Advertisement
ಕಳೆದ ಒಂದು ತಿಂಗಳನಿಂದಲೂ ಹಾಸನ ಜಿಲ್ಲಾಡಳಿತವು ಹಾಸನಾಂಬಾ ಜಾತ್ರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ವಿವಿಧ ಇಲಾಖೆಗಳಿಗೆ ಮೂಲ ಸೌಕರ್ಯದ ಹೊಣೆಯನ್ನು ವಹಿಸಿದೆ. ದೇವಾಲಯದ ಆವರಣದಲ್ಲಿ ಸ್ವಚ್ಛತೆ, ದೇವಾಲಯದ ಸುತ್ತಮುತ್ತ ಸ್ವಚ್ಛತೆ, ದೇವಾಲಯಕ್ಕೆ ಬಣ್ಣ ಬಳಿಯುವುದು, ಭಕ್ತರು ಸುಗಮವಾಗಿ ದೇವಿಯ ದರ್ಶನ ಪಡೆಯಲು ಸರದಿಯ ಸಾಲುಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಮತ್ತಿತರ ವ್ಯವಸ್ಥೆ, ವಿದ್ಯುದ್ಧೀಪದ ಅಲಂಕಾರವನ್ನು ಜಿಲ್ಲಾಡಳಿತವು ಮಾಡಿದೆ. ಆದರೆ ರಸ್ತೆಗಳ ಗುಂಡಿ ಮುಚ್ಚುವ ಸ್ವಚ್ಛತೆಯ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.
Related Articles
Advertisement
ಜಿಲ್ಲಾಡಳಿತವು ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಆರಂಭಿಸಿದರೂ ಮಳೆ ಅಡ್ಡಿಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಸಿದ್ಧತೆಯಾಗದೆ ಅರೆ,ಬರೆ ಸಿದ್ಧತೆಯ ನಡುವೆಯೇ ಹಾಸನಾಂಬಾ ಜಾತ್ರಾ ಮಹೋತ್ಸವವು ಆರಂಭವಾಗುತ್ತಿದೆ. ಒಟ್ಟು 13 ದಿನ ನಡೆಯುವ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೂ ಮಳೆ ಕಾಡುವ ಆತಂಕವಿದ್ದು, ಭಕ್ತರ ಸರದಿಯ ಸಾಲಿನುದ್ದಕ್ಕೂ ವಾಟರ್ ಪ್ರೂಫ್ ಮೇಲ್ಛಾವಣಿ ಅಳವಡಿಸಲಾಗುತ್ತಿದೆ.
ಶ್ರೀ ಹಾಸನಾಂಬೆಯ ಮಹಿಮೆ: ಶ್ರೀ ಹಾಸನಾಂಬ ದೇವಿಯ ಬಗ್ಗೆ ಪುರಾಣದ ಕತೆಗಳು ಮತ್ತು ಐತಿಹಾಸಿಕದ ಹಲವು ದಾಖಲೆಗಳಿವೆ. ಶ್ರೀ ಹಾಸನಾಂಬೆಯು ಭಕ್ತರ ಬೇಡಿಕೆಗಳನ್ನು ಈಡೇರಿಸುವ, ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಸಂತಸ, ನೆಮ್ಮದಿ ಸಮೃದ್ಧಿ ನೀಡುವ ಶಕ್ತಿ ದೇವತೆ ಎಂಬ ನಂಬಿಕೆಯ ಹಿನ್ನಲೆಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನದ ಭಾಗ್ಯವಿರುವ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ದೇವಿಯ ದರ್ಶನದ ಎರಡು ವಾರಗಳಲ್ಲಿ ಕೋಟ್ಯಂತರ ರೂ. ಕಾಣಿಕೆಯೂ ದೇವಾಲಯಕ್ಕೆ ಸಂಗ್ರಹವಾಗಲಿದೆ.
ಪ್ರತಿ ವರ್ಷ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಗುರುವಾರ ಹಾಸನಾಂಬಾ ದೇಗುಲದ ಬಾಗಿಲು ತೆರೆದು, ಬಲಿಪಾಡ್ಯಮಿಯ (ದೀಪಾವಳಿ ಹಬ್ಬ) ಮರುದಿನ ದೇವಾಲಯದ ಬಾಗಿಲು ಮುಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದೇವಿಯ ಗರ್ಭಗುಡಿಯಲ್ಲಿ ಹುತ್ತದ ಮಾದರಿಯಲ್ಲಿರುವ ಮೂರು ಗದ್ದುಗೆಗಳಿವೆ. ಸಪ್ತ ಮಾತೃಕೆಯರ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿಯರೇ ಆ ಮೂರು ಹುತ್ತದ ರೂಪಗಳು ಎಂಬ ನಂಬಿಕೆಯಿದೆ. ಗದ್ದುಗೆಗಳ ರೂಪದ ದೇವಿಯ ದರ್ಶನ ವರ್ಷಕ್ಕೊಮ್ಮೆ ಮಾತ್ರ. ಹಾಗಾಗಿ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡುತ್ತಾರೆ.
ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ವಾರಣಾಸಿ (ಕಾಶಿ)ಯಿಂದ ದಕ್ಷಿಣಾಭಿಮುಖವಾಗಿ ವಿಹಾರಾರ್ಥವಾಗಿ ಬಂದರೆಂದು, ಅವರಲ್ಲಿ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿಯರೇ ಹುತ್ತದ ರೂಪದಲ್ಲಿ ಹಾಸನಾಂಬಾ ದೇವಾಲಯದಲ್ಲಿ ನೆಲೆಸಿದ್ದಾರೆ. ಬ್ರಾಹ್ಮಿದೇವಿಯು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಮ್ಮದೇವಿಯಾಗಿ, ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿಯವರು ಹಾಸನದ ದೇವಿಗೆರೆಯಲ್ಲಿ ನೆಲಸಿದ್ದಾರೆ ಎಂಬ ನಂಬಿಕೆಯಿದೆ.
ಬ್ರಹ್ಮನ ವರದಿಂದ ಉನ್ಮತ್ತನಾದ ಅಂಧಕಾಸುರನ ಪ್ರತಿ ಹನಿ ರಕ್ತದಿಂದಲೂ ಒಬ್ಬೊಬ್ಬ ಅಂಧಕಾಸುರ ಹುಟ್ಟುತ್ತಿದ್ದ. ರಕ್ತ ಬೀಳುವುದನ್ನು ತಡೆಯಲು ಶಿವನು ಒಂದು ಶಕ್ತಿಯನ್ನು ಸೃಷ್ಟಿಸಿದ. ಅದೇ ಯೋಗೇಶ್ವರಿ. ಇತರೆ ದೇವತೆಗಳೂ ಶಿವನ ಸಹಾಯಕ್ಕೆ ತಮ್ಮ ಶಕ್ತಿಯನ್ನು ತುಂಬಲು ಮುಂದಾದರು. ಹೀಗೆ ಜನ್ಮ ತಾಳಿದವರೇ ಸಪ್ತ ಮಾತೃಕೆಯರು. 64 ಕಲೆಗಳಿಗೆ ಅಧಿದೇವತೆಯರಾದ ಸಪ್ತಮಾತೃಕೆಯರು ಶ್ರೀ ಹಾಸನಾಂಬೆಯ ರೂಪದಲ್ಲಿದ್ದಾರೆ ಎಂಬುದು ಪುರಾಣ.
ಐತಿಹಾಸಿಕವಾಗಿ ಹಾಸನದ ಪ್ರದೇಶವನ್ನು ಚೋಳರಸರ ಅಧಿಪತಿ ಬುಕ್ಕಾನಾಯಕ ವಂಶಸ್ಥರು ಆಳುತ್ತಿದ್ದರು. ಅವರ ವಂಶಸ್ಥ ಕೃಷ್ಣಪ್ಪ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡ ಬಂದು ಪಟ್ಟಣ ಪ್ರವೇಶಿಸಿತು. ಇದು ಅಪಶಕುನ ಎಂದು ಕೃಷ್ಣಪ್ಪನಾಯಕ ನೊಂದುಕೊಂಡಿದ್ದಾಗ ಹಾಸನಾಂಬೆ ಪ್ರತ್ಯಕ್ಷಳಾಗಿ ಮೊಲ ಹೊಕ್ಕಿದ ಪ್ರದೇಶದಲ್ಲಿ ಕೋಟೆಯನು ಕಟ್ಟು ಎಂದು ಎಂದು ಹೇಳಿದಳೆಂದು, ಅಲ್ಲಿ ಕೋಟೆ ಕಟ್ಟಿ ಹಾಸನಾಂಬ ಎಂದು ಕೃಷ್ಣಪ್ಪನಾಯಕ ಹೆಸರಿಟ್ಟನೆಂಬುದು ಐತಿಹ್ಯ. ಹಾಸನ ತಾಲೂಕು ಕುದುರುಗುಂಡಿ ಗ್ರಾಮದಲ್ಲಿನ ಕ್ರಿ.ಶ.1140 ರಲ್ಲಿ ಸ್ಥಾಪತವಾದ ವೀರಗಲ್ಲಿನ ಶಿಲಾ ಶಾಸನದಲ್ಲಿ ಹಾಸನಾಂಬೆಯ ಹಾಸನವೆಂಬ ಉಲ್ಲೇಖವಿದೆ.
* ಎನ್. ನಂಜುಂಡೇಗೌಡ