Advertisement

ಪಂಚಲೋಹದ ಶಿವಲಿಂಗಕ್ಕಿಂದು  ಪೂಜೆ

09:53 AM Mar 04, 2019 | |

ಮುಂಡರಗಿ: ತಾಲೂಕಿನ ವಿಠಲಾಪುರ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರೂಪದ ಪಂಚಲೋಹದ ರಸಲಿಂಗ (ಶಿವಲಿಂಗ)ವಿದ್ದು, ಮಹಾಶಿವರಾತ್ರಿ ದಿನ ವಿಶೇಷವಾಗಿ ರಸಲಿಂಗ ಪೂಜೆ ನಡೆಯುತ್ತದೆ. ರಸಲಿಂಗ ಪೂಜೆಯನ್ನು ಶಿವರಾತ್ರಿ ದಿನ ತೊಳೆದು ಸಕಲ ಹೂವುಗಳು,ಬಿಲ್ವಪತ್ರೆಗಳಿಂದ ಪೂಜೆ ನೆರವೇರಿಸಲಾಗುತ್ತದೆ.

Advertisement

ದಕ್ಷಿಣ ಭಾರತದಲ್ಲಿಯೇ ವಿಶೇಷ ಆಗಿರುವ ರಸಲಿಂಗವು ಹಲವು ಕುತೂಹಲಕರ ಸಂಗತಿಗಳಿಂದ ಒಡಗೂಡಿದೆ. ರಸಶಾಸ್ತ್ರವನ್ನು ಅಧ್ಯಯನ ಮಾಡಿದ್ದ ಯೋಗ ಗುರುಗಳು ರಸಲಿಂಗವನ್ನು ರಚನೆ ಮಾಡಿದ್ದರು ಎನ್ನುವ ಮಾತು ಜನಜನಿತವಾಗಿದೆ. ಅಲ್ಲದೇ ಸಾಕ್ಷಾತ್ ಶಿವನ ಕೃಪೆಯಿಂದಲೇ ಬಿಷ್ಟಪ್ಪಯ್ಯನವರು ರಸಲಿಂಗವನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತದೆ. ರಸಲಿಂಗದ ಹಿಂದೆ ಐತಿಹಾಸಿಕ ಸಂಗತಿಗಳು ಅಡಕವಾಗಿರುವ ಬಗ್ಗೆಯು ತಿಳಿದು ಬರುತ್ತದೆ.

ಮಹಾಪುರುಷರ ಕುಟುಂಬ: ವಿಠಲಾಪುರದ ಮಹಾಪುರುಷರ ಕುಟುಂಬದ ಮೂಲ ಪುರುಷ ಬಿಷ್ಟಪ್ಪಯ್ಯ. ಅವರೇ ರಸಲಿಂಗವನ್ನು ರಚನೆ ಮಾಡಿರುವ ಪ್ರತೀತಿ ಇದೆ. ಬಿಷ್ಟಪ್ಪಯ್ಯನವರಿಂದ ಬಳುವಳಿಯಾಗಿ ಬಂದಿರುವ ರಸಲಿಂಗದ ಪೂಜೆಯು ಅವ್ಯಾಹತವಾಗಿ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದೆ.

ರಸಲಿಂಗದ ರಚನೆ: ವಿಜಯನಗರ ಆಳ್ವಿಕೆಯ ಸಂದರ್ಭದಲ್ಲಿ 16ನೇ ಶತಮಾನದ ಪೂರ್ವಾರ್ಧ ಕಾಲಘಟ್ಟದಲ್ಲಿ ಇದ್ದ ಬಿಷ್ಟಪ್ಪಯ್ಯ ಮಹಾಪುರುಷರು ವಿಠಲಾಪುರದಲ್ಲಿ ನೆಲೆ ನಿಂತು ಯೋಗ, ರಸಶಾಸ್ತ್ರ ವಿದ್ಯೆಯನ್ನು ಪಾರಂಗತ ಮಾಡಿಕೊಂಡಿದ್ದರು. ಯೋಗ ಮತ್ತು ರಸಶಾಸ್ತ್ರ ವಿದ್ಯೆಯ ಮೂಲಕ ಪಂಚಲೋಹದಿಂದ ಕೂಡಿದ ರಸಲಿಂಗವನ್ನು ರಚಿಸಿದರು. ಎರಡರಿಂದ ಮೂರು ಅಡಿ ಎತ್ತರ ಇರುವ ಪಂಚಲೋಹದ ರಸಲಿಂಗದ ಟೊಳ್ಳಾಗಿರುವ ಒಳಭಾಗದಲ್ಲಿ ಪಾದರಸವನ್ನು ತುಂಬಿದರಲ್ಲದೇ, ರಸಲಿಂಗದಿಂದ ಪಾದರಸವು ಹೊರಗೆ ಬಾರದಂತೆ ಬೆಸುಗೆಯು ಹಾಕಿದರು. ರಸಲಿಂಗವು ಮೂವತ್ತು ಕೆಜಿಗಳಷ್ಟು ತೂಕವಿದೆ.

ಕನಿಷ್ಠ ನಾಲ್ಕು ಶತಮಾನಗಳಷ್ಟು ಪುರಾತನ ಆಗಿರುವ ರಸಲಿಂಗವು ಈ ಹೊತ್ತಿಗೂ ಸುಸ್ಥಿತಿಯಲ್ಲಿದ್ದು, ನಿತ್ಯವು ಪೂಜಿಸಲ್ಪಡುತ್ತದೆ. ರಸಲಿಂಗವು ದಿನದ ಸೂರ್ಯ ಕಿರಣಗಳ ಏರಿಳಿತಕ್ಕೆ ಅನುಗುಣವಾಗಿ ಮುಂಜಾನೆ ಕೆಂಪು ಬಣ್ಣದಲ್ಲಿ, ಮಧ್ಯಾಹ್ನ ಹಳದಿ ಬಣ್ಣದಲ್ಲಿ, ಸಂಜೆ ಹೊತ್ತು ಬಂಗಾರ ಛಾಯೆಯ ರೂಪದಲ್ಲಿ ಕಾಣುತ್ತದೆ.

Advertisement

ದೇಶದಲ್ಲಿ ಸುಖ, ಸಮೃದ್ಧಿ ಮೂಡಿ ಬರಲಿ ಎನ್ನುವ ಹಿನ್ನೆಲೆಯಲ್ಲಿ ಮೂವತ್ತು-ನಲವತ್ತು ವರ್ಷಗಳಿಗೆ ಒಮ್ಮೆ ರಸಲಿಂಗದಿಂದ ಪಾದಸರವು ಹರಿದು ಹೊರ ಸೂಸುತ್ತದೆ. ಅಲ್ಲದೇ ವಾತಾವರಣದಲ್ಲಿ ತಾಪಮಾನವು ಹೆಚ್ಚಾದರೂ ಕೂಡಾ ರಸಲಿಂಗದಿಂದ ಪಾದರಸವು ಹೊರ ಸೂಸುತ್ತದೆ.  ರಸಲಿಂಗದಿಂದ ಹೊರಬಂದಿರುವ ಪಾದರಸವನ್ನು ಮಹಾಪುರುಷ ಕುಟುಂಬದವರು ಸಂಗ್ರಹಿಸಿಟ್ಟಿದ್ದಾರೆ. ಈ ಹೊರ ಸೂಸಿರುವ ಪಾದರಸವು ಆಯುರ್ವೇದಿಕ್‌ ಔಷಧಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ರಸಲಿಂಗವನ್ನು ಪ್ರತಿದಿನವು ಜಲಾಭಿಷೇಕ ಮಾಡಿದಾಗ ದೊರಕುವ ಜಲಾಮೃತವು ಸರ್ವರೋಗಗಳಿಗೆ ದಿವೌಷಧ ಆಗಿದೆ ಎಂದು ವಂಶಸ್ಥರಾದ ಸುನೀಲ್‌ ಮಹಾಪುರುಷ ಹೇಳುತ್ತಾರೆ.

ರಸಲಿಂಗ ರಚನೆ ಮಾಡಿರುವ ಬಿಷ್ಟಪ್ಪಯ್ಯ ಮಹಾಪುರುಷರಿಗೂ ವಿಜಯನಗರ ಸಾಮ್ರಾಜ್ಯಕ್ಕೂ ನಂಟು ಇತ್ತು. ವಿರೂಪಾಕ್ಷೇಶ್ವರ
ದೇವಸ್ಥಾನದ ಗೋಪುರವನ್ನು ಬಿಷ್ಟಪ್ಪಯ್ಯನವರೇ ಕಟ್ಟಿಸಿದ್ದಾರೆ.
 . ವಸುಂಧರಾ ದೇಸಾಯಿ, ಇತಿಹಾಸಕರರು.

„ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next