Advertisement

ಇಂದು ವಿಶ್ವ ಫಾರ್ಮಸಿಸ್ಟ್‌ ದಿನ; ಔಷಧ ಸೇವಾ ಸಮಗ್ರತೆಯಲ್ಲಿ  ಫಾರ್ಮಸಿಸ್ಟ್‌ಗಳ ಪಾತ್ರ

12:05 AM Sep 25, 2022 | Team Udayavani |

ಔಷಧೋದ್ಯಮ, ಫಾರ್ಮಸಿ ಕೈಗಾರಿಕೆ, ಸಂಶೋಧನೆ, ಫಾರ್ಮಸಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ, ಆಸ್ಪತ್ರೆ, ಔಷಧ ಅಂಗಡಿಗಳಲ್ಲಿ ಫಾರ್ಮಸಿಸ್ಟ್‌ಗಳಾಗಿ ಸೇವೆ…ಹೀಗೆ ಹಲವು ವಿಭಾಗಗಳಲ್ಲಿ ಫಾರ್ಮಸಿಸ್ಟ್‌ಗಳು ಜಾಗತಿಕವಾಗಿ ವೃತ್ತಿನಿರತರು. ಸೆ.25ರ ರವಿವಾರ ವಿಶ್ವ ಫಾರ್ಮಸಿಸ್ಟ್‌ ದಿನ. ಫಾರ್ಮಸಿಸ್ಟ್‌ ಗಳು ಸಂಘಟಿತರಾಗಿ ಔಷಧ ಸೇವೆಯ ಸಮಗ್ರತೆಗಾಗಿ ಕಾರ್ಯನಿರತರಾಗಬೇಕೆಂದು ಎಫ್ಐಪಿ ಕರೆನೀಡಿದೆ. ಆರೋಗ್ಯ ಸೇವೆಯಲ್ಲಿ ಫಾರ್ಮಸಿಸ್ಟ್‌ಗಳು ಏಕತೆಯಿಂದ ಪಾಲ್ಗೊಳ್ಳಬೇಕು ಎಂಬುದು ಈ ಬಾರಿಯ ಫಾರ್ಮಸಿಸ್ಟ್‌ ದಿನಾಚರಣೆಯ ಅಭಿಲಕ್ಷಿತ ವಿಚಾರ.

Advertisement

ಎಫ್ಐಪಿ: ಫೆಡರೇಶನ್‌ ಆಫ್ ಇಂಟರ್‌ನ್ಯಾಶನಲ್‌ ಫಾರ್ಮಸಿ ಎಂಬ ಅಂತಾರಾಷ್ಟ್ರೀಯ ಸಂಸ್ಥೆ 1912ರ ಸೆ. 25ರಂದು ಆರಂಭವಾಯಿತು. ಅದೇ ದಿನವನ್ನು ಕಳೆದ 13 ವರ್ಷಗಳಿಂದ ವಾರ್ಷಿಕವಾಗಿ ಫಾರ್ಮಸಿಸ್ಟ್‌ ದಿನವನ್ನಾಗಿ ಆಚರಿಸುತ್ತ ಬರಲಾಗಿದೆ. 144 ದೇಶಗಳು ಸಂಘಟನೆಯ ಸದಸ್ಯತ್ವ ಪಡೆದಿವೆ. ಫಾರ್ಮಸಿಯ ಸಮಗ್ರ ಕಾರ್ಯಶೀಲತೆಗೆ ಎಫ್ಐಪಿ ಒತ್ತು ನೀಡಿದೆ. ಫಾರ್ಮಸಿ ಶಿಕ್ಷಣ, ಸಂಶೋಧನೆ, ತುರ್ತು ಔಷಧಗಳ ಪೂರೈಕೆ, ಹೊಸ ತುರ್ತು ಔಷಧಗಳ ಅನ್ವೇಷಣೆ ಇತ್ಯಾದಿಗಳತ್ತ ಪ್ರೋತ್ಸಾಹ ನೀಡಿ ವಿಶ್ವ ಆರೋಗ್ಯ ಆವಶ್ಯಕತೆಗಳತ್ತ ಗಮನಹರಿಸುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಿ ಫಾರ್ಮಸಿ ಕ್ಷೇತ್ರದಲ್ಲಿ ಧನಾತ್ಮಕ ಅಭಿವೃದ್ಧಿಯಾಗಬೇಕು. ಅದಕ್ಕೆ ಫಾರ್ಮಸಿಸ್ಟ್‌ಗಳು ಒಂದುಗೂಡಬೇಕೆಂಬುದು ಎಫ್ಐಪಿ ಆಶಯ.

ಔಷಧಗಳ ವಿಂಗಡಣೆ, ಜೋಡಣೆ, ಗುರುತಿಸುವಿಕೆ ಇತ್ಯಾದಿಗಳಿಗೆ ಹೊಸ ಹೊಸ ಕ್ರಮ, ತಂತ್ರಜ್ಞಾನಗಳು ಈಗ ಬರುತ್ತಿವೆ. ಅದೇ ರೀತಿಯಲ್ಲಿ ಔಷಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ವೈದ್ಯರ ಸಲಹಾ ಚೀಟಿಯನ್ನು ಪಡೆದು ಗ್ರಾಹಕರ, ರೋಗಿಗಳ ಆವಶ್ಯಕತೆಗೆ ತಕ್ಕಂತೆ ಔಷಧ ನೀಡುವುದು ಫಾರ್ಮಸಿಸ್ಟ್‌ಗಳ ಕರ್ತವ್ಯ. ಔಷಧಗಳ ಸೇವನೆಯ ಪ್ರಮಾಣವನ್ನು ರೋಗಿಗಳಿಗೆ ವಿವರಿಸಬೇಕಾದುದು ಕೂಡ ಆವಶ್ಯಕ. ಅನೇಕ ಫಾರ್ಮಸಿಗಳಲ್ಲಿ ಫಾರ್ಮಸಿಸ್ಟ್‌

ಗಳಿಗೆ ಸಹಾಯಕರಾಗಿ ಫಾರ್ಮಸಿಸ್ಟೇತರ ಸಿಬಂದಿಯೂ ಇರುತ್ತಾರೆ. ಫಾರ್ಮಸಿಸ್ಟ್‌ ಸಹಾಯಕರ ನೆರವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಅರ್ಥಪೂರ್ಣ.

ವೈದ್ಯರ ಸೂಕ್ತ ಶಿಫಾರಸು ಅಥವಾ ಪ್ರಿಸ್ಕ್ರಿಪ್ಶನ್‌ ಇದ್ದಾಗ ಮಾತ್ರ ಔಷಧ ವಿತರಿಸುವುದು ಫಾರ್ಮಸಿಸ್ಟ್‌ಗಳ ಕರ್ತವ್ಯ. ಔಷಧ ವಿತರಿಸುವಾಗ ನಿರಂತರ ಎರಡೆರಡು ಬಾರಿ ಪರಿಶೀಲಿಸುವುದು ಫಾರ್ಮಸಿಸ್ಟ್‌ಗಳ ಮತ್ತೂಂದು ಹೊಣೆಗಾರಿಕೆ. ಔಷಧಗಳ ವಿತರಣೆ ಸದ್ಬಳಕೆ ಆಗಲು ಫಾರ್ಮಸಿಸ್ಟ್‌ಗಳ ತ್ರಿಕರಣಪೂರ್ವಕ ಸೇವೆ ಸಹಕಾರಿ. ಪಾಲಿ ಫಾರ್ಮಸಿ ಎಂಬ ಜಾಗತಿಕ ನಿರ್ದೇಶನವನ್ನು ಪಾಲಿಸುತ್ತ ಫಾರ್ಮಸಿಸ್ಟ್‌ಗಳು ವೃತ್ತಿ ನಿರ್ವಹಿಸಿದಾಗ ಸೇವೆಯ ಸಮಗ್ರತೆ ವ್ಯಕ್ತವಾಗಲು ಸಾಧ್ಯ.

Advertisement

ಪಾಲಿ ಫಾರ್ಮಸಿಯ ಸೂಚನೆಯಂತೆ ಒಬ್ಬ ರೋಗಿಗೆ ಕೆಲವೊಮ್ಮೆ 2-3 ತಜ್ಞ ವೈದ್ಯರ ಭೇಟಿಯ ಆವಶ್ಯಕತೆ ಇರುತ್ತದೆ. ವೈದ್ಯರ ಭೇಟಿಯ ಸಂದರ್ಭದಲ್ಲಿ ಪ್ರತಿಯೊಬ್ಬ ವೈದ್ಯರೂ ನೀಡಿದ ಔಷಧಗಳ ಬಗ್ಗೆ ರೋಗಿಗಳು, ಗ್ರಾಹಕರು ಹೇಳಿಕೊಳ್ಳಬೇಕು. ಈ ತಿಳಿವಳಿಕೆಯನ್ನು ಫಾರ್ಮಸಿಸ್ಟ್‌ಗಳು ರೋಗಿಗಳಿಗೆ ನೀಡಿದಾಗ ಔಷಧಗಳ ದುರ್ಬಳಕೆ ಕಡಿಮೆಯಾಗುತ್ತದೆ. ಔಷಧ ಸೇವೆಯ ಸಮಗ್ರತೆಗಾಗಿ ವೃತ್ತಿನಿರತ ಫಾರ್ಮಸಿಸ್ಟ್‌ಗಳು ಸಂಘಟಿತರಾಗಬೇಕಿರುವುದು ಅತೀ ಮುಖ್ಯವಾಗಿದೆ. ಇದನ್ನು ಸಾಕ್ಷಾಗೊಳಿಸುವ  ನಿಟ್ಟಿನಲ್ಲಿ ಫಾರ್ಮಸಿಸ್ಟ್‌ಗಳು ಒಗ್ಗೂಡಬೇಕಿದೆ.

– ಎಲ್‌.ಎನ್‌.ಭಟ್‌ ಮಳಿ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next