲಿ ಟೆಸ್ಟ್‌ ನಡೆದಿಲ್ಲ. 5 ವರ್ಷಗಳ ಬ್ರೇಕ್‌ ಬಳಿಕ ಮತ್ತೆ ಗ್ರೀನ್‌ಪಾರ್ಕ್‌ ಟೆಸ್ಟ್‌ ಪಂದ್ಯಕ್ಕೆ ತೆರೆದುಕೊಂಡಿದೆ.

ಗ್ರೀನ್‌ಪಾರ್ಕ್‌ ಸ್ವಾರಸ್ಯ
-ಬ್ರಿಟಿಷ್‌ ಲೇಡಿ, ಮೇಡಮ್‌ ಗ್ರೀನ್‌ ಈ ಅಂಗಳದಲ್ಲಿ ಕುದುರೆ ಸವಾರಿ ನಡೆಸುತ್ತಿದುದ್ದರಿಂದ ಇದಕ್ಕೆ “ಗ್ರೀನ್‌ ಪಾರ್ಕ್‌’ ಎಂಬ ಹೆಸರು ಬಂತು. “ಬಿಲಿಯರ್ಡ್ಸ್‌ ಸ್ಟೇಡಿಯಂ’ ಎಂಬುದು ಇದರ ನಿಕ್‌ ನೇಮ್‌.
-“ವೂಲ್ಮರ್ ಟರ್ಫ್‌’ ಎಂದೂ ಇದನ್ನು ಕರೆಯಲಾಗುತ್ತದೆ. 2007ರ ವಿಶ್ವಕಪ್‌ ವೇಳೆ ನಿಗೂಢ ಸಾವನ್ನಪ್ಪಿದ ಆಸ್ಟ್ರೇಲಿಯದ ಕ್ರಿಕೆಟಿಗ ಬಾಬ್‌ ವೂಲ್ಮರ್‌ ಇದೇ ಕ್ರೀಡಾಂಗಣದ ಸನಿಹದಲ್ಲಿರುವ “ಮೆಕ್‌ರಾಬರ್ಟ್‌ ಹಾಸ್ಪಿಟಲ್‌’ನಲ್ಲಿ ಜನಿಸಿದ್ದರು. ಅವರ ಸ್ಮರಣೆಗಾಗಿ ಈ ಹೆಸರು.
-ಗಂಗಾ ನದಿಯ ದಡದಲ್ಲಿರುವ ಈ ಸ್ಟೇಡಿಯಂ, ವಿದ್ಯಾರ್ಥಿಗಳ ಗ್ಯಾಲರಿಯನ್ನು ಹೊಂದಿರುವ ಭಾರತದ ಏಕೈಕ ಕ್ರೀಡಾಂಗಣವಾಗಿದೆ.
-ಭಾರತದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್‌ ಇಲ್ಲಿಯೇ ಟೆಸ್ಟ್‌ ಪದಾರ್ಪಣೆ ಮಾಡಿದ್ದರು (ಆಸ್ಟ್ರೇಲಿಯ ಎದುರಿನ 1969ರ ಪಂದ್ಯ). ಮೊದಲ ಇನ್ನಿಂಗ್ಸ್‌ ನಲ್ಲಿ ಖಾತೆ ತೆರೆಯಲು ವಿಫಲರಾದ ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ 137 ರನ್‌ ಬಾರಿಸಿ ಮಿಂಚಿದ್ದರು.
-ಸರ್ವಾಧಿಕ ಸ್ಕೋರ್‌: 7ಕ್ಕೆ 676 (ಭಾರತ, 1987ರ ಶ್ರೀಲಂಕಾ ಎದುರಿನ ಪಂದ್ಯ).
ಸರ್ವಾಧಿಕ ವೈಯಕ್ತಿಕ ಮೊತ್ತ: 250 (ವಿಂಡೀಸ್‌ನ ಫಾವದ್‌ ಬ್ಯಾಕಸ್‌, 1978).
– ಅತ್ಯುತ್ತಮ ಬೌಲಿಂಗ್‌: 69ಕ್ಕೆ 9, ಜಸುಭಾಯ್‌ ಪಟೇಲ್‌ (1959-60ರ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌). ಇದೇ ಪಂದ್ಯದಲ್ಲಿ ಅವರು 124ಕ್ಕೆ 14 ವಿಕೆಟ್‌ ಕೆಡವಿದ್ದರು. ಇದು ಕಾನ್ಪುರ ಟೆಸ್ಟ್‌ ಪಂದ್ಯದ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

ಕಾನ್ಪುರದಲ್ಲಿ ಭಾರತದ ಟೆಸ್ಟ್‌ ಸಾಧನೆ
ಪಂದ್ಯ: 22, ಗೆಲುವು: 07,
ಸೋಲು: 03, ಡ್ರಾ: 12

Advertisement

Udayavani is now on Telegram. Click here to join our channel and stay updated with the latest news.

Next