ಚಿಕ್ಕಬಳ್ಳಾಪುರ: ಮಾರುಕಟ್ಟೆಯ ಇತಿಹಾಸದಲ್ಲಿ ಬಾಕ್ಸ್ 2,600 ರೂ., ಗಡಿ ದಾಟಿ ಸರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ಭಾರೀ ಇಳಿಮುಖ ಕಂಡಿದ್ದು ಒಂದಡೆ ಟೊಮೆಟೋ ಬಳಸುವ ಗ್ರಾಹಕರಲ್ಲಿ ಸಂತಸ ಮೂಡಿದರೆ ಟೊಮೆಟೋ ಬೆಳೆಗಾರರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.
ಜಿಲ್ಲೆಯ ಟೊಮೆಟೋ ಮಾರುಕಟ್ಟೆಯಲ್ಲಿ ಗುರುವಾರ 15 ಕೆ.ಜಿ. ಟೊಮೆಟೋ ಬಾಕ್ಸ್ ಕೇವಲ 400 ರಿಂದ 700 ರು, ವರೆಗೂ ಮಾರಾಟವಾಗಿದ್ದು ಟೊಮೆಟೋ ದರ ಬರೋಬರಿ ಶೇ.65 ರಿಂದ 70 ಬೆಲೆ ಇಳಿಕೆ ಕಂಡಿದೆ.
ಸತತ ಒಂದು ವಾರದಿಂದ ಟೊಮೆಟೋ ದರ ಕುಸಿಯುತ್ತೇ ಇದ್ದು ಒಂದರೆಡು ದಿನದಲ್ಲಿ ಭಾರೀ ಕುಸಿತ ಕಂಡಿದೆ. ವಾರದ ಹಿಂದೆ 1700, 2000 ರೂ., ಅಸುಪಾಸಿನಲ್ಲಿದ್ದ 15 ಕೆ.ಜಿ. ಟೊಮೆಟೋ ಈಗ 700ಕ್ಕೆ ಕುಸಿತ ಕಂಡಿದ್ದು ಇನ್ನಷ್ಟು ಬೆಲೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಜೂನ್ ಅಂತ್ಯ, ಜುಲೈ ತಿಂಗಳ ಆರಂಭದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಇಡೀ ದೇಶದಲ್ಲಿ ಟೊಮೆಟೋ ಬೆಲೆ ಗ್ರಾಹಕರನ್ನು ತೀವ್ರ ಚಿಂತೆಗೀಡು ಮಾಡಿತ್ತು. ಒಂದರೆಡು ತಿಂಗಳು ಬೆಲೆ ಇಳಿಕೆ ಆಗಲ್ಲ ಎಂದು ಅಂದಾಜು ಮಾಡಲಾಗಿತ್ತು. ಆದರೆ, ದೇಶವ್ಯಾಪ್ತಿ ಟೊಮೆಟೋ ಮಾರುಕಟ್ಟೆಗೆ ಪ್ರವೇಶ ಆರಂಭಗೊಂಡ ಬೆನ್ನಲ್ಲೆ ಟೊಮೆಟೋ ದರ ಸಮರ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ 50, 60 ರೂ.: ಇನ್ನೂ ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯ ಲಾರಂಭಿಸಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆ.ಜಿ. ಟೊಮೆಟೋ ದರ 40 ರಿಂದ 50, ಗುಣಮಟ್ಟದ ಟೊಮೆಟೋ 60 ರುಗೆ ಮಾರಾಟವಾಗುತ್ತಿದೆ. ಅಧಿಕ ಅಷಾಡ ಮುಗಿದು ಕೆಲವೇ ದಿನಗಳಲ್ಲಿ ಶ್ರಾವಣ ಆರಂಭಗೊಳ್ಳಲಿದ್ದು ಶುಭ ಸಭೆ, ಸಮಾರಂಭ, ಮದುವೆ, ನಾಮಕಾರಣ ಮತ್ತಿತರ ಶುಭ ಕಾರ್ಯಗಳು ಜತೆಗೆ ಸಾಲುಸಾಲು ಹಬ್ಬಗಳ ಆಗಮನ ಆಗಲಿದ್ದು ಇದೀಗ ಟೊಮೆಟೋ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ. ಆದರೆ ದಿಢೀರ್ ಬೆಲೆ ಏರಿಕೆಗೊಂಡು ಅದೃಷ್ಠದ ಬಾಗಿಲು ತೆರೆದು ಟೊಮೆಟೋ ಮಾರಾಟ ದಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ ರೈತರಲ್ಲಿ ಸಹಜವಾ ಗಿಯೆ ಬೆಲೆ ಕುಸಿತ ಬೇಸರ ಮೂಡಿಸಿದೆ.
ಈಗಷ್ಟೇ ಮಾರು ಕಟ್ಟೆಗೆ ಬಂಪರ್ ಬೆಲೆ ಪಡೆಯುವ ಆಸೆಯೊಂದಿಗೆ ಟೊಮೆಟೋ ತರುತ್ತಿರುವ ರೈತರ ಪಾಲಿಗೂ ಅಂತೂ ದರ ಕುಸಿತ ತೀವ್ರ ನಿರಾಸೆ ಮೂಡಿಸಿದೆ.
ಸದ್ಯ 15 ಕೆ.ಜಿ. ಟೊಮೆಟೋ ಬಾಕ್ಸ್ ಕೇವಲ 400 ರಿಂದ 700 ರೂ. ವರೆಗೂ ಮಾರಾಟವಾಗಿದೆ. ಆಂಧ್ರ, ತೆಲಂಗಾಣ ಮತ್ತಿತರ ರಾಜ್ಯಗಳಿಂದ ಟೊಮೆಟೋ ವ್ಯಾಪಕವಾಗಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕುಸಿತ ಕಂಡಿದೆ.
– ಚಲಪತಿ, ಟೋಮಟೋ ವರ್ತಕರು.
ಇದನ್ನೂ ಓದಿ: Election: ಚಾ.ನಗರ ಲೋಕಸಭಾ ಟಿಕೆಟ್‌ಗೆ ಕಸರತ್ತು… ಅಭ್ಯರ್ಥಿಗಳಾಗಲು ತೆರೆಮರೆಯ ತಾಲೀಮು