ಸುರತ್ಕಲ್: ಸುರತ್ಕಲ್ ಟೋಲ್‌ಗೇಟ್ ಮುಚ್ಚಬೇಕು ಇಲ್ಲವೇ ಹೆಜಮಾಡಿ ಟೋಲ್‌ಗೇಟ್ ಜತೆ ವಿಲೀನಗೊಳಿಸಬೇಕು ಎಂದು ಏಳು ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ಟೋಲ್ ವಿರೋಧಿ ಸಮಿತಿಯೊಂದಿಗೆ ಸೋಮವಾರ ತುರ್ತು ಸಭೆ ನಡೆಸಿ ಚರ್ಚಿಸಿದರು.
ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹಾಜರಿದ್ದು, ರಾಜ್ಯದ ಅಪರ ಕಾರ್ಯದರ್ಶಿಗಳ ಸಮ್ಮುಖ ನಡೆದ ಸಭೆಯಲ್ಲಿ ಟೋಲ್‌ಗೇಟ್ ವಿಲೀನಗೊಳಿಸುವ ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡರು, ಆದರೆ ಕೇಂದ್ರದ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ನಿರ್ಧಾರ ಕೈಗೊಂಡಿಲ್ಲ ಎಂದರು.
ಟೋಲ್‌ಗೇಟ್ ಸಮಸ್ಯೆ ಬಗೆಹರಿಸುವ ಸಲುವಾಗಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ನವೆಂಬರ್ ಮೊದಲ ವಾರದಲ್ಲಿ ಸಭೆ ನಡೆಸಿ, ತೀರ್ಮಾನವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗುವುದು. ಬೆಂಗಳೂರಿನಲ್ಲಿಯೂ ವಾರದೊಳಗಾಗಿ ಟೋಲ್ ವಿರೋಧಿ ಹೋರಾಟ ಸಮಿತಿಯೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಈಗ ನಡೆಯುತ್ತಿರುವ ಧರಣಿಯ ಬಗ್ಗೆ ಪುನರ್‌ವಿಮರ್ಶೆ ಮಾಡುವಂತೆ ಮನವಿ ಮಾಡಿದರು. ಕೂಳೂರು ಹಳೆ ಸೇತುವೆಯನ್ನು ಕಾಮಗಾರಿ ಸಂದರ್ಭ ಮುಚ್ಚದೆ ಸ್ಥಳೀಯರ, ಜನಪ್ರತಿನಿ ಧಿಗಳ ಅಭಿ ಪ್ರಾಯ ಸಂಗ್ರಹಿಸಲಾಗುವುದು. ಇದಕ್ಕಾಗಿ ಉಪಸಮಿತಿ ನೇಮಕ ಮಾಡಲಾಗಿದೆ ಎಂದರು.
“ಧರಣಿ ನಿಲ್ಲದು’
ಟೋಲ್‌ಗೇಟ್ ಮುಚ್ಚುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಈ ಹಿಂದೆ ರಾಜ್ಯ ಮಟ್ಟದಲ್ಲಿಯೇ ಸಭೆ ನಡೆದಿದ್ದರೂ ಸ್ಪಷ್ಟ ನಿರ್ಧಾರವಾಗಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ವರೆಗೆ ಧರಣಿ ಕೈಬಿಡುವುದಿಲ್ಲ. ಜಿಲ್ಲಾ ಧಿಕಾರಿಗಳು ಜನತೆಯ ಹೋರಾಟವನ್ನು ಮನ್ನಿಸಿ ಸಭೆ ಕರೆದು ಮಾತುಕತೆ ನಡೆಸಿರುವುದು ಶ್ಲಾಘನಾರ್ಹ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.