Advertisement

ಶೌಚದ ವಿಷ್ಯ

08:20 AM Feb 18, 2018 | |

ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ನಾನಾಗ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ. ಸುಮಾರು ಇಪ್ಪತ್ತು ಮನೆಗಳಿರುವ ಊರು. ಏಕೋಪಾಧ್ಯಾಯ ಶಾಲೆ. ಅದರಲ್ಲೇನೋ ವಿಶೇಷವಿಲ್ಲ ಎನ್ನಿ. ಆಗ ಬಹುತೇಕ ಶಾಲೆಗಳು ಇದ್ದದ್ದು ಹಾಗೆಯೇ. ಐದನೆಯ ತರಗತಿಯವರೆಗೆ ಇದ್ದ ಆ ಶಾಲೆಯಲ್ಲಿ ಒಂದೊಂದು ಉದ್ದ ಮಣೆಯಲ್ಲಿ  ಒಂದೊಂದು ತರಗತಿಯ ಮಕ್ಕಳು. ಒಂದನೆಯ ತರಗತಿಯ ಮಕ್ಕಳು ಮುಂದಿನ ಮಣೆಯಲ್ಲಿ ಕುಳಿತರೆ, ಐದರವರು ಹಿಂದಿನದರಲ್ಲಿ. ಈ ವ್ಯವಸ್ಥೆ ಪಾಠ ಮಾಡುವಾಗ ಬದಲಾಗುತ್ತಿತ್ತು. ಸಹಜವಾಗಿಯೇ ಶಾಲೆಯಲ್ಲಿ ಶೌಚಾಲಯ ಇರಲಿಲ್ಲ. ಮಧ್ಯಾಹ್ನ ಊಟಕ್ಕೆ ಗಂಟೆ ಹೊಡೆದಾಗ ಶಾಲೆಯ ಹಿಂಭಾಗದಲ್ಲಿದ್ದ ಕುರುಚಲು ಪೊದೆಗಳಿರುವ ಕಾಡಿಗೆ ಹುಡುಗಿಯರು ಹೋದರೆ, ಮುಂಭಾಗದಲ್ಲಿದ್ದ ಕೆರೆಯ ಆಚೆಗೆ ಹುಡುಗರು ಹೋಗುತ್ತಿದ್ದರು. ಆಗೆಲ್ಲ “ವಂದಕ್ಕೆ ಹೋಗೋದು’ ಅಂದರೆ ಬಲು ನಾಚಿಕೆಯ ಸಂಗತಿ (ಯಾರಿಗೂ ಬರೋದೇ ಇಲ್ವೇನೋ ಅನ್ನೋ ಹಾಗೆ!).

Advertisement

ಹುಡುಗಿಯರು ವಂದಕ್ಕೆ ಕೂರುವುದಕ್ಕೆ ಕಣ್ಣು ತಪ್ಪಿಸಿ ಕಷ್ಟಪಡುವುದು, ಹುಡುಗರು ನೋಡದೇ ಇದ್ದಾಗ ಓಡಿಹೋಗಿ ಕಾರ್ಯಕ್ರಮ ಮುಗಿಸಿಬರುವುದು ಬಲು ಸಾಹಸದ ಸಂಗತಿಯಾಗಿತ್ತು. ಆ ದಿನಗಳಲ್ಲಿ ಅದು ಅಷ್ಟೊಂದು ಅಪಮಾನಕರವಾದ ವಿಷಯವಾಗಿತ್ತು. ನಮ್ಮ ಶಾಲಾದಿನಗಳಲ್ಲಿ ಒಂದು ದಿನ ಹೀಗೆ ಮಧ್ಯಾಹ್ನ ಊಟದ ಗಂಟೆ ಹೊಡೆದಾಗ ನಾವು ವಂದಕ್ಕೆ ಹುಡುಗರ ಕಣ್ಣು ತಪ್ಪಿಸಿ ಹೋಗುವುದರ ಕುರಿತು ಗಹನ ಚರ್ಚೆಯಲ್ಲಿ ಮುಳುಗಿದ್ದಾಗ ನಮ್ಮಲ್ಲೊಬ್ಬಳು ಗುಟ್ಟಿನಲ್ಲಿ ಹೇಳಿದಳು, “ನಾವು ವಂದ ಮಾಡಕೆ ಕೂತ್ಕತೀವಲ್ಲ ಉರುಬಿಲು ಗುತ್ತಿ, ಅಲ್ಲಿ ದೆಯ್ಯ ಆಯ್ತಂತೆ’. ದೆಯ್ಯರ ಸುದ್ದಿ ಕೇಳುತ್ತಿದ್ದಂತೆ ನಮ್ಮ ಕೈಕಾಲು ತಣ್ಣಗಾಗತೊಡಗಿದವು.

ನಾಕು ಕೋಣೆಯಿರುವ ನನ್ನ ಮನೆಯಲ್ಲಿ ಆರರ ಮೇಲೆ ಬಚ್ಚಲಿಗೆ ಹೋಗುವುದಕ್ಕೆ ಜೊತೆ ಬೇಕಿತ್ತು ನನಗೆ. ಅದಕ್ಕಾಗಿ ನಾಕು ವರ್ಷದ ತಮ್ಮನಿಗೆ ಪೂಸಿ ಹೊಡೆಯುತ್ತ ದೊಡ್ಡಣ್ಣನ ಹೊಡೆತಕ್ಕೆ ತಮ್ಮನ ಪರವಾಗಿ ಸೇಡು ತೀರಿಸಿಕೊಳ್ಳುವ ಕುರಿತು ಮಾತು ಕೊಟ್ಟು, ಬಚ್ಚಲಿನ ಬಾಗಿಲಿನ ಬಳಿ ಕಾವಲುಗಾರನಾಗಿ ನೇಮಿಸಿಕೊಂಡು ಕಾಯಕ ಮುಗಿಸಿ ಹೊರಬರುತ್ತಿದ್ದೆ. ಕೆಲವೊಮ್ಮೆ ತಮ್ಮನೊಡನೆಯೂ ಜಗಳವಾಗಿದ್ದಾಗ ಸ್ಕೂಲಿನಿಂದ ಬಂದವಳೇ “ವಂದ’ ಮಾಡಿ ಮುಗಿಸಿದರೆ ಮತ್ತೆ ಮಾರನೆಯ ಬೆಳಿಗ್ಗೆಯೇ. 

ಇಂತಿಪ್ಪ ನಾನು, ದೆಯ್ಯ ಇರೋ ಉರುಬಿಲಿನ ಹಣ್ಣಿನ ಕುರುಚಲು ಪೊದೆ ಹಿಂದೆ ವಂದ ಮಾಡುವುದು ಎಂದಾದರೂ ಸಾಧ್ಯವೇ? ಅಲ್ಲಿ ದೆಯ್ಯ ಇರೋ ಕುರಿತು ನನಗೆ ಈ ಮೊದಲೇ ಅನುಮಾನವೂ ಇತ್ತು. ಗಾಳಿ ಬಂದಾಗ ಉರುಬಿಲು ಗಿಡದ ಹಣ್ಣೆಲೆಗಳು ಸಣ್ಣಗೆ ಉದುರುತ್ತಿದ್ದವಷ್ಟೆ. ಆದರೆ, ಅವು ನಾನು ಅಲ್ಲಿ ವಂದ ಮಾಡ್ತಾ ಇರ್ಬೇಕಾದ್ರೆ ಯಾಕೆ ಉದುರಬೇಕು! ಅದರಲ್ಲೂ ನನ್ನ ಮೈಮೇಲೆ ಯಾಕೆ ಉದುರಬೇಕು ಎಂಬಿತ್ಯಾದಿ ವಿಚಾರಗಳು ಬಹಳ ದಿನಗಳ ಮುಂಚೆಯೇ ನನ್ನ ತಲೆಯಲ್ಲಿ ಸುಳಿದಿದ್ದರೂ ಗೆಳತಿಯರ ನಡುವೆ ಈಗಾಗಲೇ “ಪುಕ್ಕಲಿ’ ಅಂತ ಹೆಸರಾಗಿದ್ದ ನನಗೆ ಇನ್ನೂ ಈ ವಿಚಾರವನ್ನು ವಿನಿಮಯ ಮಾಡಿಕೊಂಡರೆ ನನಗೆ ಅದೇ “ವಿಶೇಷ’ ಹೆಸರಾಗಿ ಉಳಿಯುವುದು ಖಾತ್ರಿಯಾಗಿ ಗೆಳತಿಯರೊಡನೆ ಈ ಕುರಿತು ಚರ್ಚಿಸುವುದನ್ನು ಕೈಬಿಟ್ಟಿದ್ದೆ.

ಆದರೂ, ಈಗ ದೆಯ್ಯ ಇರೋದು “ದೇವರಾಣೆಗೂ’, “ತಾಯಾಣೆಗೂ’, “ಕನ್ನಂಬಾಡಿ ಅಮ್ಮ’ನಾಣೆೆಗೂ ನಿಜವೆಂದ ಮೇಲೆ ಅಲ್ಲಿಗೆ ಹೋಗಿ ವಂದ ಮಾಡುವುದು ಎಂದಾದರೂ ಸಾಧ್ಯವೆ? ಖಂಡಿತವಾಗಿ ಇಲ್ಲ. ಮತ್ತೆ ನನ್ನ ಮೂತ್ರಚೀಲದ ಸಾಮರ್ಥ್ಯ ಪರೀಕ್ಷಿಸುವ ನಿರ್ಧಾರ ಮಾಡಿದ್ದೆ. ಆದರೆ ಬೆಳಿಗ್ಗೆಯೇ ಹುಣಿಸೇಕಾಯಿಯ ಜೊತೆ ಹರಳುಪ್ಪು ನೆಂಜಿಕೊಂಡು ತಿಂದದ್ದರ ಪರಿಣಾಮವಾಗಿ ಬಾಯಾರಿಕೆ ವಿಪರೀತವಾಗಿ ಶಾಲೆ ಪಕ್ಕದಲ್ಲಿದ್ದ  “ಅಯ್ನಾರ’ ಮನೆಗೆ ಹೋಗಿ ಕೊಡಗಟ್ಟಲೆ ನೀರನ್ನು ನಮ್ಮ ಟಿಫಿನ್‌ ಕ್ಯಾರಿಯರ್‌ಗೆ ಸುರುವಿಕೊಂಡು ಕುಡಿದಿದ್ದೆ. ಆದರೂ ಮೈಬಗ್ಗಿಸಿ, ತಲೆ ತಗ್ಗಿಸಿ, “ಅಯ್ಯಪ್ಪ’ ವಂದ ಕಟಕಂಡು ಸತ್ತರೂ ಪರವಾಗಿಲ್ಲ, ಗಂಡುಹುಡುಗ್ರ ಮುಂದೇನೇ ವಂದಕೋಯ್ತಿವಿ ಅಂತ ತೋರಿಸಿಕೊಳ್ಳೋಕೆ ಆಗ್ತದಾ? ಅದರಲ್ಲೂ ನಾನು!

Advertisement

ಹೇಗಾದರೂ ಸರಿಯೇ ತಡೆದೇ ತೀರುವ ಸಂಕಲ್ಪ ತೊಟ್ಟೆ. ನಾಕೂವರೆಗೆ ಶಾಲೆ ಕೊನೆಯ ಬೆಲ್‌ ಆಗಿ ಹೇಗಾದರೂ ನನ್ನ ನಿರ್ಧಾರಕ್ಕೆ ಬದ್ಧಳಾಗಬೇಕೆಂದುಕೊಂಡೆ. ಆದರೆ, ಊಟವಾದ ಸ್ವಲ್ಪ ಹೊತ್ತಿಗೆ ನನ್ನ ಮೊಣಕಾಲುಗಳು ಒಂದಕ್ಕೊಂದು ಗಟ್ಟಿಯಾಗಿ ಬೆಸೆದುಕೊಳ್ಳಲಾರಂಭಿಸಿದವು. ಶಾಲೆ ಬಿಡುವ ಕೊನೆಯ ಅರ್ಧ ಗಂಟೆ. ವಂದ ತಡೆಯಲೇಬೇಕು. ಆಗ ಶಾಲೆಯಲ್ಲಿ ದಿನವೂ ಡ್ರಿಲ್‌ ನಡೆಯುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕೂತಲ್ಲೇ ಕಾಲುಸೆಟೆದುಕೊಳ್ಳುತ್ತ ವಿಚಿತ್ರವಾಗಿ “ಡ್ರಿಲ್‌’ ಮಾಡುತ್ತಿದ್ದ ನನಗೆ ಹೊರಗಡೆ ನಿರಾಳವಾಗಿ ಡ್ರಿಲ್‌ ಮಾಡಲು ಸಾಧ್ಯವೆ! ಅದರಲ್ಲೂ ಒಂದು ಸಾಲು ಹುಡುಗರು, ಒಂದು ಸಾಲು ಹುಡುಗಿಯರನ್ನು ನಿಲ್ಲಿಸುತ್ತಿದ್ದರು ನಮ್ಮ ಸ್ಕೂಲಿನಲ್ಲ. ಪಕ್ಕದಲ್ಲಿದ್ದ ಗೆಳತಿಗೆ ಸಮಸ್ಯೆ ತೋಡಿಕೊಳ್ಳುತ್ತ “ಅರ್ಜೆಂಟು’ ಅಂದೆ. ಅದಕ್ಕವಳು, “ಅದ್ಕೆ ಮತ್ತೆ, ಜಾಸ್ತಿ ಶೇಲೆ ಆಡಬಾರದು ಅನ್ನದು. ಆಗಲೇ ಏರಿಮರೆಗೆ ನೀನು ಬಂದಿದ್ರೆ’ ಅಂತ ಹಂಗಿಸಿ, “”ಮೇಷ್ಟ್ರ ಕೇಳು ನೋಡೋಣ” ಅಂತ ಅಂದಳು. ಎಲ್ಲಾದ್ರೂ ಉಂಟೆ? ಅಷ್ಟೊಂದು ಗಂಡುಹುಡುಗರ ಎದುರಿಗೆ ಅದೂ ಮೇಷ್ಟ್ರ ಹತ್ರ (ಅವರೂ ಸಹ ಗಂಡೇ) ಕೇಳ್ಳೋದು ಅಂದ್ರೆ… ಆ ವಿಷಯ ಅಲ್ಲಿಗೆ ಕೈಬಿಟ್ಟಿದ್ದೆ. 

ಈ ವಿಚಾರ ವಿನಿಮಯ ನಡೆಯೋ ಅಷ್ಟರಲ್ಲಿ ಅವಸರ ಒಂಚೂರು ಕಡಿಮೆಯಾಗಿತ್ತು. ಡ್ರಿಲ್ಲಿಗೆ ಬರಲ್ಲ ಅನ್ನುವ ಹಾಗಿಲ್ಲವಾದ್ದರಿಂದಲೂ, ಅವಸರವೂ ಕಡಿಮೆಯಾದ್ದರಿಂದಲೂ ಧೈರ್ಯದಲ್ಲಿ ಸಾಲಿನಲ್ಲಿ ನಿಂತೆ. ನನ್ನ ಮುಂದಿನ ಮತ್ತು ಹಿಂದಿನ ಸಾಲು ಹುಡುಗರದ್ದು. ಆಗ ಮಾಗಿ ಕಾಲದ ಸಮಯ. ಸಂಜೆಗೆ ಚಳಿ ಶುರುವಾಗಿತ್ತು. ಚಳಿ ಮೈಮೇಲೆ ಬಿದ್ದದ್ದೇ ತಡ, ಅವಸರ ತಡೆಯಲಾರದಷ್ಟು ಹೆಚ್ಚಾಯಿತು. ಆದರೆ, ಡ್ರಿಲ್ಲಿನಲ್ಲಿ “ಏಕ್‌’ ಆಗಿ “ದೋ’ ಎನ್ನುವ ಸಮಯಕ್ಕೆ ಕೈಮೇಲೆ ಹೋಗಿದ್ದರಿಂದ ವಂದವನ್ನು ತಡೆಯುವ ನನ್ನ ಪ್ರಯತ್ನ ವ್ಯರ್ಥವಾಯಿತು.

ಹಿಂದಿನ ಸಾಲಿನಲ್ಲಿ ನಿಂತಿದ್ದ ಆ ಹುಡುಗ ಅಂತ ಅವನ ಹೆಸರು. “ಇಸ್ಸಿ…, ಈ ಹುಡ್ಗಿ ಇಲ್ಲೇ ವಂದ ಮಾಡಾRತಾವೆÛ ಸಾ’ ಎಂದೇಬಿಟ್ಟ. ಅಲ್ಲಿಗೆ ಮಧ್ಯಾಹ್ನದಿಂದ ನಡೆಸಿದ್ದ ಹೋರಾಟಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿತ್ತು. ಹುಡುಗರ ಮುಂದೆ ವಂದಕ್ಕೆ ಹೋಗ್ತಿದ್ದೀವಿ ಅಂತ ಗೊತ್ತಾಗೋದೇ ನಾಚಿಕೆಗೇಡಿನ ವಿಷಯ ಎಂದುಕೊಂಡಿದ್ದ ನನಗೆ ಅವರ ಮುಂದೆಯೇ ಸಣ್ಣದಾಗೋ ಪರಿಸ್ಥಿತಿ ಬಂತು!

ಹುಡುಗರಿಗೆ ಶೌಚ ಎಂಬುದು ಸಮಸ್ಯೆಯೇ ಅಲ್ಲ. ಆದರೆ, ಹುಡುಗಿಯರಿಗೆ ಹೇಳಿಕೊಳ್ಳುವುದಕ್ಕೂ ಮುಜುಗರ. ಎಂಥ ಮನೋಸಿœತಿ ಇದು ! ಮೂವತ್ತೈದು ವರ್ಷದ ನಂತರವೂ ನನ್ನ ಪರಿಸ್ಥಿತಿ ಸುಧಾರಿಸಿಲ್ಲ ಎನ್ನಬಹುದು. ಯಾವುದೋ ದೂರ ಪ್ರಯಾಣದಲ್ಲಿ, ತಾಸುಗಟ್ಟಲೆ ಇರುವ ಕಾರ್ಯಕ್ರಮದಲ್ಲಿ ನಾನು ಅಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಕೊಳಕು ಎನ್ನುವ ಕಾರಣಕ್ಕೋ, ಇನ್‌ಫೆಕ್ಷನ್‌ನ ಭಯಕ್ಕೋ ಬಳಸದೇ ಈಗಲೂ ಮೂತ್ರ ತಡೆಯುವ ದೊಂಬರಾಟ ಮಾಡುತ್ತಲೇ ಇರಬೇಕಾಗುತ್ತದೆ. 

ನಂದಿನಿ ವಿಶ್ವನಾಥ ಹೆದ್ದುರ್ಗ

Advertisement

Udayavani is now on Telegram. Click here to join our channel and stay updated with the latest news.

Next