Advertisement
ಸಂಜೆ 5.26ರ ಸಮಯದಲ್ಲಿ ಸಿದ್ಧಾರ್ಥ ಅವರು ಟೋಲ್‌ಗೇಟ್ ದಾಟಿ ಮಂಗಳೂರಿನತ್ತ ಸಾಗಿದ್ದರು. ಚಾಲಕ ನೀಡಿದ ಮಾಹಿತಿಯಂತೆ ಕಾರು ರಾತ್ರಿ 7ರ ವೇಳೆಗೆ ಪಂಪ್‌ವೆಲ್ ಮುಟ್ಟಿತ್ತು. ಬ್ರಹ್ಮರಕೂಟ್ಲುನಿಂದ ಪಂಪ್‌ವೆಲ್‌ಗೆ ಬರಲು 15ರಿಂದ 20 ನಿಮಿಷ ಸಾಕು. ಹಾಗಾದರೆ ಮಂಗಳೂರಿಗೆ ಬರಲು ಅಷ್ಟು ವಿಳಂಬ ಯಾಕೆ ಎಂಬ ಪ್ರಶ್ನೆ ಎದುರಾಗಿದೆ.
ತನಿಖೆಯನ್ನು ಪೊಲೀಸರು ವಿವಿಧ ಆಯಾಮಗಳಿಂದ ನಡೆಸುತ್ತಿದ್ದಾರೆ. ಸಿದ್ಧಾರ್ಥ್ ಅವರಿಗೆ ಯಾರ ಜತೆಗಾದರೂ ಮನಸ್ತಾಪವಿತ್ತೇ, ಜಗಳವಾಗಿತ್ತೇ, ಒತ್ತಡ-ಖನ್ನತೆಗೆ ಒಳಗಾಗಿ ದ್ದರೇ, ಬೆದರಿಕೆಗಳಿದ್ದವೇ ಎಂಬಿತ್ಯಾದಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಮವಾರದ ಪ್ರಯಾಣದುದ್ದಕ್ಕೂ ಮೊಬೈಲ್ ಕರೆ ವಿವರ ಪೊಲೀಸರು ಕಲೆ ಹಾಕುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಎಸ್.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಸಿದ್ಧಾರ್ಥ್ ಅವರ ಪತ್ನಿ ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ಒಂದು ತಂಡವು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ತೆರಳಿದ್ದು, ಸಿದ್ಧಾರ್ಥ್ ಅವರ ಸಂಬಂಧಿಕರನ್ನು ಭೇಟಿಯಾಗಿ ವಿವರ ಪಡೆಯಲಿದೆ. ಅವರ ಕಚೇರಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ.
Related Articles
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಕೆಫೆ ಕಾಫಿ ಡೇ ಸಂಸ್ಥಾಪಕನ ನಾಪತ್ತೆ ಪ್ರಕರಣ ರಾಜ್ಯ ಮತ್ತು ರಾಷ್ಟ್ರಮಟ್ಟದ ಉದ್ಯಮ ವಲಯದಲ್ಲಿ ಸಂಚಲನ ತಂದಿದೆ.
Advertisement
ಮಂಗಳೂರಿನ ನಂಟು !ಸಿದ್ಧಾರ್ಥ್ ಮೂಲತಃ ಚಿಕ್ಕಮಗಳೂರಿನವರಾದರೂ ಮಂಗಳೂರಿನ ಜತೆಗೆ ನಿಕಟ ಸಂಬಂಧ ಹೊಂದಿದ್ದರು. ಹುಟ್ಟೂರಲ್ಲಿ ಪ್ರಾಥಮಿಕ – ಪ್ರೌಢಶಿಕ್ಷಣ ಮುಗಿಸಿದ ಬಳಿಕ ಸಿದ್ಧಾರ್ಥ್ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದರು. ಆ ಕಾಲದಲ್ಲೇ ಮಂಗಳೂರು ಮತ್ತು ಜಿಲ್ಲೆಯ ಬಗ್ಗೆ ವಿಶೇಷ ಆಸ್ಥೆ ಬೆಳೆಸಿಕೊಂಡಿದ್ದರು. ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡರು. ಮಂಗಳೂರು ಸೇರಿದಂತೆ ದ.ಕ., ಉಡುಪಿ ಜಿಲ್ಲೆಯಾದ್ಯಂತ ಸಿದ್ಧಾರ್ಥ್ ಮಾಲಕತ್ವದ ಕೆಫೆ ಕಾಫಿ ಡೇ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನೂರಾರು ಉದ್ಯೋಗಿಗಳಿದ್ದಾರೆ. ಮಂಗಳೂರಿನ ಕೆಲವು ಶಿಕ್ಷಣ ಸಂಸ್ಥೆಗಳು ಇತ್ತೀಚೆಗಷ್ಟೇ ನಡೆಸಿದ್ದ ಖಾಸಗಿ ಕಾರ್ಯಕ್ರಮಗಳಲ್ಲೂ ಸಿದ್ಧಾರ್ಥ್ ಭಾಗವಹಿಸಿ ವ್ಯವಹಾರ ಕ್ಷೇತ್ರ ಸಂಬಂಧಿತ ವಿಚಾರದಲ್ಲಿ ಪ್ರಧಾನ ಭಾಷಣ ಮಾಡಿದ್ದರು.