Advertisement

ಇಂದಿನಿಂದ “ಪೀಕ್‌ ಅವರ್‌’ನಲ್ಲಿ ಹೆಚ್ಚುವರಿ ಮೆಟ್ರೋ ರೈಲು

11:18 AM Jan 07, 2017 | Team Udayavani |

ಬೆಂಗಳೂರು: ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಶನಿವಾರದಿಂದ ಉದ್ದೇಶಿತ ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಹೆಚ್ಚುವರಿ ರೈಲು ಓಡಿಸಲು ನಿರ್ಧರಿಸಿದೆ. 

Advertisement

ಬೆಳಗ್ಗೆ 8ರಿಂದ 10ರ ಅವಧಿಯಲ್ಲಿ ಪ್ರತಿ ಎರಡು ರೈಲುಗಳ ಹಿಂದೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಈ “ಹೆಚ್ಚುವರಿ ಮೆಟ್ರೋ ರೈಲು’ಗಳು ಕಾರ್ಯಾಚರಣೆ ಮಾಡಲಿವೆ. ಆದರೆ, ಇಂದಿರಾನಗರ ಮತ್ತು ವಿಜಯನಗರದಲ್ಲಿರುವ “ಪಾಕೆಟ್‌ ಟ್ರ್ಯಾಕ್‌’ಗಳಿಂದ ಈ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.

ಅಂದರೆ, ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಕಡೆಗೆ ಎರಡು ಮೆಟ್ರೋ ರೈಲುಗಳು ಹೊರಡುತ್ತವೆ. ಅದರ ಬೆನ್ನಲ್ಲೇ ಇಂದಿರಾನಗರದಲ್ಲಿರುವ ಪಾಕೆಟ್‌ ಟ್ರ್ಯಾಕ್‌ ಮೂಲಕ ಮತ್ತೂಂದು ಮೆಟ್ರೋ (ಬೋಗಿಗಳು) ಅದೇ ಮೈಸೂರು ರಸ್ತೆ ಕಡೆಗೆ ಹೋಗುತ್ತದೆ. ಅದೇ ರೀತಿ, ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಕಡೆಗೆ ಎರಡು ರೈಲುಗಳು ಹೊರಡುತ್ತವೆ. ಅದರ ಬೆನ್ನಲ್ಲೇ ಮತ್ತೂಂದು ರೈಲು ವಿಜಯನಗರದಲ್ಲಿರುವ ಪಾಕೆಟ್‌ ಟ್ರ್ಯಾಕ್‌ ಮೂಲಕ ಬೈಯಪ್ಪನಹಳ್ಳಿ ಕಡೆಗೆ ಸಾಗುತ್ತದೆ ಎಂದು ನಿಗದಮ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್‌ ತಿಳಿಸಿದರು.

ಸಾಮಾನ್ಯವಾಗಿ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆಯಿಂದ ಹೊರಡುವ ರೈಲುಗಳು ಭರ್ತಿಯಾಗಿರುತ್ತವೆ. ಇದರಿಂದ ಉಳಿದ ನಿಲ್ದಾಣಗಳಲ್ಲಿರುವ ಪ್ರಯಾಣಿಕರಿಗೆ ಮೆಟ್ರೋ ಏರಲಿಕ್ಕೂ ಪರದಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳನ್ನು ಬೆಳಿಗ್ಗೆ “ಪೀಕ್‌ ಅವರ್‌’ನಲ್ಲಿ ಪ್ರಾಯೋಗಿಕವಾಗಿ ಓಡಿಸಲು ನಿರ್ಧರಿಸಲಾಗಿದೆ ಎಂದರು. 

ಈ ಎರಡು ತಾಸುಗಳ ಅವಧಿಯಲ್ಲಿ ಸುಮಾರು 4ರಿಂದ 6 ಹೆಚ್ಚುವರಿ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ರಾತ್ರಿ ಮೆಟ್ರೋ ಕಾರ್ಯಾಚರಣೆ ಅವಧಿಯನ್ನೂ ವಿಸ್ತರಿಸುವ ಆಲೋಚನೆ ಇದೆ ಎಂದು ವಸಂತರಾವ್‌ ತಿಳಿಸಿದರು.

Advertisement

ಫ‌ುಟ್ಬಾಲ್‌ ಪಂದ್ಯಾವಳಿ: ಮೆಟ್ರೋ ಸೇವೆ ವಿಸ್ತರಣೆ
ಶನಿವಾರದಿಂದ ನಗರದಲ್ಲಿ ಫ‌ುಟ್‌ಬಾಲ್‌ ಪಂದ್ಯಾವಳಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ. ಜ. 11ರಿಂದ 31ರವರೆಗೆ ಫ‌ುಟ್‌ಬಾಲ್‌ ಪಂದ್ಯಗಳು ನಡೆಯಲಿವೆ. ಪಂದ್ಯಗಳು ನಡೆಯುವ ದಿನದಂದು ಬೈಯಪ್ಪನಹಳ್ಳಿಯಿಂದ ರಾತ್ರಿ 10.20ಕ್ಕೆ ಹಾಗೂ ಮೈಸೂರು ರಸ್ತೆಯಿಂದ ರಾತ್ರಿ 10.10ಕ್ಕೆ ಕೊನೆಯ ರೈಲುಗಳು ಹೊರಡಲಿವೆ ಎಂದು ಬಿಎಂಆರ್‌ಸಿ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next