ಟೋಕಿಯೊ: ವಿಶ್ವದ ಬೃಹತ್ ಕ್ರೀಡಾಕೂಟ ಟೋಕಿಯೊ ಒಲಿಂಪಿಕ್ಸ್ ಗೆ ಇಂದು ವರ್ಣರಂಜಿತ ತೆರೆ ಬೀಳಲಿದೆ. 17 ದಿನಗಳ ಕಾಲ ನಡೆದ ಕ್ರೀಡಾ ಕೂಟ ಇಂದು ಸಂಪನ್ನವಾಗಲಿದೆ.
ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಭಜರಂಗ್ ಪುನಿಯಾ ತ್ರಿವರ್ಣ ಧ್ವಜವನ್ನು ಹೊತ್ತು ಸಾಗಲಿದ್ದಾರೆ. ಸಂಜೆ 4.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಹಲವು ಪ್ರದರ್ಶನಗಳು ನಡೆಯಲಿದೆ.
ಕೂಟದ ಕೊನೆಯ ದಿನವಾದ ಇಂದು ಪುರುಷರ ಮ್ಯಾರಥಾನ್ ಫೈನಲ್, ಮಹಿಳಾ ರಿದಮಿಕ್ ಜಿಮ್ನಾಸ್ಟಿಕ್ಸ್ ಮತ್ತು ಮಹಿಳಾ ಬಾಸ್ಕೆಟ್‌ಬಾಲ್ ಪದಕ ಸುತ್ತಿನ ಪಂದ್ಯ ನಡೆಯುತ್ತಿದೆ. ಹ್ಯಾಂಡ್‌ಬಾಲ್, ಬಾಕ್ಸಿಂಗ್, ಟ್ರ್ಯಾಕ್ ಸೈಕ್ಲಿಂಗ್, ವಾಟರ್ ಪೋಲೋ ಮತ್ತು ವಾಲಿಬಾಲ್‌ಗಾಗಿ ಪದಕ ಪಂದ್ಯಗಳನ್ನು ಆಡಲಾಗುತ್ತದೆ.
ಇದನ್ನೂ ಓದಿ:23 ವರ್ಷದ ಯೋಧ… ನಾಯಕ್ ಸುಬೇದಾರ್ ನೀರಜ್ ಚೋಪ್ರಾ
ಭಾರತ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಶ್ರೇಷ್ಠ ಸಾಧನೆ ಮಾಡಿದೆ. 13 ವರ್ಷಗಳ ಬಳಿಕ ಭಾರತ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ, ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಈ ಸಾಧನೆ ಮಾಡಿದ್ದಾರೆ. ಭಾರತ ಈ ಕೂಟದಲ್ಲಿ ಒಟ್ಟು ಏಳು ಪದಕ ಗೆದ್ದುಕೊಂಡಿದೆ.
ಇಂದಿನ ಸಮಾರಂಭದಲ್ಲಿ ಒಲಿಂಪಿಕ್ಸ್ ಧ್ವಜವನ್ನು 2024ರಲ್ಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಫ್ರಾನ್ಸ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ತಿಂಗಳು 24ರಿಂದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆ ಕ್ರೀಡಾಕೂಟಕ್ಕೂ ಟೋಕಿಯೋ ಆತಿಥ್ಯ ನೀಡಲಿದೆ. ಸೆಪ್ಟೆಂಬರ್ 5ಕ್ಕೆ ಪ್ಯಾರಾಲಿಂಪಿಕ್ಸ್ ಮುಕ್ತಾಯಗೊಳ್ಳಲಿದೆ.