Advertisement
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅದರಲ್ಲೂ ದೇಶದ ಬೇಳೆಕಾಳುಗಳ ಅಗತ್ಯತೆ ಪೂರೈಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ತೊಗರಿ ಪ್ರಸಕ್ತವಾಗಿ ನೆಟೆರೋಗದಿಂದ ಶೇ. 80ರಷ್ಟು ಬೆಳೆ ನಾಶವಾಗಿದ್ದರಿಂದ ಇಡೀ ತೊಗರಿ ಬೆಳೆಯುವ ರೈತ ಸಂಕುಲಕ್ಕೆ ಗರ ಬಡಿದಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಸತತ ನಷ್ಟ ಹೊಂದುತ್ತಿರುವ ಪರಿಣಾಮ ಮೊದಲೇ ಕೃಷಿ ಕಾಯಕದಿಂದ ವಿಮುಖರಾಗಿ ನಗರದತ್ತ ಬರುತ್ತಿರುವ ರೈತರನ್ನು ಉಳಿಸುವುದು ಸರ್ಕಾರದ ಮುಂದಿರುವ ಒಂದು ಸವಾಲಾಗಿ ನಿಂತಿದೆ.
Related Articles
Advertisement
ಅಧಿವೇಶನದಲ್ಲಿ ಚರ್ಚೆಯಾಗಲಿ: ತೊಗರಿ ನೆಟೆರೋಗದಿಂದ ಸಂಪೂರ್ಣ ನಾಶವಾಗಿರುವ ಪ್ರಮುಖ ಸಮಸ್ಯೆ ಕುರಿತಾಗಿ ಬೆಳಗಾವಿ ಅಧಿವೇಶನದಲ್ಲಿ ಸಮಗ್ರ ಚರ್ಚೆಯಾಗಲಿ ಎಂಬುದು ರೈತರ ಆಗ್ರಹವಾಗಿದೆ. ತೊಗರಿ ಹಾನಿಗೆ ಎಕರೆಗೆ 25 ಸಾವಿರ ರೂ ವಿಶೇಷ ಪ್ಯಾಕೇಜ್ ಪ್ರಕಟಿಸುವ ಜತೆಗೆ ತೊಗರಿ ಬೆಳೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜತೆಗೆ ರೈತ ಕೃಷಿ ಕಾಯಕದಿಂದ ವಿಮುಖವಾಗುತ್ತಿರುವುದನ್ನು ತಡೆಗಟ್ಟಲು ಹೊಸದಾದ ಆತ್ಮಸ್ಥೈರ್ಯದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ತೊಗರಿ ನೆಟೆರೋಗಕ್ಕೆ ಒಳಗಾಗದಂತೆ ಹೊಸ ಬೀಜ ಸಂಶೋಧನೆಗೆ ಉತ್ತೇಜನ ಜತೆಗೆ ಭೂಮಿಯ ಫಲವತ್ತತೆ ಹೆಚ್ಚಿಸಲು ಯೋಜನೆ ರೂಪಿಸುವುದು ಅಗತ್ಯವಿದೆ.
ಕಲಬುರಗಿ ಜಿಲ್ಲೆಯಿಂದ ಪ್ರತಿನಿಧಿಸಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಎರಡು ವರ್ಷದಿಂದ ಹಿಂದೆ ನೆಟೆರೋಗದಿಂದ ಹಾನಿಯಾದ ತೊಗರಿ ಬೆಳೆಯೊಂದಿಗೆ ಎತ್ತಿನ ಬಂಡಿಯಲ್ಲಿ ಪ್ರತಿಭಟನೆ ನಡೆಸಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕೆಂದು ಬೀದಿಗಿಳಿದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ 180 ಕೋ.ರೂ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಆದರೆ ಹಣ ಬಿಡುಗಡೆಯಾಗುವಷ್ಟರಲ್ಲೇ ಚುನಾವಣೆ ಎದುರಾಯಿತು. ತದನಂತರ ಆಸ್ತಿತ್ವಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಪ್ರಸಕ್ತ ಕಾಂಗ್ರೆಸ್ ಸರ್ಕಾರ ವಿಶೇಷ ಪ್ಯಾಕೇಜ್ ಹಣ ಬಿಡುಗಡೆ ಮಾಡಿತು. ಆದರೆ ಪ್ರಸಕ್ತವಾಗಿರುವ ಹಾನಿಗೆ ಸೂಕ್ತ ಪರಿಹಾರವಾಗಿ ಕಲಬುರಗಿ ಜಿಲ್ಲೆಗೆ ಕನಿಷ್ಠ 500 ಕೋ.ರೂ ವಿಶೇಷ ಪ್ಯಾಕೇಜ್ ಬಿಡುಗಡೆಯಾಗುವುದು ಅಗತ್ಯವಿದೆ.
ಸಚಿವರು ಸಿಎಂಗೆ ಮನವಿ: ಈಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಎರಡು ವರ್ಷದ ಹಿಂದೆ ಆಗ್ರಹಿಸಿದ್ದಕ್ಕೆ ಬದ್ದ ಎನ್ನುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿಗೆ ಸಿಎಂ ಸ್ಪಂದಿಸಿ ಕಡತ ಮಂಡಿಸುವಂತೆ ಕೃಷಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಆದರೆ ಇದರ ಬಗ್ಗೆ ಪ್ರಸಕ್ತ ಅಧಿವೇಶನದಲ್ಲೇ ಚರ್ಚೆಯಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿ ಎಂಬುದು ರೈತರ ಆಗ್ರಹವಾಗಿದೆ.
ಹೊಸ ರೋಗ; ಕೃಷಿ ವಿಜ್ಞಾನಿಗಳಿಗೆ ಸವಾಲು: ಪ್ರಸಕ್ತವಾಗಿ ತೊಗರಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯಂತೆ ತೇವಾಂಶದ ಕೊರತೆಯಿಂದಾಗಿ ಮ್ಯಾಕ್ರೋಫೋಮಿನಾ ಫೆಜಿಯೊಲೈ ಶಿಲೀಂದ್ರದಿಂದ ಬರುವ ಒಣಬೇರು ಕೊಳೆ ರೋಗ ಹಾಗೂ ಫೈಟೋವ್ಹೋರಾ ಮಚ್ಚೆ ರೋಗ ಬಂದಿದೆ ಎಂದು ಪತ್ತೆ ಹಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಈ ರೋಗ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜತೆಗೆ ರೈತರಿಗೆ ಅಭಯ ನೀಡುವ ನಿಟ್ಟಿನಲ್ಲಿ ಸರ್ಕಾರ ವಿನೂತನ ಯೋಜನೆ ರೂಪಿಸಬೇಕೆಂಬುದು ರೈತರ ಒಕ್ಕೋರಲಿನ ಆಗ್ರಹವಾಗಿದೆ.
-ಹಣಮಂತರಾವ ಭೈರಾಮಡಗಿ