ಟೋಕ್ಯೊ: ಪ್ಯಾರಾಲಿಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ವಿಶ್ವದ ನಂ.1 ಆಟಗಾರ ಪ್ರಮೋದ್ ಭಗತ್ ಸೆಮಿಫೈನಲ್ ಪ್ರವೇಶಿಸಿರುವುದು ಶುಭ ಸಮಾಚಾರ. ಹಾಗೆಯೇ ಸುಹಾಸ್ ಯತಿರಾಜ್, ತರುಣ್ ಧಿಲ್ಲೋನ್, ಕೃಷ್ಣ ನಗರ್ ಗೆಲುವಿನ ಆರಂಭ ಕಾಣುವಲ್ಲಿ ಯಶಸ್ವಿಯಾಗಿದ್ದಾರೆ.
33 ವರ್ಷದ, ಹಾಲಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಪ್ರಮೋದ್ ಭಗತ್ ಉಕ್ರೇನಿನ ಅಲೆಕ್ಸಾಂಡರ್ ಶಿರ್ಕೋವ್ ವಿರುದ್ಧ 26 ನಿಮಿಷಗಳಲ್ಲಿ 21-12, 21-9 ಅಂತರದ ಗೆಲುವು ಸಾಧಿಸಿದರು; ಗುಂಪಿನ ಅಗ್ರಸ್ಥಾನಿಯಾಗಿ ಎಸ್‌ಎಲ್3 ವಿಭಾಗದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ನನ್ನ ಇಂದಿನ ಪ್ರದರ್ಶನ ತೃಪ್ತಿ ನೀಡಿದೆ. ಶಿರ್ಕೋವ್ ಕೂಡ ಉತ್ತಮ ಆಟಗಾರ. ಅವರ ಕೆಲವು ಸ್ಟ್ರೋಕ್‌ಗಳು ಅತ್ಯುತ್ತಮವಾಗಿದ್ದವು. ಸೆಮಿಫೈನಲ್ ತಲುಪಿರುವುದಕ್ಕೆ ಖುಷಿಯಾಗಿದೆ’ ಎಂದು ಪ್ರಮೋದ್ ಭಗತ್ ಪ್ರತಿಕ್ರಿಯಿಸಿದ್ದಾರೆ.
“ಎ’ ವಿಭಾಗದ ಪಂದ್ಯದಲ್ಲಿ ಸುಹಾಸ್ ಯತಿರಾಜ್ ಕೇವಲ 19 ನಿಮಿಷಗಳಲ್ಲಿ ಜರ್ಮನಿಯ ಜಾನ್ ನಿಕ್ಲಾಸ್ ಪಾಟ್ ಅವರನ್ನು 21-9, 21-3 ಅಂತರದಿಂದ ಸುಲಭದಲ್ಲಿ ಸೋಲಿಸಿದರು. “ಬಿ’ ವಿಭಾಗದ ಮುಖಾಮುಖೀಯಲ್ಲಿ ತರುಣ್ ಧಿಲ್ಲೋನ್ ಥಾಯ್ಲೆಂಡಿನ ಸಿರಿಪಾಂಗ್ ಟೀಮರೋಮ್ ವಿರುದ್ಧ 21-7, 21-13 ಅಂತರದ ಜಯ ಸಾಧಿಸಿದರು. ಕೃಷ್ಣ ನಗರ್ ಮಲೇಷ್ಯಾದ ಟೆರೆಸೋಹ್ ದಿಡಿನ್ ಅವರನ್ನು 22-20, 21-10 ಅಂತರದಿಂದ ಮಣಿಸಿದರು.
ವನಿತೆಯರಿಗೆ ಮಿಶ್ರಫಲ: ವನಿತೆಯರ ಎಸ್‌ಯು5 ವಿಭಾಗದ ದ್ವಿತೀಯ ಸಿಂಗಲ್ಸ್‌ನಲ್ಲಿ ಪಲಕ್ ಕೊಹ್ಲಿ ಟರ್ಕಿಯ ಜೆಹ್ರಾ ಬಾಗ್ಲಾರ್ ವಿರುದ್ಧ 21-12, 21-18 ಅಂಕಗಳ ಮೇಲುಗೈ ಸಾಧಿಸಿದರು. ಆದರೆ ಪಾರುಲ್ ಪರ್ಮಾರ್ ಚೀನಾದ ಚೆಂಗ್ ಹೆಫಾಂಗ್ ವಿರುದ್ಧ 8-21, 2-21 ಅಂತರದಿಂದ ಪರಾಭವಗೊಂಡರು. ಜರ್ಮನಿಯ ಕ್ಯಾಟ್ರಿನಾ ಸೀಬರ್ಟ್ ವಿರುದ್ಧದ ಮುಂದಿನ ಪಂದ್ಯದಲ್ಲೂ ಪಾರುಲ್ ಪರಾಭವಗೊಂಡು ನಾಕೌಟ್ ರೇಸ್‌ನಿಂದ ಹೊರಬಿದ್ದರು. ಸೀಬರ್ಟ್ ಗೆಲುವಿನ ಅಂತರ 23-21, 19-21, 21-15.
ವನಿತಾ ಡಬಲ್ಸ್‌ನಲ್ಲಿ ಪಲಕ್ ಕೊಹ್ಲಿ-ಪಾರುಲ್ ಪರ್ಮಾರ್ ಅವರನ್ನು ಚೀನಾದ ದ್ವಿತೀಯ ಶ್ರೇಯಾಂಕದ ಚೆಂಗ್ ಹೆಫಾಂಗ್-ಮಾ ಹುಯಿಹುಯಿ 21-7, 21-5 ಅಂತರದಿಂದ ಮಣಿಸಿದರು.