ಚನ್ನಪಟ್ಟಣ: ಟೊಮೇಟೊ ಬೆಲೆ ಏರಿಕೆ ತಗ್ಗಿದ ಬೆನ್ನಲ್ಲೇ ಈರುಳ್ಳಿ ದರ ಏರು-ಪೇರು ಆಗುತ್ತಿರುವ ನಡುವೆಯೇ ಏಲಕ್ಕಿ ಬಾಳೆಹಣ್ಣಿನ ದರ ಗಗನಕ್ಕೆ ತಲುಪಿದ್ದು, ಕೆ.ಜಿ.ವೊಂದಕ್ಕೆ ನೂರು ರೂಪಾಯಿಗೂ ಹೆಚ್ಚಾಗಿದೆ. ರೇಷ್ಮೆ, ತೆಂಗು, ರಾಗಿ, ಭತ್ತ, ನಾಮಧಾರಿ ಜೋಳ, ತರಕಾರಿ ಬೆಳೆಗಳು, ವೀಳ್ಯ ದೆಲೆ, ತುಳಸಿ ಹಾಗೂ ಇನ್ನಿತರೆ ಬೆಳೆ ಗಳನ್ನು ಬೆಳೆಯುವಲ್ಲಿ ತಾಲೂಕಿನ ರೈತರು ಹೆಸರುವಾಸಿ ಯಾಗಿದ್ದು, ಏಲಕ್ಕಿ ಬಾಳೆಯನ್ನು ಕೂಡ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯ ಲಾಗುತ್ತದೆ.
ಬಾಳೆ ಹಣ್ಣು ಪೂರೈಕೆಯಲ್ಲಿ ವ್ಯತ್ಯಯ: ತೆಂಗಿನಕಾಯಿ ಹಾಗೂ ಏಲಕ್ಕಿ ಬಾಳೆ ಕಾಯಿ ತಾಲೂಕಿನಿಂದ ಬೆಂಗಳೂರು ಸೇರಿದಂತೆ ಬೇರೆ ಕಡೆ ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ ದು ಮಾಡಲಾಗುತ್ತದೆ. ಬಾಳೆ ದರ ಏರಿಕೆಗೆ ಹಲವಾರು ಕಾರಣ ಗಳಿದ್ದು, ಅದರಲ್ಲಿ ಮಾರುಕಟ್ಟೆಗೆ ಬಾಳೆ ಹಣ್ಣು ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಹಾಗೂ ಸಾಲು ಹಬ್ಬಗಳು ಬರು ತ್ತಿರುವುದರಿಂದ ದರ ಏರಿಕೆಯಾಗಿದೆ ಎಂಬುದು ವರ್ತಕರ ಪ್ರತಿಪಾದನೆಯಾಗಿದೆ.
ಸಾಲು ಸಾಲು ಹಬ್ಬ: ಮುಂದಿನ ದಿನಗಳಲ್ಲಿ ವರ ಮಹಾಲಕ್ಷ್ಮೀ ಗೌರಿಹಬ್ಬ, ಮಹಾಲಯ ಅಮಾ ವಾಸ್ಯೆ, ಆಯುಧ ಪೂಜೆ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಬೇಡಿಕೆ ಅಧಿಕ ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಬೆಲೆ ನಿಯಂತ್ರಿಸದಿದ್ದಲ್ಲಿ ಬೆಲೆ ಏರಿಕೆ ಇನ್ನು ಅಧಿಕ ಗೊಳ್ಳಲಿದೆ ಎಂಬುದು ವ್ಯಾಪಾರಸ್ಥರ ಸಲಹೆ ಯಾಗಿದೆ. ಬೆಂಗಳೂರಿನ ಬಾಳೆಹಣ್ಣು ಮಾರು ಕಟ್ಟೆಗೆ ತಮಿಳುನಾಡಿನಿಂದ ನಿತ್ಯವೂ 1,500 ಕ್ವಿಂಟಾಲ್ ಪೂರೈಕೆಯಾಗುತ್ತಿತ್ತು. ಆದರೆ, ಸದ್ಯ ದಿನ ನಿತ್ಯ 1000 ಕ್ವಿಂಟಾಲ್ ಮಾತ್ರ ಪೂರೈಕೆಯಾಗುತ್ತಿದ್ದು, ದರ ಏರಿಕೆ ಇದು ಒಂದು ಕಾರಣವಾಗಿದೆ ಎನ್ನುತ್ತಾರೆ ತೋಟ ಗಾರಿಕೆ ಇಲಾಖೆ ಅಧಿಕಾರಿಗಳು.
ಮಧ್ಯವರ್ತಿಗಳ ತಂತ್ರಗಾರಿಕೆ: ಬಾಳೆ ಬೆಳೆಗೆ ಯಾವುದೇ ನಿರ್ದಿಷ್ಟ ಋತುಮಾನವಿಲ್ಲ. ಹೀಗಾಗಿ ಎಲ್ಲ ಕಾಲದಲ್ಲೂ ಬೆಳೆಯಬಹುದು, ಈಗ ಪೂರೈಕೆ ಮತ್ತು ಬೇಡಿಕೆಯ ಅಂತರ ಇರುವುದು ಅಚ್ಚರಿ ಮೂಡಿಸಿದೆ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಏನೋ ಸಮಸ್ಯೆಯಾಗಿದೆ. ಮಾರುಕಟ್ಟೆಗೆ ಬಾಳೆಹಣ್ಣು ಪೂರೈಕೆ ಕೊರತೆಯಾಗುತ್ತಿರುವುದು ಹವಾಮಾನ ಪ್ರೇರಿತ ವಲ್ಲ. ಮಧ್ಯವರ್ತಿಗಳ ತಂತ್ರಗಾರಿಕೆಯಿಂದ ದರ ಏರಿಕೆ ಸೃಷ್ಟಿಯಾಗುತ್ತಿರಬಹುದು ಎಂದು ವರ್ತಕರು ಅನುಮಾನ ವ್ಯಕ್ತಪಡಿಸುತ್ತಾರೆ.
ಮಳೆ ಕೊರತೆ, ಇಳುವರಿ ಕಡಿಮೆ: ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿರುವುದು ಕೂಡ ಬಾಳೆ ಬೆಳೆ ಮೇಲೆ ಪರಿಣಾಮ ಬೀರಿದು, ಕೊಳವೆ ಬಾವಿಗಳನ್ನು ಆಶ್ರಯಿಸಿ ಬಾಳೆಹಣ್ಣು ಬೆಳೆಯುತ್ತಾರೆ. ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿತವಾಗಿ ಇಳುವರಿ ಕಡಿಮೆಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಪಚ್ಚ ಬಾಳೆಗಿಂತ ಏಲಕ್ಕಿ ಬೇಡಿಕೆ ಹೆಚ್ಚು :
ಬಾಳೆಹಣ್ಣುಗಳಲ್ಲಿ ಏಲಕ್ಕಿ ಹಾಗೂ ಪಚ್ಚಬಾಳೆ ಎಂಬ ಎರಡು ವಿಧ, ಏಲಕ್ಕಿ ಬಾಳೆಗೆ ಅಧಿಕ ಬೇಡಿಕೆ ಇದ್ದು, ಇದರ ದರ ಕೆ.ಜಿ.ಗೆ ಯಾವಾಗಲೂ ಐವತ್ತರಿಂದ ನೂರರವರೆಗೆ ಇದ್ದೇ ಇರುತ್ತದೆ. ಪಚ್ಚೆ ಬಾಳೆಯೂ ಕೂಡ ಸಾಮಾನ್ಯವಾಗಿ ಕೆ.ಜಿ.ಗೆ ಐವತ್ತರ ಆಸುಪಾಸಿನಲ್ಲಿ ಇರುತ್ತದೆ. ಹಬ್ಬ ಹರಿದಿನ ಹಾಗೂ ಮದುವೆ ಸುಗ್ಗಿಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಪಚ್ಚಬಾಳೆಯನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ರಾಜ್ಯದ ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆದ ಬಾಳೆ ಹಾಗೂ ನೆರೆ ರಾಜ್ಯಗಳಿಂದಲೂ ವಹಿವಾಟು ನಡೆಯುತ್ತದೆ.
ಎಪಿಎಂಸಿ ಆವರಣದಲ್ಲಿ ಇದ್ದ ಮಳಿಗೆಗಳಲ್ಲಿ ಏಲಕ್ಕಿ ಬಾಳೆ ಹಣ್ಣು ಅಂಗಡಿ ತೆರೆದ ಕೆಲವೇ ತಾಸುಗಳಲ್ಲಿ ಮಾರಾಟ ವಾಗಿವೆ. ನಮಗೇ ಸರಿಯಾಗಿ ಹಣ್ಣು ಪೂರೈಕೆಯಾಗುತ್ತಿಲ್ಲ. ದರ ಏರಿಕೆ ಯಿಂದಾಗಿ ಗ್ರಾಹಕರೂ ಏಲಕ್ಕಿ ಬಾಳೆಹಣ್ಣು ಕೊಂಡುಕೊಳ್ಳಲು ಮುಂದಾಗುತ್ತಿಲ್ಲ.
-ಕುಮಾರ್, ಮಳೂರುಪಟ್ಟಣ, ಬಾಳೆಹಣ್ಣು ವರ್ತಕ, ಚನ್ನಪಟ್ಟಣ
ಹಬ್ಬಗಳ ಹಿನ್ನೆಲೆಯಲ್ಲಿ ದರ ಏರಿಕೆಯಾಗಿರುವ ಏಲಕ್ಕಿ ಬಾಳೆಯು ರೈತರು ಹಾಗೂ ಗ್ರಾಹಕರಿಗೆ ಹೊರೆ ಯಾಗಿದೆ. ಆದರೆ, ಮಧ್ಯವರ್ತಿಗಳಿಗೆ ಮಾತ್ರ ಹೆಚ್ಚಾಗಿ ಲಾಭ ಸಿಗುತ್ತಿದೆ. ಈ ದಲ್ಲಾಳಿಗಳ ಹಾವಳಿ ತಪ್ಪಿದಾಗ ಮಾತ್ರ ಬೆಳೆಗಾರರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ.
-ಪಟ್ಲು ಮಂಜುನಾಥ್, ಗ್ರಾಹಕ
-ಎಂ.ಶಿವಮಾದು