ಮಂಗಳೂರು: ಕೇರಳದಲ್ಲಿ ಟೊಮೇಟೊ ಜ್ವರ ಕಂಡುಬಂದಿ ರುವುದರಿಂದ ದಕ್ಷಿಣ ಕನ್ನಡದಲ್ಲಿಯೂ ವಿಶೇಷ ನಿಗಾ ಇರಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಟೊಮೇಟೊ ಜ್ವರದ ಪ್ರಕರಣ ದಾಖಲಾಗಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಮಲೇರಿಯಾ ನಿಯಂತ್ರಣ ಕಾರ್ಯಕರ್ತರು, ಆರೋಗ್ಯ ಸುರಕ್ಷಾ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯು ಕಾರ್ಯಕರ್ತರು ಮನೆ ಭೇಟಿ ನೀಡಿ ಡೆಂಗ್ಯೂ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಅವರಲ್ಲಿ ಟೊಮೇಟೊ ಜ್ವರದ ಕುರಿತು ಮನೆ ಮಂದಿ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ.
ಜಿಲ್ಲೆಯ ಸರಕಾರಿ, ಖಾಸಗಿ, ಮೆಡಿಕಲ್ ಕಾಲೇಜು ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ರೀತಿಯ ಲಕ್ಷಣಗಳಿರುವ ಮಕ್ಕಳು ಚಿಕಿತ್ಸೆ ಪಡೆದಿದ್ದರೆ ಮಾಹಿತಿ ಅಪ್ಡೇಟ್ ಮಾಡುವಂತೆಯೂ ಸೂಚಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.