ಟೋಕ್ಯೊ: ದೆಹಲಿಯ ಕಿರೋರಿಮಲ್ ಕಾಲೇಜ್‌ನಲ್ಲಿ ಬಿಕಾಮ್ ಪದವಿ ಪಡೆದಿರುವ ಯೋಗೇಶ್ ಕಾಥುನಿಯ ಸೋಮವಾರ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಆದರೆ ಇದಕ್ಕೆ ಚಿನ್ನದಂತಹ ಮಹತ್ವವಿದೆ. ಇದಕ್ಕೂ ಕಾರಣವಿದೆ. ಈ ವ್ಯಕ್ತಿ ಪ್ಯಾರಾಲಿಂಪಿಕ್ಸ್‌ಗೆ ಕೋಚ್ ಇಲ್ಲದೇ ತರಬೇತಿ ನಡೆಸಿದ್ದಾರೆ.
ಕೊರೊನಾ ಕಾರಣಕ್ಕೆ 2020ರಲ್ಲಿ ಇಡೀ ದೇಶಾದ್ಯಂತ 6 ತಿಂಗಳು ನಿರಂತರವಾಗಿ ಲಾಕ್‌ಡೌನ್ ಮಾಡಲಾಗಿದ್ದು. ಆಗ ಯಾವುದೇ ಮೈದಾನಗಳು ತೆರೆದಿರಲಿಲ್ಲ. ಒಟ್ಟಾರೆ ಕೊರೊನಾದಿಂದ 18 ತಿಂಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ಬಹುತೇಕ ಲಾಕ್‌ಡೌನ್ ಸ್ಥಿತಿಯೇ ಇತ್ತು. ಬಹುತೇಕ ಮೈದಾನಗಳು ಇನ್ನೂ ತೆರೆದಿಲ್ಲ. ಇಂತಹ ಹೊತ್ತಿನಲ್ಲಿ ಯೋಗೇಶ್ ಮತ್ತೆ ಅಭ್ಯಾಸಕ್ಕೆ ತೆರಳಿದಾಗ ಸೂಕ್ತ ಮೈದಾನವೂ ಲಭ್ಯವಾಗಿರಲಿಲ್ಲ.
ಅದಕ್ಕಿಂತ ದುಃಖದ ಸಂಗತಿಯೆಂದರೆ ಅನ್ಯಾನ್ಯ ಕಾರಣಗಳಿಂದ ಅವರಿಗೆ ಕೋಚ್ ಕೂಡಾ ಸಿಗಲಿಲ್ಲ. ಆಧುನಿಕ ಜಗತ್ತಿನಲ್ಲಿ ಕ್ರೀಡೆ ಬಹಳ ಮುಂದುವರಿದಿದೆ. ಹೊಸ ತಂತ್ರಜ್ಞಾನಗಳು ಬಂದಿವೆ. ಅಂತಹ ಹೊತ್ತಿನಲ್ಲಿ ಮೂಲಭೂತ ಸೌಲಭ್ಯವೆನಿಸಿಕೊಂಡಿರುವ ತರಬೇತುದಾರನೇ ಇಲ್ಲವೆಂದರೆ ಹೇಗೆ? ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಈ ಹೊತ್ತಿನಲ್ಲೂ ಅವರು ತರಬೇತುದಾರರಿಲ್ಲದೇ ತರಬೇತಿ ನಡೆಸಿದ್ದಾರೆ!
ಎಂಟನೇ ವರ್ಷದಲ್ಲಿ ಪ್ಯಾರಾಲಿಸಿಸ್:
ಎಂಟನೇ ವರ್ಷದಲ್ಲಿ ಪ್ಯಾರಾಲಿಸಿಸ್ ಬಡಿದಿದ್ದರಿಂದ ಯೋಗೇಶ್ ಕಾಲಿನಲ್ಲಿ ನ್ಯೂನತೆ ಹೊಂದಿದ್ದಾರೆ. ಇವರೊಬ್ಬ ಯೋಧನ ಪುತ್ರ ಎನ್ನುವುದು ಗಮನಾರ್ಹ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.