Advertisement
ಕೋಟ್ಲಾ ಮುಖಾಮುಖಿಯಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಜಯಭೇರಿ ಮೊಳಗಿಸಿ ಭಾರತದ ಸತತ 13ನೇ ಟಿ20 ಗೆಲುವನ್ನು ತಪ್ಪಿಸಿತ್ತು. ಈ ಸರಣಿ ನಿರೀಕ್ಷಿಸಿದಷ್ಟು ಸುಲಭವಲ್ಲ ಎಂಬುದು ಈಗಾಗಲೇ ಯುವ ಭಾರತ ತಂಡಕ್ಕೆ ಸ್ಪಷ್ಟವಾಗಿ ಅರಿವಾಗಿದೆ.
Related Articles
Advertisement
ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ: ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಭಾರತಕ್ಕಿಂತ ಎಷ್ಟೋ ಬಲಿಷ್ಠವಾಗಿ ಗೋಚರಿಸುತ್ತಿದೆ. ಡಿ ಕಾಕ್, ಮಿಲ್ಲರ್, ಡುಸೆನ್, ರಬಾಡ, ನೋರ್ಜೆ, ಪ್ರಿಟೋರಿಯಸ್, ಮಹಾರಾಜ್, ಮಾರ್ಕ್‌ರಮ್, ಎನ್‌ಗಿಡಿ, ಪಾರ್ನೆಲ್ ಅವರನ್ನೊಳಗೊಂಡ ಪೂರ್ಣ ಸಾಮರ್ಥ್ಯದ ತಂಡ ಇದಾಗಿದೆ. ಇದಕ್ಕೂ ಮಿಗಿಲಾಗಿ ಇಲ್ಲಿನ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಮಿಂಚಿದವರೇ ಆಗಿದ್ದಾರೆ. ಅದೇ ಫಾರ್ಮನ್ನು ಇಲ್ಲಿ ಮುಂದುವರಿಸುತ್ತಿದ್ದಾರೆ. ಉದಾಹರಣೆಗೆ ಮಿಲ್ಲರ್-ಡುಸೆನ್ ಜೋಡಿಯ ಅಜೇಯ 131 ರನ್ ಜತೆಯಾಟ. ಭಾರತದ ಬ್ಯಾಟಿಂಗ್ ಓಕೆ:
ಹಾಗೆ ವಿಶ್ಲೇಷಣೆಗೆ ಹೊರಟರೆ ನವದೆಹಲಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಸಮಸ್ಯೆ ತಲೆದೋರಿರಲಿಲ್ಲ. ಇಶಾನ್ ಕಿಶನ್, ಗಾಯಕ್ವಾಡ್, ಐಯ್ಯರ್, ಪಂತ್, ಪಾಂಡ್ಯ ಎಲ್ಲರೂ ಸಿಡಿದು ನಿಂತಿದ್ದರು. ನಾಲ್ಕೇ ವಿಕೆಟ್ ನಷ್ಟದಲ್ಲಿ ತಂಡದ ಮೊತ್ತ 211ಕ್ಕೆ ಏರಿತ್ತು. ಆದರೆ ಮೊದಲ ಸಲ 200 ಪ್ಲಸ್ ಮೊತ್ತವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬುದು ಯೋಚಿಸಬೇಕಾದ ಸಂಗತಿ. ಕಾರಣ ಸ್ಪಷ್ಟ. ನವದೆಹಲಿಯದ್ದು ಅಪ್ಪಟ ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಭಾರತದ ಬೌಲಿಂಗ್ ಅಷ್ಟೇ ದುರ್ಬಲವಾಗಿತ್ತು. ಮಿಲ್ಲರ್-ಡುಸೆನ್ ಜೋಡಿ ಉತ್ತಮ ಫಾರ್ಮ್ ನಲ್ಲಿತ್ತು. ಇವರ ಆಕ್ರಮಣಕ್ಕೆ ಆತಿಥೇಯರ ದಾಳಿ ಇನ್ನಷ್ಟು ನಲುಗಿತು. ಐಪಿಎಲ್‌ನಲ್ಲಿ 27 ವಿಕೆಟ್ ಉಡಾಯಿಸಿ ನೇರಳೆ ಕ್ಯಾಪ್ ಏರಿಸಿಕೊಂಡ ಚಹಲ್‌ಗೆ ಇಲ್ಲಿ ಲಭಿಸಿದ್ದು 2 ಪೂರ್ತಿ ಓವರ್ ಮಾತ್ರ ಎಂಬುದು ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಪಾಂಡ್ಯ, ಭುವನೇಶ್ವರ್, ಪಟೇಲ್‌ದ್ವಯರೆಲ್ಲರೂ ಓವರಿಗೆ ಹತ್ತಕ್ಕೂ ಹೆಚ್ಚು ರನ್ ನೀಡಿ ದುಬಾರಿಯಾಗಿದ್ದರು. ಹೀಗಾಗಿ ದ್ವಿತೀಯ ಪಂದ್ಯಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ಒಂದೆರಡು ಬದಲಾವಣೆ ಸಂಭವಿಸಬಹುದು. ಐಪಿಎಲ್‌ನಲ್ಲಿ ಮಿಂಚಿದ ಉಮ್ರಾನ್ ಮಲಿಕ್ ಅಥವಾ ಅರ್ಷದೀಪ್ ಸಿಂಗ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಹೇಗಿದ್ದೀತು ಕಟಕ್ ಅಂಕಣ?
ಆದರೆ ಕಟಕ್ ಟ್ರ್ಯಾಕ್ ಹೇಗೆ ವರ್ತಿಸೀತು ಎಂಬುದು ನಿಗೂಢವಾಗಿಯೇ ಇದೆ. ಇಲ್ಲಿ ಟಿ20 ಪಂದ್ಯ ನಡೆಯುತ್ತಿರುವುದು ನಾಲ್ಕೂವರೆ ವರ್ಷಗಳ ಬಳಿಕ ಎಂಬುದನ್ನು ಗಮನಿಸಬೇಕು. ಇದುವರೆಗೆ ಇಲ್ಲಿ ನಡೆದದ್ದು 2 ಪಂದ್ಯ ಮಾತ್ರ. 2015ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವೇ ಭಾರತವನ್ನು ಮಣಿಸಿತ್ತು. ಬಳಿಕ 2017ರಲ್ಲಿ ಭಾರತ ಲಂಕೆಗೆ ಸೋಲುಣಿಸಿತು. ಹರಿಣಗಳೆದುರು ಭಾರತ, ಭಾರತದ ವಿರುದ್ಧ ಲಂಕಾ ನೂರರೊಳಗೆ ಕುಸಿದಿತ್ತು. ಅಂಥದೇ ಬೌಲಿಂಗ್ ಟ್ರ್ಯಾಕನ್ನು ಕಟಕ್ ಈಗಲೂ ಹೊಂದಿದೆಯೇ? ಸಾಧ್ಯತೆ ಕಡಿಮೆ. ಭಾರತ ತಂಡ: ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಐಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ (ಉಪನಾಯಕ), ವೆಂಕಟೇಶ್ ಐಯ್ಯರ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್. ಮುಖಾಮುಖಿ
ಒಟ್ಟು ಪಂದ್ಯ 16
ಭಾರತ ಜಯ 09
ದ.ಆಫ್ರಿಕಾ ಜಯ 07
ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್
ಪಂದ್ಯಾರಂಭ: ರಾ.7