Advertisement

Today World Mental Health Day: ಸದೃಢ ಶರೀರದಷ್ಟೇ ಮುಖ್ಯ ಸುಸ್ಥಿರ ಮನಸ್ಸು

12:03 AM Oct 10, 2023 | Team Udayavani |

ಮನುಷ್ಯ ಆರೋಗ್ಯವಾಗಿರಬೇಕಾದರೇ ದೈಹಿಕ ಸುಸ್ಥಿರತೆಯ ಜತೆಗೆ ಮಾನಸಿಕ ಸ್ಥಿರತೆಯೂ ಅತೀ ಅಗತ್ಯ. ಮಾನಸಿಕ ಸಮಸ್ಯೆಗಳು ಯಾರಿಗೂ, ಯಾವ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು. ಮಾನಸಿಕ ಕಾಯಿಲೆಗೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಅಂಗವೈಕಲ್ಯ ಆದಿಯಾಗಿ ವಿವಿಧ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಮಾತ್ರವಲ್ಲದೇ ಈ ಸಮಸ್ಯೆಗಳು ಉಲ್ಬಣಿಸಿದರೆ ಸಾವು ಸಂಭವಿಸುವ ಅಪಾಯವೂ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಪ್ರತೀ ಎಂಟು ಜನರಲ್ಲಿ ಒಬ್ಬರು ಮಾನಸಿಕ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿ¨ªಾರೆ. ಮಾನಸಿಕ ಕಾಯಿಲೆಯ ಕುರಿತು ಜಾಗೃತಿ ಮೂಡಿಸಲು ಮತ್ತದರ ಪರಿಣಾಮಗಳ ಕುರಿತಂತೆ ಜನರಿಗೆ ತಿಳಿಸುವ ಸಲುವಾಗಿ ಪ್ರತೀವರ್ಷ ಅಕ್ಟೋಬರ್‌ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

Advertisement

ಈ ಬಾರಿಯ ಧ್ಯೇಯ
“ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ಎಂಬುದು ಈ ವರ್ಷದ ಧ್ಯೇಯವಾಗಿದೆ. ಮಾನಸಿಕ ಸಮಸ್ಯೆಗಳ ಕುರಿತು ಜನರಲ್ಲಿ ತಿಳಿವಳಿಕೆಯನ್ನು ಹೆಚ್ಚಿಸು ವುದು, ಮಾನಸಿಕ ಆರೋಗ್ಯವನ್ನು ಸಾರ್ವತ್ರಿಕ ಮಾನವ ಹಕ್ಕಾಗಿ ಉತ್ತೇಜಿಸುವುದು ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಅತ್ಯಗತ್ಯ ಕ್ರಮ ಕೈಗೊಳ್ಳವುದು ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಮುಖ ಗುರಿಗಳಾಗಿವೆ.

ಕೀಳರಿಮೆ, ನಿರ್ಲಕ್ಷ್ಯ  ಸಲ್ಲದು
ಮಾನಸಿಕ ಕಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ಅಂದರೆ ಇನ್ನೊಬ್ಬರ ಬಳಿ ನಮ್ಮ ಸಮಸ್ಯೆಗಳು ಹೇಳಿಕೊಳ್ಳುವುದು; ಮತ್ತು ಆ ವ್ಯಕ್ತಿ ಅದನ್ನು ಹಾಸ್ಯ ಮಾಡದೆ, ಅದರ ಗಂಭೀರತೆಯನ್ನು ಅರಿತು ಸೂಕ್ತ ಚಿಕಿತ್ಸೆಗೆ ಪ್ರೇರೇಪಿಸುವುದು. ಮಾನಸಿಕ ಸಮಸ್ಯೆ ಅಂದರೆ ಹುಚ್ಚು ಎನ್ನುವ ತಪ್ಪು ಕಲ್ಪನೆಯಿಂದ ಮೊದಲು ಹೊರ ಬರಬೇಕು. ಮಾನಸಿಕ ಕಾಯಿಲೆಯ ಬಗ್ಗೆ ಕೀಳರಿಮೆ ಸಲ್ಲದು. ಸೂಕ್ತ ಚಿಕಿತ್ಸೆ ಪಡೆದಲ್ಲಿ ಎಲ್ಲರಂತೆ ಬಾಳಬಹುದು.

-ಒತ್ತಡಮುಕ್ತ ಜೀವನದಿಂದ ಮನಸ್ಸಿನ ಆರೋಗ್ಯ ರಕ್ಷಣೆ ಸಾಧ್ಯ
- ದೈಹಿಕ ಮತ್ತು ಮಾನಸಿಕ ಚಟುವಟಿಕೆಯಿಂದ ಕೂಡಿರಲಿ ನಮ್ಮ ದಿನಚರಿ
- ಆರೋಗ್ಯಕರ ಜೀವನ ಶೈಲಿ ಯನ್ನು ನಮ್ಮದಾಗಿಸಿ ಕೊಳ್ಳೋಣ
- ಮದ್ಯಪಾನ, ಮಾದಕದ್ರವ್ಯ ಸೇವನೆಗಳಂತಹ ಚಟಗಳಿಂದ ದೂರವಿರಿ
- ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಾಧ್ಯ
- ಮಾನಸಿಕ ಸಮಸ್ಯೆ ಎಂದಾಕ್ಷಣ ಭಯಪಡುವ ಅಗತ್ಯವಿಲ್ಲ.
-ಯಾವುದೇ ಮೂಢನಂಬಿಕೆಗಳಿಗೆ ಬಲಿಯಾಗದಿರಿ.
- ಯೋಗ, ಧ್ಯಾನ, ಪ್ರಾರ್ಥನೆಯಂತಹ ಚಟುವಟಿಕೆಗಳಿಗೆ ಪ್ರತೀದಿನ ನಿರ್ದಿಷ್ಟ ಸಮಯವನ್ನು ಮೀಸಲಿಡಿ.

ಭಾರತದಲ್ಲಿ ಹೆಚ್ಚುತ್ತಿದೆ ಮಾನಸಿಕ ಸಮಸ್ಯೆ
ವಿಶ್ವದ ನೆಮ್ಮದಿಯುತ 146 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನದಲ್ಲಿದ್ದು, ಇದು ಕಳವಳಕಾರಿ ಸಂಗತಿ ಯಾಗಿದೆ. ಕೋವಿಡ್‌ ಬಳಿಕ ಈ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದು ಗಮನಿಸಬೇಕಾದ ಸಂಗತಿ. ಸರ್ವೇ ಯೊಂದರ ಪ್ರಕಾರ ದೇಶದ ಜನಸಂಖ್ಯೆಯ ಶೇ. 10ರಿಂದ 15ರಷ್ಟು ಮಂದಿ ಮಾನಸಿಕ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಭಾರತದಲ್ಲಿ ಪ್ರಾಥಮಿಕ ಹಂತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಕೊರತೆಯಿದೆ. ಅಲ್ಲದೇ ಗ್ರಾಮೀಣ ಪ್ರದೇಶದ ಜನರಿಗೆ ಈ ಬಗ್ಗೆ ಸಾಕಷ್ಟು ತಿಳಿವಳಿಕೆಯಿಲ್ಲ. ಸರಕಾರ ಈ ಕುರಿತು ಆದಷ್ಟು ಬೇಗ ಎಚ್ಚೆತ್ತು ಕೊಳ್ಳಬೇಕಾಗಿರುವುದು ಅನಿವಾರ್ಯ. ತಳಮಟ್ಟ ದಿಂದಲೇ ಮಾನಸಿಕ ಆರೋಗ್ಯದ ಕಾಳಜಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.

Advertisement

– ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next