Advertisement

Tomato Price: ಮತ್ತೆ ಏರಿಕೆ ಕಂಡ ಟೊಮೆಟೋ ದರ!

01:23 PM Nov 09, 2023 | Team Udayavani |

ಚಿಕ್ಕಬಳ್ಳಾಪುರ: ಹಲವು ತಿಂಗಳ ಹಿಂದೆ ಟೊಮೆಟೋ 15 ಕೆಜಿ ಬಾಕ್ಸ್‌ ದಾಖಲೆಯ 2,000 ರೂ.ಗಡಿ ದಾಟಿ ಗ್ರಾಹಕರನ್ನು ತೀವ್ರ ಕಂಗಾಲಾಗಿಸಿ ಮತ್ತೆ ಪಾತಾಳಕ್ಕೆ ಕುಸಿದಿದ್ದ ಟೊಮೆಟೋ ದರ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆ ಕಂಡಿದೆ.

Advertisement

ಕೆಲ ದಿನಗಳ ಹಿಂದೆಯಷ್ಟೇ 15 ಕೆ.ಜಿ. ಬಾಕ್ಸ್‌ ಕೇವಲ 100, 150 ರೂಗೆ ಮಾರಾಟಗೊಂಡಿತ್ತು. ಈಗ ಎರಡು, ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ದರ ನಾಗಲೋಟದಲ್ಲಿ ಸಾಗಿದ್ದು 15 ಕೆ.ಜಿ. ಬಾಕ್ಸ್‌ 500 ರೂ.ಗಡಿ ದಾಟಿದ್ದು ಇನ್ನಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

15 ಕೆ.ಜಿ ಬಾಕ್ಸ್‌ ಟೊಮೆಟೋ ರೂ.450-500 : ಸದ್ಯ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ 15 ಕೆಜಿ ಬಾಕ್ಸ್‌ 400, 450 ರಿಂದ 500ರೂ. ವರೆಗೂ ಮಾರಾಟಗೊಂಡರೆ ಜಿಲ್ಲೆಯಲ್ಲಿ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಹೊಂದಿರುವ ಚಿಂತಾಮಣಿಯಲ್ಲಿ ಬಾಕ್ಸ್‌ 500 ರೂ ವರೆಗೂ ಮಾರಾಟಗೊಂಡಿದೆ. ಟೊಮೆಟೋ ದರ ದಿಢೀರ್‌ ಏರಿಕೆಯಿಂದ ಒಂದು ಕಡೆ ಟೊಮೆಟೋ ಬೆಳೆಗಾರರಲ್ಲಿ ಸಂತಸ ಮೂಡಿದರೆ ಗ್ರಾಹಕರನ್ನು ತೀವ್ರ ಚಿಂತೆಗೀಡು ಮಾಡಿದೆ.

ಎರಡು, ತಿಂಗಳ ಹಿಂದೆ ಟೊಮೆಟೋ ದರ ವಿಪರೀತ ಏರಿಕೆಗೊಂಡು ದೇಶಾದ್ಯಾಂತ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಟೊಮೆಟೋಗೆ ಪರ್ಯಾಯವಾಗಿ ಹುಣಸೆ, ನಿಂಬೆ ಹಣ್ಣುಗಳನ್ನು ಬಳಸುವಂತಾಗಿತ್ತು. ಅಷ್ಟರ ಮಟ್ಟಿಗೆ ಟೊಮೆಟೋ ದರ ಗಗನಕ್ಕೇರಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ ಕೆಜಿ ಟೊಮೆಟೋ 200 ರೂ.ಗಡಿ ದಾಟಿತ್ತು. ಬಳಿಕ ಪಾತಾಳಕ್ಕೆ ಕುಸಿದಿದ್ದ ಟೊಮೆಟೋ ದರ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಪುಟಿದೇಳುತ್ತಿದ್ದು ದರ ಸಮರ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವ ಆತಂಕ ಗ್ರಾಹಕರಲ್ಲಿ ಮೂಡಿಸಿದೆ.

ಒಟ್ಟಿನಲ್ಲಿ ದೀಪಾವಳಿ ಸಂಭ್ರಮದಲ್ಲಿರುವ ಗ್ರಾಹಕರಿಗೆ ಟೊಮೆಟೋ, ಈರುಳ್ಳಿ ಬೆಲೆ ಏರಿಕೆ ಚಿಂತೆ ಬಹುವಾಗಿ ಕಾಡುತ್ತಿದ್ದರೆ ಬರದಿಂದ ಕಂಗೆಟ್ಟಿರುವ ರೈತರಿಗೆ ಟೊಮೆಟೋ ದರ ದಿಢೀರ್‌ನೆ ಹೆಚ್ಚಳ ಕಂಡಿರುವುದರಿಂದ ಸಹಜವಾಗಿಯೆ ರೈತರಿಗೆ ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

Advertisement

ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ಕೆಜಿ 40,50 ರೂ.: ಮಾರುಕಟ್ಟೆಯಲ್ಲಿ 15 ಕೆಜಿ ಟೊಮೇಟೋ ಬಾಕ್ಸ್‌ 500 ರೂ. ಗಡಿ ತಲುಪಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೋ ದರ ಗ್ರಾಹಕರ ಕೈ ಕಚ್ಚುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ 40-50 ರೂಗೆ ಮಾರಾಟವಾಗುತ್ತಿದೆ. ತೀವ್ರ ಬರದ ಪರಿಣಾಮ ಟೊಮೆಟೋ ಅವಕ ಮಾರುಕಟ್ಟೆ ಕಡಿಮೆ ಬರುತ್ತಿದ್ದು ಮತ್ತೂಂದು ಕಡೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿಯೆ ಟೊಮೆಟೋ ಬೆಳೆ ಸಾಕಷ್ಟು ಹಾನಿಯಾಗಿ ಅನೇಕ ರೋಗಗಳಿಗೆ ತೋಟಗಳು ತುತ್ತಾಗಿರುವ ಪರಿಣಾಮ ಟೊಮೆಟೋ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕೆ.ಜಿ. ಈರುಳ್ಳಿ 110 ರೂ.ಗೆ ಮಾರಾಟ!: ಒಂದೂವರೆ ತಿಂಗಳ ಹಿಂದೆ 3 ಕೆಜಿ ಈರುಳ್ಳಿ 100 ರೂ.ಗೆ ಸಿಗುತ್ತಿತ್ತು. ಆದರೆ ಈಗ ಕೆಜಿ ಈರುಳ್ಳಿ 110 ರೂ. ಗಡಿ ತಲುಪಿದ್ದು ದೀಪಾವಳಿ ಸಂಭ್ರಮದಲ್ಲಿರುವ ಗ್ರಾಹಕರಿಗೆ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತಿದೆ. ತಿಂಗಳಿಂದ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಏರುತ್ತಲೇ ಇದ್ದು ಕಡಿಮೆ ಆಗುವ ಸಾಧ್ಯತೆಗಳು ಇಲ್ಲವೇ ಇಲ್ಲ. ಏಕೆಂದರೆ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಚಿಲ್ಲರೆ ವ್ಯಾಪಾರಿಗಳಿಗೂ ಕೂಡ ಈರುಳ್ಳಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಈರುಳ್ಳಿ ಕೆಜಿ 100 ರೂಗೆ ಮಾರಾಟ ಆಗುತ್ತಿದ್ದು ಈರುಳ್ಳಿ ಪೂರೈಕೆ ಆಗದಿದ್ದರೆ ಬೆಲೆ ಇನ್ನಷ್ಟು ಹೆಚ್ಚಳ ಆಗುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ.

ಎರಡು ದಿನಗಳಿಂದ ಟೊಮೆಟೋ ದರ ಏರಿಕೆಗೊಂಡಿದೆ. 15 ಕೆಜಿ ಟೊಮೆಟೋ ಬಾಕ್ಸ್‌ ಎರಡು ಮೂರು ದಿನಗಳ ಹಿಂದೆ ಕೇವಲ 150, ಗುಣಮಟ್ಟದ ಟೊಮೆಟೋ 200 ರೂ ವರೆಗೂ ಮಾರಾಟ ಆಗುತ್ತಿತ್ತು. ಈಗ 15 ಕೆಜಿ ಟೊಮೆಟೋ ಬಾಕ್ಸ್‌ 500ರೂ.ವರೆಗೂ ಮಾರಾಟ ಆಗುತ್ತಿದೆ. ಟೊಮೆಟೋ ದರ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಮಂಜುನಾಥ, ಎಪಿಎಂಸಿ ವರ್ತಕ, ಚಿಕ್ಕಬಳ್ಳಾಪುರ

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next