Advertisement

ಬ್ಯಾಟಿಂಗ್‌ ಕ್ಲಿಕ್‌ ಆದರಷ್ಟೇ ಸರಣಿ ಲಕ್‌: ಮ್ಯಾಂಚೆಸ್ಟರ್‌ನಲ್ಲಿ ನಿರ್ಣಾಯಕ ಏಕದಿನ

11:00 PM Jul 16, 2022 | Team Udayavani |

ಮ್ಯಾಂಚೆಸ್ಟರ್‌: ಲಾರ್ಡ್ಸ್‌ ನಲ್ಲೇ ಏಕದಿನ ಸರಣಿ ವಶಪಡಿಸಿಕೊಳ್ಳ ಬಹುದಾದ ಅವಕಾಶವನ್ನು ಕೈಯಾರೆ ಕಳೆದುಕೊಂಡ ಭಾರತವೀಗ, ರವಿವಾ ರದ ಮ್ಯಾಂಚೆಸ್ಟರ್‌ ಮುಖಾಮುಖಿಯನ್ನು ತೀವ್ರ ಒತ್ತಡದಲ್ಲಿಯೇ ಆಡಬೇಕಿದೆ. ಮೊದಲೆರಡು ಪಂದ್ಯ ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ “ಭವಿಷ್ಯ’ ನುಡಿಯುವುದಾದರೆ ಬ್ಯಾಟಿಂ ಗ್‌ನಲ್ಲಿ ಕ್ಲಿಕ್‌ ಆದ ತಂಡಕ್ಕಷ್ಟೇ ಸರಣಿ ಗೆಲುವಿನ ಲಕ್‌ ಎನ್ನಬೇಕಾಗುತ್ತದೆ.

Advertisement

ಓವಲ್‌ನಲ್ಲಿ ಇಂಗ್ಲೆಂಡ್‌ 110ಕ್ಕೆ ಕುಸಿದುದರಿಂದ ಭಾರತದ ಬ್ಯಾಟಿಂಗ್‌ ಸರದಿಯ ಮೇಲೆ ಯಾವುದೇ ಒತ್ತಡ ಬೀಳಲಿಲ್ಲ. ರೋಹಿತ್‌ ಶರ್ಮ-ಶಿಖರ್‌ ಧವನ್‌ ಇಬ್ಬರೇ ಸೇರಿ ಈ ಮೊತ್ತವನ್ನು ಬೆನ್ನಟ್ಟಿದರು. ಆದರೆ ಲಾರ್ಡ್ಸ್‌ನಲ್ಲಿ ಪರಿಸ್ಥಿತಿ ಉಲ್ಟಾ ಹೊಡೆಯಿತು. ಇಲ್ಲಿ ಲಭಿಸಿದ್ದು 247 ರನ್‌ ಟಾರ್ಗೆಟ್‌. ಇದೇನೂ ದೊಡ್ಡ ಸವಾಲಲ್ಲ. ಆದರೆ ಇಂಗ್ಲೆಂಡ್‌ ಬೌಲರ್ ತಿರುಗಿ ಬಿದ್ದರು; ರೀಸ್‌ ಟಾಪ್ಲಿ ಟಾಪ್‌ ಕ್ಲಾಸ್‌ ಬೌಲಿಂಗ್‌ ಪ್ರದರ್ಶಿಸಿದರು. ಭಾರತದ ಬ್ಯಾಟಿಂಗ್‌ ಲಯ ತಪ್ಪಿತು. ಪರಿಣಾಮ, 100 ರನ್ನುಗಳ ದೊಡ್ಡ ಸೋಲು.

ಆಕ್ರಮಣಕಾರಿ ಆಟ ಅಗತ್ಯ
ಎಚ್ಚರಿಕೆಯಿಂದ ಕೂಡಿದ ಆಕ್ರಮಣಕಾರಿ ಹಾಗೂ ನಿರ್ಭೀತ ಆಟವೊಂದೇ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರವಾಗಬಲ್ಲದು. ನಾಯಕ ರೋಹಿತ್‌ ಶರ್ಮ ಮುನ್ನುಗ್ಗಿ ಬಾರಿಸತೊಡಗಿದರೆ ಟೀಮ್‌ ಇಂಡಿಯಾದ ಅರ್ಧದಷ್ಟು ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ರೋಹಿತ್‌ ಓವಲ್‌ನಲ್ಲಿ ಸಿಡಿದ ಪರಿಣಾಮ ಟೀಮ್‌ ಇಂಡಿಯಾಕ್ಕೆ ನೋಲಾಸ್‌ ಜಯ ಒಲಿಯಿತು.

ಲಾರ್ಡ್ಸ್‌ ನಲ್ಲಿ ರೋಹಿತ್‌ ಸೊನ್ನೆ ಸುತ್ತಿದರು, ಸತತ 4 ಓವರ್‌ ಮೇಡನ್‌ ಆಯಿತು, ಭಾರತದ ಬ್ಯಾಟಿಂಗ್‌ ಹಳಿ ತಪ್ಪಿತು. ಒಂದರಲ್ಲಿ 10 ವಿಕೆಟ್‌ ಜಯವಾದರೆ, ಇನ್ನೊಂದರಲ್ಲಿ 100 ರನ್‌ ಸೋಲು. ತಂಡವೊಂದರ ಅಸ್ಥಿರ ಆಟಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.

ವಿರಾಟ್‌ ಕೊಹ್ಲಿ ರನ್‌ ಬರಗಾಲ ದಲ್ಲಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ಭಾರತ ಬ್ಯಾಟಿಂಗ್‌ ಖಂಡಿತ ವಾಗಿಯೂ ಕಳಪೆಯಲ್ಲ. ಮಧ್ಯಮ ಕ್ರಮಾಂಕ ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ ಅವರಂಥ ಹೊಡಿಬಡಿ ಆಟಗಾರಿಂದಲೇ ತುಂಬಿದೆ. ಇವರೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಆಡಿ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಾದುದು ಮುಖ್ಯ. ಒಂದಿಬ್ಬರು ಸಿಡಿದರೂ ಸವಾಲನ್ನು ಸುಲಭದಲ್ಲಿ ಮೆಟ್ಟಿ ನಿಲ್ಲಬಹುದು.

Advertisement

ಅರ್ಧ ಶತಕ ಬಾರಿಸದ ಇಂಗ್ಲೆಂಡ್‌!
ಎರಡೂ ಪಂದ್ಯಗಳಲ್ಲಿ ಭಾರತದ ಬೌಲಿಂಗ್‌ ಪರಿಣಾಮಕಾರಿಯಾ ಗಿಯೇ ಇತ್ತು. ವಿಶ್ವ ಚಾಂಪಿಯನ್ನರಿಗೆ ಸರಣಿಯಲ್ಲಿ ಈವರೆಗೆ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಎಂಬುದು ಭಾರತದ ಬೌಲಿಂಗ್‌ ಪಡೆಯ ಹೆಗ್ಗಳಿಕೆಯೇ ಆಗಿದೆ. ಆಂಗ್ಲರ ಬ್ಯಾಟಿಂಗ್‌ ಸರದಿಯನ್ನೊಮ್ಮೆ ನೋಡಿ… 7ನೇ ಕ್ರಮಾಂಕದ ತನಕ ಬಿಗ್‌ ಹಿಟ್ಟರ್‌ಗಳೇ ತುಂಬಿದ್ದಾರೆ. ರಾಯ್‌, ಬೇರ್‌ಸ್ಟೊ, ರೂಟ್‌, ಸ್ಟೋಕ್ಸ್‌, ಬಟ್ಲರ್‌, ಲಿವಿಂಗ್‌ಸ್ಟೋನ್‌ ಮತ್ತು ಅಲಿ. ಇವರಲ್ಲಿ 2-3 ಮಂದಿ ಕ್ರೀಸ್‌ ಆಕ್ರಮಿಸಿಕೊಂಡರೂ ಸಾಕು, ಮುನ್ನೂರರ ಮೊತ್ತಕ್ಕೇನೂ ಕೊರತೆ ಇಲ್ಲ. ಭಾರತ ಈ ಎಚ್ಚರಿಕೆಯಲ್ಲೇ ಬೌಲಿಂಗ್‌ ಸಂಘಟಿಸಬೇಕಿದೆ.

ಇಂದು 3ನೇ ಏಕದಿನ
ಸ್ಥಳ: ಮ್ಯಾಂಚೆಸ್ಟರ್‌
ಆರಂಭ: 3.30
ಪ್ರಸಾರ: ಸೋನಿ ಸ್ಪೋರ್ಟ್ಸ್

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next