ಬೆಂಗಳೂರು: ಬೆಂಗಳೂರು ಉತ್ತರ ತಾಲೂಕು, ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಶುಚಿಗೊಳಿಸಿರುವ ವಿಷಯ ಶನಿವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪಕ್ಷಭೇದ ಮರೆತು ಸದಸ್ಯರು ಒತ್ತಾಯಿಸಿದರು.
ಶೈಕ್ಷಣಿಕ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ್, ಬೆಂಗಳೂರು ಉತ್ತರ ತಾಲೂಕು ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯಗಳನ್ನು ಶುಚಿಗೊಳಿಸಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಶಾಲಾ ಶೌಚಾಲಯಗಳ ಶುಚಿತ್ವಕ್ಕಾಗಿ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೂ ಬಳಕೆ ಮಾಡುತ್ತಿಲ್ಲ. ಇಂತಹ ಅವ್ಯವಸ್ಥೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಉತ್ತರ ವಲಯ ವಿಭಾಗದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ, ಕಾಚೋಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಶೌಚಾಲಯ ಶುಚಿಗೊಳಿಸಲು ಆಯಾಗಳನ್ನು ನೇಮಿಸಲಾಗಿದೆ. ಜೊತೆಗೆ ಕಾಚೋನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ವಚ್ಛಗೊಳಿಸಲು ಪಂಚಾಯ್ತಿ ನೀಡಿರುವ ಅನುದಾನದಲ್ಲಿ ಶುಚಿತ್ವದ ಕಾರ್ಯ ಕೈಗೊಳ್ಳಲಾಗಿದೆ. ಇದರಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಣೆ ನೀಡಲು ಮುಂದಾದರು.
ಇದರಿಂದ ಅಸಮಾಧಾನಗೊಂಡ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಟಿ. ನರಸಿಂಹಮೂರ್ತಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್ ಸೇರಿದಂತೆ ಜಿಲ್ಲಾ ಪಂಚಾಯ್ತಿಯ ಕೆಲವು ಸದಸ್ಯರು, ಇದನ್ನು ಶಿಕ್ಷಣ ಮತ್ತು ತಾಲೂಕು ಕಾರ್ಯನಿರ್ಹಕಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವ ಗೋಜಿಗೂ ಹೋಗದೆ, ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
Advertisement
ಈ ಕುರಿತು ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯರು, ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ, ಇದೊಂದು ತಲೆತಗ್ಗಿಸುವ ವಿಚಾರವಾಗಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ವರದಿ ಕೇಳಿದ ಡಿಸಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಶಾಲಾ ಮಕ್ಕಳಿಂದ ಶೌಚಾಲಯಗಳನ್ನು ಶುಚಿಗೊಳಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಸಂಬಂಧ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಸೂಚಿಸಿದರು.
ನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಶಾಲಾ ಜಾಗಗಳು ಒತ್ತುವರಿಯಾಗಿರುವುದನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಹನುಮಂತಯ್ಯ ಅವರು ಸಭೆಯ ಗಮನಕ್ಕೆ ತಂದರು. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶ್ರೀನಿವಾಸ್ ಭರವಸೆ ನೀಡಿದರು.
ಅಲ್ಲದೆ ಜಿಲ್ಲೆಯ ಬ್ಯಾಲಕೆರೆ ಸೋಮಶೆಟ್ಟಿಹಳ್ಳಿ, ಕಾಮಾಕ್ಷಿಪುರ, ಕಲ್ಲುಬಾಳು, ಬ್ಯಾಲಾಳು, ಹಾಡುಸೊಣ್ಣೇನ ಹಟ್ಟಿ ಮತ್ತು ರಾಯಸಂದ್ರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಕೆಲವು ಶಾಲಾ ಕಟ್ಟಡಗಳು ಬಿದ್ದು ಹೋಗಿರುವುದು ತಮ್ಮ ಗಮನಕ್ಕೆ ಬಂದಿದ್ದು ಅವುಗಳ ದುರಸ್ಥಿತಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಸವಿಲೇವಾರಿ, ಆರೋಗ್ಯ ಸೇರಿದಂತೆ ಹಲವು ವಿಷಗಳ ಕುರಿತು ಚರ್ಚೆ ನಡೆಯಿತು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಕೆಐಎಡಿಬಿ ಮುಚ್ಚುವುದೇ ಒಳ್ಳೆಯದು:
ಕರ್ನಾಟಕ ಕೈಗಾರಿಕಾಭಿವೃದ್ಧಿ ಅಭಿವೃದ್ಧಿ ಮಂಡಳಿಯಿಂದ ನಗರ ಜಿಲ್ಲಾ ಪಂಚಾಯ್ತಿಗೆ ಯಾವುದೇ ಉಪಯೋಗವಿಲ್ಲ. ಅಧಿಕಾರಿಗಳು ಕೂಡ ಸಭೆಗೆ ಬರುವುದಿಲ್ಲ. ಆ ಹಿನ್ನೆಲೆಯಲ್ಲಿ ಕೆಐಎಡಿಬಿ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದರು.