ಬೆಂಗಳೂರು: ಮೈತ್ರಿ ಪಕ್ಷಗಳ ನಾಯಕರು ವಿಶ್ವಾಸ ಕಳೆದುಕೊಂಡಿದ್ದರೂ, ಸೋಮವಾರ ಸುಪ್ರೀಂಕೋರ್ಟ್ ಕಾಪಾಡುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ವಿಪ್ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಮಡ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಎರಡು ಬಾರಿ ಸೂಚನೆ ನೀಡಿದ್ದರೂ ಬಹುಮತ ಸಾಬೀತು ಪಡಿಸಿಲ್ಲ.
ಬಹುಮತ ಇಲ್ಲದಿದ್ದರೆ, ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು. ಅದನ್ನು ಬಿಟ್ಟು ಸದನದಲ್ಲಿ ಶಾಸಕರಿಗೆ ಹರಿಕಥೆ ಹೇಳಲು ಸಮಯಾವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ಪೀಕರ್ ರಮೇಶ್ ಕುಮಾರ್ ಸೋಮವಾರ ವಿಶ್ವಾಸ ಮತ ಪ್ರಕ್ರಿಯೆ ಮುಕ್ತಾಯಗೊಳಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಕಾಯುತ್ತೇವೆ. ಮುಖ್ಯಮಂತ್ರಿ ಸೋಮವಾರ ವಿಶ್ವಾಸ ಮತ ಸಾಬೀತು ಪಡಿಸಲಿ ಎಂದು ಹೇಳಿದರು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಶ್ರೀಮಂತ ಪಾಟೀಲ್ ಅವರ ಬಗ್ಗೆ ಸ್ಪೀಕರ್ ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ವರದಿಯನ್ನೂ ನೀಡಿದ್ದಾರೆ. ಆದರೆ, ಸಚಿವ ಡಿ.ಕೆ.ಶಿವಕುಮಾರ್ ಅನಗತ್ಯ ಆರೋಪಿಸಿದ್ದಾರೆ. ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರೂ ಬಿಜೆಪಿ ಶಾಸಕರು ಐದು ಕೋಟಿ ಹಣ ನೀಡಿದ್ದರು ಎಂದು ಹೇಳಿದ್ದಾರೆ. ಹಣವನ್ನು ಪಡೆದುಕೊಂಡಿರುವುದು ಅಪರಾಧವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವ ಸಾ.ರಾ. ಮಹೇಶ್ ವಿಶ್ವನಾಥ್ ಅವರು ಬಿಜೆಪಿಯಿಂದ 28 ಕೋಟಿ ರೂ.ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಶ್ವನಾಥ್ ಅವರು ಸಾ.ರಾ. ಮಹೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ ಎಂದರು.