ಕೋಲಾರ: ನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಲ್ಲಿ ಶುಕ್ರವಾರ ಬಾಕ್ಸ್ ಟೊಮೆಟೋ 810 ರೂ.ವರೆಗೂ ಹರಾಜಾಗಿದ್ದು, ಟೊಮೆಟೋ ಬೆಳೆದವರ ಸಂತಸಕ್ಕೆಕಾರಣವಾಗಿದೆ. ಹದಿನೈದು ಕೆ.ಜಿ. ತುಂಬಿದ ಬಾಕ್ಸ್ ಒಮ್ಮೊಮ್ಮೆ ಕೇವಲ ಹದಿನೈದು ರೂ.ಗಿಂತಲೂ ಕಡಿಮೆ ಕುಸಿದು ರೈತರು ಟೊಮೆಟೋವನ್ನು ಬೀದಿಗೆ ಎಸೆಯುವುದನ್ನು ಕಾಣುತ್ತಿದ್ದೆವು. ಆದರೆ, ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟೊಮೆಟೋ ಬಾಕ್ಸ್ 800 ರ ಗಡಿ ದಾಟಿ ಹರಾಜಾಗಿರುವುದು ಧಾರಣೆ ಏರುಮುಖದ ನಿರೀಕ್ಷೆ ಹುಟ್ಟಿಸಿದೆ.
ಮಳೆ ಕಾರಣ: ಕಳೆದ ನಾಲ್ಕೈದು ದಿನಗಳಿಂದಲೂ ಕೋಲಾರ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು, ಟೊಮೆಟೋ ತೋಟಗಳಿಂದ ಬಿಡಿಸಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಮಳೆಕಡಿಮೆ ಇರುವಬಿಸಿಲುಇರುವ ಗ್ರಾಮಗಳಿಂದ ಟೊಮೆಟೋ ಮಾರುಕಟ್ಟೆಗೆ ಆಮದಾಗುತ್ತಿದ್ದು, ಧಾರಣೆ ಏರಲು ಕಾರಣವೆನ್ನಲಾಗುತ್ತಿದೆ.
ಗುರುವಾರ ಕೋಲಾರ ಮಾರುಕಟ್ಟೆಗೆ 11,718 ಕ್ವಿಂಟಲ್ ಟೊಮೆಟೋ ಆವಕವಾಗಿದ್ದು,ಕಳೆದ ಒಂದು ವಾರದಿಂದ ಟೊಮೆಟೋ ಆವಕ 8 ಸಾವಿರದಿಂದ 11 ಸಾವಿರಕ್ವಿಂಟಲ್‌ವರೆಗೂ ಏರುಮುಖವಾಗಿದೆ.
ಧಾರಣೆಯೂ ಹೆಚ್ಚಳ: ಒಂದು ವಾರದಿಂದಲೂ 500 ರೂ.ಗಡಿ ದಾಟಿ ಏರುತ್ತಲೇ ಇರುವ ಟೊಮೆಟೋ ಬಾಕ್ಸ್ ಧಾರಣೆ 600 ರೂ. ಮೀರಿ ಇದೀಗ ಸರಾಸರಿ 700 ರೂ. ಗಡಿಗೆ ಬಂದು ನಿಂತಿದೆ. ಗುರುವಾರ ಟೊಮೆಟೋ ಕನಿಷ್ಠ 200, ಗರಿಷ್ಠ 680 ಹಾಗೂ ಮಾದರಿ ಟೊಮೆಟೋ 350 ರೂ.ಗಳಿಗೆ ಹರಾಜಾಗಿದೆ. ಆದರೆ, ಕೆಲವು ಮಂಡಿಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೋ 800 ರ ಗಡಿ ದಾಟಿ ಹರಾಜಾಗಿರುವುದು ದಾಖಲಾಗಿದೆ.
– ಕೆ.ಎಸ್.ಗಣೇಶ್