Advertisement
ಆ ಚಿತ್ರಕ್ಕೆ “ಭೂಮಿಪುತ್ರ’ ಎಂದು ನಾಮಕರಣ ಮಾಡಿದ್ದು, ಮೇ. 8ರಂದು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಚಿತ್ರಕ್ಕೆ ಚಾಲನೆ ಕೊಡಲಾಗುತ್ತೆ ಎಂಬ ವಿಷಯ ಕೂಡ ತಿಳಿಸಲಾಗಿತ್ತು. ಈಗ ಅಂದು ನಡೆಯಲಿರುವ “ಭೂಮಿಪುತ್ರ’ ಚಿತ್ರದ ಮುಹೂರ್ತ ಕಾರ್ಯಕ್ರಮದ ರೂಪುರೇಷೆ ಕುರಿತು, ಸ್ವತಃ ನಿರ್ದೇಶಕ ಎಸ್.ನಾರಾಯಣ್ ಅವರೇ “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.
“ಅಂದು ಸಂಜೆ ಗೋಧೂಳಿಯಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಮಾಜಿ ಪ್ರಧಾನಿ ದೇವೇಗೌಡ ಅವರು ದೀಪ ಬೆಳಗಿಸುವುದರೊಂದಿಗೆ “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಅಂದು ದೇವೇಗೌಡ ಅವರನ್ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಹ್ವಾನಿಸಿರುವುದು, ಕುಮಾರಸ್ವಾಮಿ ಅವರ ತಂದೆ ಎಂಬ ಕಾರಣಕ್ಕಂತೂ ಅಲ್ಲ. ಅವರೊಬ್ಬ ರೈತಪರ ಹೋರಾಗಾರ, ಎಲ್ಲರೂ ಅವರನ್ನು “ಮಣ್ಣಿನ ಮಗ’ ಎಂದೇ ಗೌರವದಿಂದ ಕರೆಯುತ್ತಾರೆ. ನಿರಂತರವಾಗಿ ರೈತರ ಜತೆ ಇದ್ದು, ಅವರ ನೋವು, ನಲಿವುಗಳಿಗೆ ದನಿಯಾಗಿರುವ ದೇವೇಗೌಡರಿಂದ “ಭೂಮಿಪುತ್ರ’ನಿಗೆ ಚಾಲನೆ ಕೊಡಬೇಕೆಂಬ ಆಸೆ ನನ್ನ ಮತ್ತು ನಿರ್ಮಾಪಕ ಕೆ.ಪ್ರಭಾಕರ್ ಅವರದ್ದು. ಹಾಗಾಗಿ ಅಂದು ದೇವೇಗೌಡ ದಂಪತಿ ಹಾಜರಿದ್ದು, “ಭೂಮಿಪುತ್ರ’ನಿಗೆ ಶುಭ ಹಾರೈಸಲಿದ್ದಾರೆ.
Related Articles
Advertisement
ನಾನು ನಿರ್ದೇಶಕನಾಗಿ “ನಾ ಕಂಡ ಕುಮಾರಸ್ವಾಮಿ’ ಎಂಬ ಶೀರ್ಷಿಕೆಯಡಿ, ಅವರ ಕಾರ್ಯಕ್ರಮದ ವಿವರ ಕೊಡುತ್ತಿದ್ದೇನೆ. ಅವರ ಆಡಳಿತಾವಧಿಯ 20 ತಿಂಗಳ ಚಿತ್ರಣವನ್ನು ಯಾಕೆ ಸಿನಿಮಾ ರೂಪದಲ್ಲಿ ಹೇಳಹೊರಟಿದ್ದೇನೆ, ಸಾಕಷ್ಟು ಕಥೆ, ಕಾದಂಬರಿ ಇದ್ದರೂ, ಅವರ ಕುರಿತ ಚಿತ್ರಣ ಮಾಡಲು ಮುಂದಾಗಿದ್ದು ಯಾಕೆ ಎಂಬುದನ್ನು ಆ ವಿಡಿಯೋ ಮೂಲಕ ಹೇಳಲಿದ್ದೇನೆ.
ಅಂದೇ ಮೊದಲ ಶಾಟ್ಇನ್ನೊಂದು ವಿಶೇಷವೆಂದರೆ, “ಅಂದೇ ಮೊದಲ ಶಾಟ್ ತೆಗೆಯುತ್ತಿದ್ದೇನೆ. ದೇವೇಗೌಡರು ಮೊದಲ ಶಾಟ್‌ಗೆ ಕ್ಲಾಪ್ ಮಾಡಲಿದ್ದಾರೆ.ಅಂದು ಅಲ್ಲಿ ಹೆಚ್ಚು ಭಾಷಣಗಳಿರುವುದಿಲ್ಲ. ಎಲ್ಲವನ್ನೂ ವಿಡೀಯೋ ಮೂಲಕವೇ ತೋರಿಸಲಾಗುತ್ತದೆ. ದೊಡ್ಡ ವೇದಿಕೆಯಲ್ಲಿ ಕಲರ್‌ಫುಲ್ ಕಾರ್ಯಕ್ರಮ ಜರುಗಲಿದ್ದು, ಅಂದು ವೇದಿಕೆಯಲ್ಲಿ ದೇವೇಗೌಡ ದಂಪತಿ, ಕುಮಾರಸ್ವಾಮಿ ದಂಪತಿ, ಕುಮಾರಸ್ವಾಮಿ ಅವರ ಪಾತ್ರ ನಿರ್ವಹಿಸುತ್ತಿರುವ ನಟ ಅರ್ಜುನ್ ಸರ್ಜಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಇವರಷ್ಟೇ ವೇದಿಕೆ ಮೇಲಿರುತ್ತಾರೆ. ಅದು ಸಿನಿಮಾ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿರುತ್ತೆ. ಇನ್ನುಳಿದಂತೆ “ಭೂಮಿಪುತ್ರ’ನಿಗೆ ಸಂಬಂಧಿಸಿದಂತೆ ಪುಟ್ಟ ಮನರಂಜನೆ ಕೂಡ ನಡೆಯಲಿದೆ. ಛಾಯಾಗ್ರಾಹಕ ಪಿಕೆಎಚ್ ದಾಸ್ ಮೊದಲ ದೃಶ್ಯವನ್ನು ಸೆರೆಹಿಡಿಯಲಿದ್ದಾರೆ. ಮೇ.27 ಅಥವಾ ಜೂನ್ 3 ರಿಂದ “ಭೂಮಿಪುತ್ರ’ನಿಗೆ ಚಿತ್ರೀಕರಣ ಶುರುವಾಗಲಿದೆ’ ಎಂದು ವಿವರ ಕೊಡುತ್ತಾರೆ ಎಸ್.ನಾರಾಯಣ್. 30 ಸಾವಿರ ಜನರ ನಿರೀಕ್ಷೆ
ಸುಮಾರು ಒಂದುವರೆ ತಾಸಿನ ಕಾರ್ಯಕ್ರಮದಲ್ಲಿ ಈಗಾಗಲೇ ಹದಿನೈದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹದಿನೈದು ಸಾವಿರ ಪಾಸ್‌ಗಳೂ ಸಹ ಸೋಲ್ಡ್‌ಔಟ್ ಆಗಿವೆ. ನಮ್ಮ ಪ್ರಕಾರ, ಆ ಮೈದಾನದಲ್ಲಿ ಅಂದು ಸುಮಾರು 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಅಷ್ಟೂ ಜನರು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನದ ಕೆಲವು ಕಡೆ ಒಂದಷ್ಟು ಎಲ್‌ಇಡಿ ಪರದೆ ಅಳವಡಿಸಲಾಗುವುದು. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತವನ್ನು ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರು ಜನರಿಗೆ ಹೇಗೆ ಸ್ಪಂದಿಸುತ್ತಿದ್ದರು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹೇಗೆ ಇರುತ್ತಿದ್ದರು, ಅವರ ದೂರದೃಷ್ಟಿ, ಅವರ ಕನಸುಗಳು ಇತ್ಯಾದಿ ಸಮಾಜುಮುಖೀ ಅಂಶಗಳು “ಭೂಮಿಪುತ್ರ’ ಚಿತ್ರದಲ್ಲಿರಲಿವೆ. ಈ ಮೊದಲೇ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ತಮ್ಮನ್ನು ವೈಭವೀಕರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವೂ ಕೂಡ ವೈಭವೀಕರಿಸುತ್ತಿಲ್ಲ. ನನಗೆ ಗೊತ್ತಿರುವ ಮಾಹಿತಿಯ ಜೊತೆಗೆ, ಇನ್ನಷ್ಟು ಮಾಹಿತಿ ಸಂಗ್ರಹಿಸಿ ಚಿತ್ರಕಥೆ ಮಾಡಿಕೊಂಡಿದ್ದೇನೆ. ಇದು ದೊಡ್ಡ ಬಜೆಟ್‌ನ ಸಿನಿಮಾ ಜತೆಯಲ್ಲಿ ದೊಡ್ಡ ತಾರಾಗಣದ ಸಿನಿಮಾವೂ ಆಗಲಿದೆ. ಕನ್ನಡ ಚಿತ್ರರಂಗದ ಬಹುತೇಕ ಪ್ರಮುಖ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ವಿವರ ಕೊಡುತ್ತಾರೆ ನಾರಾಯಣ್.