Advertisement

ಇಂದು ವಿಶ್ವ ತಾಯಂದಿರ ದಿನ: ಇಳೆಯೊಳಗಿಲ್ಲ ಈಕೆಗಿಂತ ಮಿಗಿಲಾದ ಶಕ್ತಿ…

01:36 AM May 08, 2022 | Team Udayavani |

ಇಂದು ವಿಶ್ವ ತಾಯಂದಿರ ದಿನ. ಅಮ್ಮನಿಗಿಂತ ಮಿಗಿಲಾದ ಶಕ್ತಿ ಈ ಜಗದೊಳಗಿಲ್ಲ. ಇದಕ್ಕೆ ಪುಟ್ಟ ನಿದರ್ಶನ ನಮ್ಮ ಕಣ್ಣೆದುರಿನ ಈ ಸಾಧಕರ ಸ್ಫೂರ್ತಿಯ ಕಥೆ. ಇಷ್ಟು ಎತ್ತರಕ್ಕೆ ಏರಿದ ಇವರನ್ನು ಕೆತ್ತಿ ಕಟೆದು ಭವ್ಯ ಮೂರ್ತಿಯನ್ನಾಗಿಸಿದ್ದು ಅವರ ಅಮ್ಮ. ಸರಳತೆ, ಉದಾತ್ತ ಮೌಲ್ಯ, ನಾಯಕತ್ವ, ತ್ಯಾಗದ ಗುಣ ಕಲಿಸುವ ಏಕೈಕ ಗುರು ಅಮ್ಮ!

Advertisement

ಸಿಎಂ ಸರಳತೆ ಗಂಗಮ್ಮನ ಬಳುವಳಿ


“ಜನಸಾಮಾನ್ಯರ ಸಿಎಂ’ ಬಸವರಾಜ ಬೊಮ್ಮಾಯಿಯವರ ಈ ಗುಣಕ್ಕೆ ಮೂಲ ಕಾರಣ ಅಮ್ಮ ಗಂಗಮ್ಮ. ಪತಿ ಕಂದಾಯ ಸಚಿವರಾಗಿ ದ್ದರೂ ಸಿಟಿಬಸ್ಸನ್ನೇರಿಯೇ ಹುಬ್ಬಳ್ಳಿಯಲ್ಲಿ ಸಂತೆ ಮುಗಿಸಿಕೊಂಡು ಬರು ತ್ತಿದ್ದವರು ಗಂಗಮ್ಮ. ಮಕ್ಕಳಿಗೆ ಕಲಿಸಿದ್ದೂ ಅದನ್ನೇ. ಅನಾಥ ಬಾಲಕನೊಬ್ಬನನ್ನು ಅಮೆರಿಕದಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗುವ ಹಂತಕ್ಕೆ ಬೆಳೆಸಿದ ಕರುಣಾಮಯಿ. ಮನೆಗೆ ಕೆಲಸದವರೇ ಬರಲಿ, ಜನಪ್ರತಿನಿಧಿಗಳಂತಹ ಆಳುವವರೇ ಬರಲಿ… ಗಂಗಮ್ಮ ತೋರುತ್ತಿದ್ದ ಉಪಚಾರ ಒಂದೇ ರೀತಿಯದಾಗಿತ್ತು. ಮೊರಾರ್ಜಿ ಅವರಿಂದ ತೊಡಗಿ ದೇವೇಗೌಡರ ವರೆಗೆ ರಾಜ್ಯ- ರಾಷ್ಟ್ರ ರಾಜಕಾರಣದ ಬಹುತೇಕ ಮುತ್ಸದ್ದಿಗಳು ಗಂಗಮ್ಮ ಅವರ ಕೈ ಅಡುಗೆ-ಕಕ್ಕುಲಾತಿಗೆ ಮನಸೋತವರು.

ಧರ್ಮದ ಜ್ಯೋತಿ ಬೆಳಗಿದ ಮಾತೆ


ಧರ್ಮಸ್ಥಳ ಕ್ಷೇತ್ರ ಇಷ್ಟು ಬೃಹದಾಕಾರದಲ್ಲಿ ಬೆಳೆದಿರುವುದರ ಹಿಂದೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರ ಪಾತ್ರ ಅನುಪಮವಾದುದು. ತಂದೆ ರತ್ನವರ್ಮ ಹೆಗ್ಗಡೆ ಅವರು ಅಗಲಿದಾಗ ವೀರೇಂದ್ರರಿಗೆ ಇನ್ನೂ 20 ವರ್ಷ ವಯಸ್ಸು. ಆ ಕಿರಿಯ ವಯಸ್ಸಿನಲ್ಲಿ ಧರ್ಮಾಧಿಕಾರಿಯ ಪಟ್ಟ ಏರಿದಾಗ, ಪಟ್ಟಾಧಿಕಾರಿಯ ನಡೆ-ನುಡಿ- ಆಚರಣೆಗಳ ಬಗ್ಗೆ ಪರಿಪೂರ್ಣ ತಿಳಿವಳಿಕೆ ನೀಡಿ, ಧೈರ್ಯ ತುಂಬಿದವರು ಮಾತೃಶ್ರೀ ರತ್ನಮ್ಮನವರು. ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿದ್ದ ಕಾರ್ಯಗಳಿಗೆ ಮರುಚಾಲನೆ ನೀಡಿದ್ದಲ್ಲದೆ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಉದ್ಯೋಗ ತರಬೇತಿ – ಹೀಗೆ ಶ್ರೀ ಕ್ಷೇತ್ರಧರ್ಮಸ್ಥಳದ ಜನೂಪಯೋಗಿ ಕಾರ್ಯಗಳನ್ನು ಹೊಸ ದಿಕ್ಕಿಗೆ ಹೊರಳಲು ಮಾರ್ಗದರ್ಶನ ನೀಡಿದ್ದರು.

ಇನ್ಫೋಸಿಸ್‌ ಹಿಂದಿದೆ ಅಮ್ಮನ ತ್ಯಾಗ


1981ರ ಜೂನ್‌ ತಿಂಗಳ ರಾತ್ರಿ. ಅಮ್ಮ ಸುಧಾಮೂರ್ತಿಯವರ ಪಕ್ಕದಲ್ಲಿ ಹಸುಗೂಸು ಅಕ್ಷತಾ ನಿದ್ದೆಗೆ ಜಾರಿದ್ದಳು. ಕಿಟಕಿಯಾಚೆಗೆ ಬೆಳಗುವ ಚಂದಿರ ನನ್ನು ನೋಡುತ್ತ ನಾರಾಯಣ ಮೂರ್ತಿ ಚಿಂತೆಯಲ್ಲಿ ಮುಳುಗಿದ್ದರು. ಅವರ ತಲೆಯಲ್ಲಿ ಇನ್ಫೋಸಿಸ್‌ ಕಟ್ಟುವ ಕಲ್ಪನೆಯಿತ್ತು. ಪತಿ ಅಂಥ ಸಂಸ್ಥೆ ಕಟ್ಟುವ ಕನಸು ಮುಂದಿಟ್ಟಾಗ ಸುಧಾಮೂರ್ತಿ ಎಂದೋ ಕೂಡಿಟ್ಟಿದ್ದ 10 ಸಾವಿರ ರೂ. ಹಣ ನೀಡಿ ಧೈರ್ಯ ತುಂಬಿದ್ದರು. ಸಂಸ್ಥೆಯ ಆರಂಭಕ್ಕೆ ಪತಿಯ ಜತೆಗೆ ಹಗಲಿರುಳು ದುಡಿಯುವ ಆವಶ್ಯಕತೆ ಬಹಳ ಇತ್ತು. ಸುಧಾಮೂರ್ತಿ 52 ದಿನಗಳ ಪುಟಾಣಿ ಅಕ್ಷತಾಳನ್ನು ತಮ್ಮಮ್ಮ ಮತ್ತು ಅಕ್ಕನ ಮಡಿಲಿನಲ್ಲಿ ಇರಿಸಿ, ಭಾರವಾದ ಹೃದಯದೊಂದಿಗೆ ಪುಣೆಗೆ ಮರಳಿದ್ದರು. ತಾಯಿಯ ಆ ತ್ಯಾಗದ ಫ‌ಲವೇ ಇಂದು ಇನ್ಫೋಸಿಸ್‌ ಎಂಬ ಹೆಮ್ಮರ ರೆಂಬೆಕೊಂಬೆ ಚಾಚಿಕೊಂಡಿದೆ!

ಬಡಮಕ್ಕಳ ಕಣ್ಣು ಚೆನ್ನಮ್ಮ


ಆ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೂ ಕಡುಕಷ್ಟ. ಶಾಲೆ- ಕಾಲೇಜಿಗೆ ಹೋಗುತ್ತಿದ್ದ ಅನೇಕ ಬಡಮಕ್ಕಳು ವಾರಾನ್ನಕ್ಕಾಗಿ ದೇವೇಗೌಡರ ಮನೆಯನ್ನು ಆಶ್ರಯಿಸುತ್ತಿದ್ದರು. ಗೌಡರ ಪತ್ನಿ ಚೆನ್ನಮ್ಮ ತಮ್ಮ ಆರು ಮಕ್ಕಳನ್ನು ಸಲಹುತ್ತಲೇ ನಿತ್ಯವೂ ವಾರಾನ್ನಕ್ಕೆ ಏರ್ಪಾಡು ಮಾಡುತ್ತ ಬಡ ಮಕ್ಕಳಿಗೆ ಅನ್ನಪೂರ್ಣೆಯಾಗಿದ್ದರು. ಅನಾರೋಗ್ಯ ಎಂದ ಮಕ್ಕಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡುತ್ತಿದ್ದರು. ದೇವೇಗೌಡರು ರಾಜಕಾರಣದಲ್ಲಿ ವ್ಯಸ್ತರಾದ ಮೇಲಂತೂ ಮನೆಗೆ ಬರುತ್ತಿದ್ದ ನೂರಾರು ಮಂದಿಗೆ ಉಪಚಾರ, ವಾತ್ಸಲ್ಯವೇ ಅವರ ದಿನಚರಿಯಾಯಿತು. “ಜನರ ಸಂಕಷ್ಟಕ್ಕೆ ಸ್ಪಂದಿಸುವ ಮಾತೃಹೃದಯ ನನಗೆ ಬಂದದ್ದು ನನ್ನ ಅಮ್ಮನಿಂದ’ ಎಂದು ಸ್ಮರಿಸುತ್ತಾರೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next