Advertisement

“ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಗುರಿ’

11:00 AM Oct 03, 2017 | |

ಬೆಂಗಳೂರು: “2018ರ ಮಾರ್ಚ್ 31ರೊಳಗೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

Advertisement

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನಾಚರಣೆ ಮತ್ತು ಜಯಶ್ರೀ ಟ್ರಸ್ಟ್ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. “ರಾಜ್ಯ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನು ಮಾಡುವ ಯೋಜನೆ ಕೈಗೊಂಡಾಗ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದರು. 

ಸ್ವಾತಂತ್ರ್ಯಪೂರ್ವದಲ್ಲೇ ಗಾಂಧೀಜಿಯವರು ಶೌಚಾಲಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರ ಕುರಿತು ದಾಖಲೆಗಳ ಸಹಿತ ಅವರು ಮಾಹಿತಿ ನೀಡಿದ್ದರು. ಇಂದು ಅವರಿದ್ದಿದ್ದರೆ ಹೆಚ್ಚು ಸಂತಸಪಡುತ್ತಿದ್ದರು’ ಎಂದು ಸ್ಮರಿಸಿದ ಸಚಿವರು, “ಪ್ರಸ್ತುತ ಸುಮಾರು 6 ಜಿಲ್ಲೆಗಳ 51 ಗ್ರಾಮ ಪಂಚಾಯಿತಿಯ 1934 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, 2018ರ ರ್ಚ್ ಅಂತ್ಯದೊಳಗೆ ಈ ಯೋಜನೆ ಪೂರ್ಣಗೊಳಿಸುತ್ತೇವೆ’ ಎಂದರು.

ಯುವಜನತೆ ಗಾಂಧೀಜಿ ಮತ್ತು ಶಾಸ್ತ್ರೀ ಅವರ ತತ್ವಾದರ್ಶ, ವಿಚಾರಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಸಾರ್ಥಕತೆ
ಹೊಂದಬೇಕು. ಗಾಂಧೀಜಿ ಕಂಡ ಕನಸು ನನಸಾಗಲು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಕುರಿತು ಇಡೀ ರಾಜ್ಯದಲ್ಲಿ ನಡೆದಿರುವ ಕೆಲಸಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಿದ್ಧವಿದ್ದು, ಕಾರ್ಯ ಆರಂಭಿಸುವಂತೆ ಗಾಂಧಿ ಸ್ಮಾರಕ ನಿಧಿ, ವಾರ್ತಾ ಇಲಾಖೆಗೆ ಸೂಚಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, “ನಿಜವಾದ ಸ್ವರಾಜ್ಯ ಬರಬೇಕೆಂದರೆ ಗಾಂಧೀಜಿಯವರ ಆಶಯದಂತೆ ಸನ್ಮಾರ್ಗದಲ್ಲಿ ನಡೆಯಬೇಕು. ಸ್ವಾತಂತ್ರ್ಯದ ಫಲ ಸಮಾಜದ ಕಟ್ಟಕಡೆಯವರೆಗೂ ತಲುಪಬೇಕು. ದೇಶದಲ್ಲಿ ಕಾನೂನು ಇರಲೇಬಾರದಷ್ಟು, ನಮ್ಮ ನಡತೆಯಲ್ಲಿ ಬದಲಾವಣೆಯಾಗಬೇಕು. ಶ್ರೀಮಂತರು, ಬಡವರ ನಡುವೆ ಅಂತರವಿಲ್ಲದಂತಾದಾಗ ಸುಖ ಸಮಾಜ ನಿರ್ಮಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ , “ಡಿಜಿಟಲ್ ಗಾಂಧಿಭವನ ನಿರ್ಮಾಣ ಮತ್ತು 150 ಗಾಂಧಿವಿಚಾರ ಕುರಿತ ಪುಸ್ತಕ ಪ್ರಕಟಣೆಗೆ ನಿರ್ಧರಿಸಲಾಗಿದ್ದು, ಸರ್ಕಾರದಿಂದ ಅಗತ್ಯ ನೆರವು ಕೋರಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ, ವಾರ್ತಾ ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ, ಮಾಜಿ ಶಾಸಕ ಡಿ.ಆರ್ .ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next