Advertisement

ಇಂದು ಖಾಸಗಿ ವೈದ್ಯರ ಮುಷ್ಕರ

06:00 AM Jul 28, 2018 | Team Udayavani |

ಬೆಂಗಳೂರು/ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. 2.15 ಲಕ್ಷ ವೈದ್ಯರು ದೇಶಾದ್ಯಂತ ದಿನ ಪೂರ್ತಿ ಕೆಲಸ ಬಂದ್‌ ಮಾಡಿ ಹೋರಾಟ ನಡೆಸಲಿದ್ದಾರೆ.

Advertisement

ಕರ್ನಾಟಕದಲ್ಲೂ ಮುಷ್ಕರ ಅಂಗವಾಗಿ ರಾಜ್ಯದ ಖಾಸಗಿ ವೈದ್ಯರು ಬೆಳಗ್ಗೆ 6 ರಿಂದ ಸಂಜೆ 9ರವರೆಗೆ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್‌ ಮಾಡಿ ಹೋರಾಟ ಮಾಡಲಿದ್ದಾರೆ. ಆದರೆ, ತುರ್ತು ಚಿಕಿತ್ಸೆ  ಹಾಗೂ ಒಳರೋಗಿಗಳಿಗೆ ಸೇವೆ ಒದಗಿಸಲು ತೀರ್ಮಾನಿಸಿದ್ದಾರೆ. ಸಂಜೆ 6 ಗಂಟೆ ಬಳಿಕ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಒಪಿಡಿ ಸೇವೆ ಸಿಗಲಿದೆ.

ಖಾಸಗಿ ನರ್ಸಿಂಗ್‌ ಹೋಮ್‌ ಮತ್ತು ಆಸ್ಪತ್ರೆಗಳಲ್ಲಿ ಒಪಿಡಿ ಮುಚ್ಚುವುದಷ್ಟೇ ಅಲ್ಲದೆ ಕ್ಲಿನಿಕ್‌ಗಳು ತೆರೆಯದಂತೆ ಐಎಂಎ ಮನವಿ ಮಾಡಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ತರಗತಿ ನಡೆಸದಂತೆ ತಿಳಿಸಿದೆ. ಹೀಗಾಗಿ ಶನಿವಾರ ಕ್ಲಿನಿಕ್‌ಗಳು ಹಾಗೂ ಖಾಸಗಿ ಕಾಲೇಜುಗಳು ತೆರೆದಿರುವುದು ಅನುಮಾನವಾಗಿದೆ.

ಎನ್‌ಎಂಸಿ ವಿಧೇಯಕ ಕೈ ಬಿಡುವಂತೆ ಜಿಲ್ಲಾಧಿಕಾರಿಗಳ ಮೂಲ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಐಎಂಎ ಅಡಿಯಲ್ಲಿ ನೊಂದಾಯಿತ 2.5ಲಕ್ಷ ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಎಚ್‌.ಎನ್‌.ರವೀಂದ್ರ ತಿಳಿಸಿದ್ದಾರೆ.ಒಂದೊಮ್ಮೆ ಎನ್‌ಎಂಸಿ ವಿಧೇಯಕ ಅನುಮೋದನೆಗೊಂಡರೆ ಇನ್ನೂ ತೀವ್ರಸ್ವರೂಪದ ಹೋರಾಟ ನಡೆಸಲು ಐಎಂಎ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ಎನ್‌ಎಂಸಿ ಜಾರಿಗೆ ವಿರೋಧವೇಕೆ?
ಕೇಂದ್ರ ಸರ್ಕಾರ ಎನ್‌ಎಂಸಿ ವಿಧೇಯಕದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಸ್ವಾಯತ್ತೆ ಇರುವುದಿಲ್ಲ. ಈ ವಿಧೇಯಕ ಶ್ರೀಮಂತ ಮಕ್ಕಳಿಗಷ್ಟೇ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ಐಎಂಎಯಲ್ಲಿ ನೊಂದಾಯಿತರಾದ ವೈದ್ಯರು ಆರೋಪಿಸಿದ್ದಾರೆ. ಎನ್‌ಎಂಸಿ ಮೂಲಕ ವೈದ್ಯರು, ಆಸ್ಪತ್ರೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲಾಗುವುದು ಎಂದು ಐಎಂಎ ಈ ವಿಧೇಯಕವನ್ನು ವಿರೋಧಿಸುತ್ತಿದೆ.

Advertisement

ಸರ್ಕಾರಿ ವೈದ್ಯರಿಗೆ ಇಂದು ರಜೆ ಇಲ್ಲ
ಐಎಂಎ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗದಂತೆ ಕಾರ್ಯನಿರ್ವಹಿಸಬೇಕು. ರೋಗಿಗಳಿಗೆ ಅಗತ್ಯ ಸೇವೆ ಒದಗಿಸಬೇಕೆಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ವಾರಾಂತ್ಯ ಹಾಗೂ ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. ಹೊರ ರೋಗಿಗಳ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 124 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಎಲ್ಲ ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಕೂಡ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸಲಿವೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಧಿಕಾರಿ ಡಾ.ಶ್ರೀನಿವಾಸ ಗೋಳೂರು ತಿಳಿಸಿದ್ದಾರೆ.

ಯಾವುದೇ ವೈದ್ಯರಿಗೆ ರಜೆ ನೀಡಲಾಗಿಲ್ಲ. ಎಲ್ಲ ವೈದ್ಯರು ಶನಿವಾರ ಸೇವೆಯಲ್ಲಿರುತ್ತಾರೆ. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
– ಪಂಕಜ್‌ಕುಮಾರ್‌ ಪಾಂಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next