Advertisement

ಟೋಲ್ ಬಂದ್‌ ಮಾಡಿ ಧರಣಿ

08:29 AM Jun 25, 2019 | Suhan S |

ಕುಷ್ಟಗಿ: ಟೋಲ್ ಪ್ಲಾಜಾ ನೌಕರರ ಸಾಮೂಹಿಕ ವಜಾ ಖಂಡಿಸಿ, ಪುನರ್‌ ನಿಯುಕ್ತಿಗೆ ಒತ್ತಾಯಿಸಿ ವಜಾಗೊಂಡ ನೌಕರರು ಸೋಮವಾರ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ವಣಗೇರಿ ಟೋಲ್ ಪ್ಲಾಜಾ ಮುತ್ತಿಗೆ ಹಾಕಿ, ಟೋಲ್ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಟೋಲ್ ಪ್ಲಾಜಾದಲ್ಲಿ ಕಾರ್ಯನಿರ್ವಹಿಸುವ 400 ನೌಕರರನ್ನು ಫೆ.3ರಂದು ಯಾವುದೇ ಮುನ್ಸೂಚನೆ ಇಲ್ಲದೇ ತೆಗೆದು ಹಾಕಿದ್ದರು. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಹೋರಾಟ, ಪ್ರತಿಭಟನೆ ನಡೆದಿದೆ. ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಿಗದಿಗೊಳಿಸಲಾಗಿತ್ತು. ಆದರೆ ಈ ಸಭೆಗೆ ಹುನಗುಂದ-ಹೊಸಪೇಟೆ ಒಎಸ್‌ಇ ಕಂಪನಿ ವ್ಯಾಪ್ತಿಯ ಮೂರು ಟೋಲ್ ಗೇಟ್ ಪ್ರೊಜೆಕ್ಟ್ ಮ್ಯಾನೇಜರ್‌ ಮಧುಸೂದನ್‌ ಹಾಜರಾಗಿರಲಿಲ್ಲ. ಹೀಗಾಗಿ ಸಭೆಯಲ್ಲಿ ಯಾವುದೇ ನಿರ್ಣಯ ಕ್ರಮಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ನಂತರ ಸಭೆಯನ್ನು ಸಂಜೆ 5ಕ್ಕೆ ಮುಂದೂಡಲಾಯಿತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯ ಕೆ. ಮಹೇಶ, ವಿಜಯ ನಾಯಕ್‌, ನೇಮಣ್ಣ ಮೇಲಸಕ್ರಿ, ಪುರಸಭೆ ಸದಸ್ಯರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ವಣಗೇರಾ ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದರು. ಮಧ್ಯಾಹ್ನ 1:10ರಿಂದ ರಾತ್ರಿ 8:30ರ ವರೆಗೂ ಟೋಲ್ ಗೇಟ್‌ನಲ್ಲಿ ಶುಲ್ಕ ಮುಕ್ತಗೊಳಿಸಿ ಪ್ರತಿಭಟನೆ ನಡೆಸಿದರು. ಇಂದು (ಜೂ. 25) ಬೆಳಗ್ಗೆ 8:00 ಗಂಟೆಯಿಂದ ಪ್ರತಿಭಟನೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ, ದೊಡ್ಡನಗೌಡ ಪಾಟೀಲ ಮತ್ತಿತರರು ಟೋಲ್ ಪ್ಲಾಜಾದಲ್ಲಿ ಊಟ ತರಿಸಿ, ಪ್ರತಿಭಟನಾ ನಿರತರೊಂದಿಗೆ ಊಟ ಮಾಡಿದರು. ಮುಂಜಾಗೃತಾ ಕ್ರಮದ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋ ಬಸ್ತ್ ಕಲ್ಪಿಸಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ಅಮರೇಗೌಡ ಬಯ್ನಾಪುರ, ಹೆದ್ದಾರಿ ಟೋಲ್ ಪ್ಲಾಜಾ, ನಿರ್ಮಾಣದ ವೇಳೆ ಸ್ಥಳೀಯವಾಗಿ ಭೂಮಿ, ಮನೆ ಕಳೆದುಕೊಂಡಿರುವವರಿಗೆ ಅರ್ಹತೆ ಮೇರೆಗೆ ಉದ್ಯೋಗ ಕಲ್ಪಿಸುವ ಮೊದಲಾದ್ಯತೆಯಾಗಿ ನ್ಯಾಯಯುತ ಹಕ್ಕು ಕೇಳಿದ್ದೇವೆ. ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಮಗೂ ಕಾನೂನಿನ ಅರಿವು ಇದೆ. ಸೋಮವಾರ 12:30ಕ್ಕೆ ನಿಗದಿಯಾಗಿದ್ದ ಸಭೆಗೆ ನಮ್ಮನ್ನು ಆಹ್ವಾನಿಸರಲಿಲ್ಲ. ನಾವೇ ಖುದ್ದು ಫೋನ್‌ ಮಾಡಿದರೆ ಸಭೆಯನ್ನು ಅದೇ ದಿನ ಸಂಜೆಗೆ ಮುಂದೂಡಿದ್ದರು. ಈ ವಿಳಂಬದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ನ್ಯಾಯ ಸಿಗುವರೆಗೂ ಪ್ರತಿಭಟನೆ ಮುಂದುವರಿಯಲಿದೆ.

ಈ ಟೋಲ್ ಆರಂಭವಾಗಿ 7 ವರ್ಷಗಲಾಗಿದ್ದು, ಫೆ.3ರವರೆಗೂ ಸ್ಥಳೀಯರೇ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಒಎಸ್‌ಇ ಹಾಗೂ ಜಿಎಂಆರ್‌ ಕಂಪನಿ ಕಾರ್ಮಿಕ ಗುತ್ತಿಗೆ ಬದಲಿ ಮಾಡಿರುವುದು, ಹೊಸದಾಗಿ ಟೆಂಡರ್‌ ಕರೆದಿರುವುದು ಸದರಿ ಕಂಪನಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸುವುದಿಲ್ಲ. ಸ್ಥಳೀಯರಿಗೆ ಕೆಲಸ ನೀಡಬೇಕು ಅಂತೆಯೇ 7 ವರ್ಷದವರೆಗೂ ಕೆಲಸ ನೀಡಿದೆ. ಪಿಎಫ್‌, ವೈದ್ಯಕೀಯ ಇತ್ಯಾದಿ ನ್ಯಾಯಯುತ ಕಾರ್ಮಿಕ ಸೌಲತ್ತು ಕೇಳಿದ್ದರಿಂದ 400 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ಅನ್ಯ ಜಿಲ್ಲೆ, ರಾಜ್ಯದವರನ್ನು ನೇಮಿಸಿಕೊಳ್ಳಲಾಗಿದೆ. ಸ್ಥಳೀಯರನ್ನು ಕೆಲಸದಿಂದ ಯಾಕೆ ತೆಗೆದು ಹಾಕಿದರು ಎನ್ನುವುದನ್ನು ಕಂಪನಿಯವರು ತಿಳಿಸುತ್ತಿಲ್ಲ. ನಮ್ಮ ಕರೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಂಪನಿಯ ವೈಫಲ್ಯವನ್ನು ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಕಂಪನಿಯವರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next