Advertisement

ಇಂದು ವಿಶ್ವ ಹಿಂದಿ ದಿನ: ವಿಶ್ವಪ್ರಿಯ ಹಿಂದಿ ಭಾಷೆಯ ಉಪೇಕ್ಷೆ ಸಲ್ಲದು

12:34 AM Jan 10, 2022 | Team Udayavani |

ಹಿಂದಿ ಒಂದು ಭಾಷೆ ಎನ್ನುವುದಕ್ಕಿಂತ ಭಾರತೀಯ ಸಾಂಸ್ಕೃತಿಕ ಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವ ಸುಂದರವಾದ ಸರಳ ಶ್ರಾವ್ಯಾತ್ಮಕ ಮಾಧ್ಯಮ. ಹಿಂದಿ ಭಾರತದ ಜನಭಾಷೆ, ರಾಜಭಾಷೆ, ಸಂಪರ್ಕ ಭಾಷೆ ಆಗಿರುವುದಲ್ಲದೆ ಜನತೆಯ ಭಾವನೆಗಳನ್ನು ಬೆಸೆಯುವ ಕೋಮಲ ಭಾಷೆಯಾಗಿದ್ದು ದೇಶದ ಏಕ ಸೂತ್ರ ಭಾಷೆಯಾಗಿದೆ. ಹಿಂದಿ ಭಾಷೆ ದೇವನಾಗರಿ ಲಿಪಿಯಲ್ಲಿದ್ದು ಇದು ವೈಜ್ಞಾನಿಕ ಲಿಪಿಯಾಗಿದೆ. ವಿಶ್ವದ ಭಾಷೆಗಳ ಸಾಂಕೇತಿಕತೆಯ ಕ್ಷಮತೆಯೂ ಈ ದೇವನಾಗರಿಯಲ್ಲಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ಪ್ರಚಲಿತದಲ್ಲಿರುವ ಆಡು ಭಾಷೆಯಾಗಿದೆ.

Advertisement

ಹಿಂದಿ ಭಾಷೆಯನ್ನು ವಿಶ್ವ ಭಾಷೆಯಾಗಿ ಬೆಳೆಸುವ ಉದ್ದೇಶದಿಂದ ಪ್ರತೀ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. 1975 ಜನವರಿ 10 ರಂದು ನಾಗಪುರದಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನವನ್ನು ಆಚರಿಸಲಾಯಿತು. 2006 ಜನವರಿ 10ರಂದು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ್‌ ಸಿಂಗ್‌ ಅವರು ಮೊದಲ ವಿಶ್ವ ಹಿಂದಿ ದಿನದ ಆಚರಣೆಗೆ ಚಾಲನೆ ನೀಡಿದರು. ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವಿಶ್ವ ಹಿಂದಿ ದಿವಸ್‌ ಆಚರಿಸಲಾಗುತ್ತಿದೆ.

ಹಿಂದಿ 1,100 ವರ್ಷಗಳ ಐತಿಹಾಸಿಕ ಸಾಹಿತ್ಯ ಭಂಡಾರವನ್ನು ಹೊಂದಿದೆ. ಭಾರತದಲ್ಲಿ ಅನೇಕ ಜಾತಿ, ಧರ್ಮಗಳಿರುವಂತೆ 33 ಮೇಲ್ದರ್ಜೆಯ ಭಾಷೆಗಳು, 3,000ಕ್ಕೂ ಹೆಚ್ಚು ಬೇರೆ ಬೇರೆ ಉಪಭಾಷೆಗಳಿವೆ. ದೇಶದ ಜನರಿಗೆ ಸಂಪರ್ಕ ಕಲ್ಪಿಸುವ, ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸುವ ಹಿಂದಿ ಭಾಷೆ ಈಗ ಅಂತಾರಾಷ್ಟ್ರೀಯ ಭಾಷೆಯಾಗಿ ಹೊರಹೊಮ್ಮಿದೆ. ಹಿಂದಿಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮೂಲ ಶಬ್ದಗಳಿವೆ. 1999ರ ಭಾಷಾ ಸಂಶೋಧಕರ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಚೀನಿ ಭಾಷೆ ಮಾತನಾಡುವವರ ಸಂಖ್ಯೆ 1,060 ಮಿಲಿಯನ್‌, ಹಿಂದಿ ಮಾತನಾಡುವವರ ಸಂಖ್ಯೆ 1,103 ಮಿಲಿಯನ್‌ ಆಗಿತ್ತು. ಅಂದರೆ ವಿಶ್ವದಲ್ಲಿ ಹಿಂದಿ ಸಂವಹನ ಭಾಷೆಯಾಗಿ ಮೊದಲ ಸ್ಥಾನದಲ್ಲಿ ಮತ್ತು ಚೀನಿ ಎರಡನೆ ಸ್ಥಾನದಲ್ಲಿತ್ತು. 2020ರ ಸಮೀಕ್ಷೆಯ ಪ್ರಕಾರ ವಿಶ್ವ ಜನಸಂಖ್ಯೆಯಲ್ಲಿ 1,268 ಮಿಲಿಯನ್‌ ಇಂಗ್ಲಿಷ್‌, 1,120 ಮಿಲಿಯನ್‌ ಚೀನಿ ಮಂಡಾರಿನ್‌ ಮತ್ತು 1,356 ಮಿಲಿಯನ್‌ ಮಂದಿ ಹಿಂದಿ ಬಲ್ಲವರಾಗಿದ್ದಾರೆ. ಅಂದರೆ ಹಿಂದಿ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇಡೀ ವಿಶ್ವದಲ್ಲಿ ಶೇ.19ರಷ್ಟು ಮಂದಿಯ ಆಡು ಭಾಷೆ ಹಿಂದಿಯಾಗಿದ್ದರೆ ಶೇ.14ರಷ್ಟು ಮಂದಿಯ ಆಡು ಭಾಷೆ ಇಂಗ್ಲಿಷ್‌ ಆಗಿದೆ. ಭಾರತದಲ್ಲಿ ಶೇ.80, ಕರ್ನಾಟಕದಲ್ಲಿ ಶೇ.60ರಷ್ಟು ಜನರು ಹಿಂದಿಯಲ್ಲಿ ವ್ಯವಹರಿಸುತ್ತಿದ್ದಾರೆ.

ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಹಿಂದಿಯಲ್ಲಿ ಶಿಕ್ಷಣ ಕಲಿಸಲಾಗುತ್ತಿದೆ. ಜರ್ಮನಿಯ ಸುಮಾರು 17ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ ಹಿಂದಿಯ ಸ್ವತಂತ್ರ ವಿಭಾಗಗಳಿವೆ. ಅಮೆರಿಕದ 10, ಪಶ್ಚಿಮ ಜರ್ಮನಿಯ 6 ವಿಶ್ವವಿದ್ಯಾನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಿಂದಿ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಮಾರಿಷಸ್‌, ದಕ್ಷಿಣ ಆಫ್ರಿಕಾ, ಜಪಾನ್‌, ಫ್ರಾನ್ಸ್‌, ರೂಸ್‌, ಅಮೆರಿಕ, ಬ್ರಿಟನ್‌, ಜರ್ಮನಿ, ನೇಪಾಲ, ಸುರಿನಾಮ್‌ ಇವೇ ಮೊದಲಾದ ದೇಶದ ಶಾಲೆಗಳಲ್ಲಿ ಹಿಂದಿ ಕಲಿಸಲಾಗುತ್ತಿದೆ. ಹಾಗೆಯೇ ಶ್ರೀಲಂಕಾ, ಹಾಲೆಂಡ್‌, ಪೋಲೆಂಡ್‌, ಫಿಲಿಫೈನ್ಸ್‌, ಚೀನ, ವೆಸ್ಟ್‌ ಇಂಡೀಸ್‌ ಇತ್ಯಾದಿ 150ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದಿ ಶಿಕ್ಷಣದ ವ್ಯವಸ್ಥೆ ಇದೆ. ಈ ದೇಶಗಳಲ್ಲಿ ಅವರ ಮಾತೃ ಭಾಷೆ ಮತ್ತು ಹಿಂದಿ ಭಾಷೆಗಳ ಸಮ್ಮಿಲನದಲ್ಲಿ ಸಂಪರ್ಕ ಭಾಷೆಯಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಸ್ವತಂತ್ರ ಸಂಘಟನೆಗಳ ಮೂಲಕ ಹಿಂದಿ ಸೇವಾ ಸಂಸ್ಥೆಗಳು ಹಿಂದಿ ಪ್ರಸಾರದ ಕಾರ್ಯ ನಿರ್ವಹಿಸುತ್ತಿವೆ. ಸುಮಾರು 132 ದೇಶಗಳಲ್ಲಿ ಸಂವಹನ ಭಾಷೆಯಾಗಿದ್ದರೆ ವಿಶ್ವದ ಸುಮಾರು 150ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ ಹಿಂದಿ ಶಿಕ್ಷಣದ ವ್ಯವಸ್ಥೆ ಇದೆ. ಅನೇಕ ದೇಶಗಳಲ್ಲಿ ಹಿಂದಿ ವೃತ್ತ ಪತ್ರಿಕೆಗಳು ಗಮನೀಯವಾದ ಕೆಲಸ ಮಾಡುತ್ತಿವೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಆಂಗ್ಲ ಭಾಷೆ ಮುಂಚೂಣಿಯಲ್ಲಿದ್ದರೂ ಹಿಂದಿ ಮಾತನಾಡುವವರು ಆಂಗ್ಲ ಭಾಷೆಗಿಂತ ಹೆಚ್ಚಿ¨ªಾರೆ ಎಂಬುದು ನಮ್ಮ ದೇಶದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಮಾರಿಷಸ್‌ನ ವಾಸುದೇವ ವಿಷ್ಣುದಯಾಲ್ ಆಧುನಿಕ ಅಭಿಮನ್ಯು ಅನತ್‌, ಕವಯಿತ್ರಿ ಭಾಗವತಿ ದೇವಿ, ದಕ್ಷಿಣ ಅಫ್ರಿಕಾದ ತುಳಸೀರಾಮ್‌ ಪಾಂಡೆಯ, ಫಿಜಿ ದೇಶದ ಸೂರ್ಯಪಾಲ, ಜ್ಞಾನಿದಾಸ್‌ ಪಂಡಿತ್‌, ಅಮೆರಿಕದ ನ್ಯೂಯಾರ್ಕ್‌ನ ಹೃದಯರೋಗ ತಜ್ಞರಾಗಿರುವ ವಿಜಯ ಕುಮಾರ್‌ ಮೆಹ್ತಾ, ನ್ಯೂಯಾರ್ಕ್‌ನ ವಿಶ್ವವಿದ್ಯಾನಿಲಯ ದಲ್ಲಿ ಪ್ರಾಧ್ಯಾಪಕರಾಗಿರುವ ಸುಷ್ಮಾವೇದಿ, ಬ್ರಿಟನ್‌ನ ಪದ್ಮೇಶ ಗುಪ್ತಾ, ನೆದರ್‌ಲ್ಯಾಂಡ್‌ನ‌ ಪುಷ್ಪಿತಾ ಅವಸ್ಥಿ, ಫ್ರಾನ್ಸ್‌ನ ನಿಕೋಲ್‌ ಬಲಬೀರ್‌, ಪ್ಯಾರೀಸ್‌ನ ಘನ ಶ್ಯಾಮ ಶರ್ಮ, ಜರ್ಮನಿಯ ರಾಮಪ್ರಸಾದ ಭಟ್‌ ಮುಂತಾದ ಅನೇಕ ಸಾಹಿತಿಗಳು ಹಿಂದಿ ಕಾವ್ಯ, ಕವಿತೆ, ಕಥೆ, ಪ್ರಬಂಧ, ವ್ಯಾಕರಣ, ಶಬ್ದಕೋಶ, ಕಾದಂಬರಿಗಳನ್ನು ಹಿಂದಿ ಯಲ್ಲಿ ರಚಿಸಿ ವಿಶ್ವವ್ಯಾಪಿ ಹಿಂದಿ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರದ ಸೇವೆ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಸುರಿನಾಮದಲ್ಲಿ ಶೇ.46ರಷ್ಟು ಭಾರತೀಯ ಮೂಲದ ಪ್ರಜೆಗಳು ಬೋಜಪುರಿ ಹಿಂದಿಯಲ್ಲಿ ಮಾತನಾಡುವುದಲ್ಲದೆ ಶಾಲೆ-ಕಾಲೇಜುಗಳಲ್ಲಿ ಹಿಂದಿ ಕಲಿಸುತ್ತಿ¨ªಾರೆ. ಗಯಾನದಲ್ಲಿ ಶೇ.28ರಷ್ಟು ಜನ ಹಿಂದಿ ಮಾತನಾಡುವುದಲ್ಲದೆ ಸಾಹಿತ್ಯ ಕೃಷಿಯೂ ನಡೆಯುತ್ತಿದೆ. ಉದ್ಯೋಗ ನಿಮಿತ್ತ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಧಾರ್ಮಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ತಮ್ಮ ಭಾಷೆಯನ್ನು ಬಳಸುತ್ತಾರೆ. ಅನೇಕ ರಾಷ್ಟ್ರಗಳಲ್ಲಿ ರೇಡಿಯೋ, ದೂರದರ್ಶನ, ಹಿಂದಿ ಪತ್ರಿಕೆಗಳಲ್ಲಿ, ಹಿಂದಿ ಭಾಷೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

Advertisement

ಇಂದು ಇಂಗ್ಲಿಷಿಗೆ ಸಮನಾಗಿ ಹಿಂದಿಯಲ್ಲಿ ಮೈಕ್ರೋಸಾಫ್ಟ್ ತಯಾರಾಗಿದ್ದು, ಇಂಟರ್ನೆಟ್‌ನಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ಹಿಂದಿ ಶಬ್ದಗಳಿವೆ. ಕಂಪ್ಯೂಟರ್‌ ಮತ್ತು ಜಾಲತಾಣಗಳಲ್ಲಿ ಕಾರ್ಯ ನಿರ್ವಹಿಸುವ ಜನ ಸಾಮಾನ್ಯರಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡುವಲ್ಲಿ ಹಿಂದಿ ಪ್ರಥಮ ಸ್ಥಾನದಲ್ಲಿದೆ. 2016ರಲ್ಲಿ ವಿಶ್ವ ಆರ್ಥಿಕ ಸಮಿತಿಯು ಘೋಷಣೆ ಮಾಡಿರುವ 10 ವಿಶ್ವ ಮಟ್ಟದ ಭಾಷೆಗಳಲ್ಲಿ ಹಿಂದಿಯೂ ಒಂದು. ವಿಶ್ವದೆÇÉೆಡೆ ಪಸರಿಸಿರುವ ಹಿಂದಿ ಭಾಷೆಯನ್ನು ಸಂಯುಕ್ತ ರಾಷ್ಟ್ರ ಒಕ್ಕೂಟದ ಆರು ಭಾಷೆಗಳ ಜತೆಗೆ ವಿಶ್ವ ಮಾನ್ಯತೆ ನೀಡುವ ಪ್ರಯತ್ನವೂ ನಡೆಯುತ್ತಿದೆ.

ಆದರೆ ನಮ್ಮ ದೇಶದಲ್ಲಿ ಹಿಂದಿ ಉಪೇಕ್ಷಿತ ಭಾಷೆಯಾಗಿ ಅವಮಾನಕ್ಕೊಳಗಾಗುತ್ತಿರುವುದು ದುಃಖದ ಸಂಗತಿಯಾಗಿದೆ. ಇಂದು ಪರಭಾಷೆಗೆ ಮೊದಲ ಆದ್ಯತೆಯಾದರೆ ಅದರ ದಾಸೀಯತೆಯ ವೇದನೆಯನ್ನು ದೇಶದ ಸೂತ್ರ ಭಾಷೆ ಅನುಭವಿಸುತ್ತಿದೆ. ಯಾವ ಭೂಮಿಯಲ್ಲಿ ವಿದ್ಯಾಮಾತೆ ಸರಸ್ವತಿಯನ್ನು ಆರಾಧಿಸಿ, ಮಗುವಿನ ಬಾಯಿಯಲ್ಲಿ ಓಂಕಾರವನ್ನು ಬರೆದು ವಿದ್ಯಾರಂಭ ಮಾಡಿಸುವ ಮಹೋನ್ನತ ಆಚರಣೆಯಿದೆಯೋ ಅದೇ ಭೂಮಿಯಲ್ಲಿ ಭಾಷಾ ದ್ವೇಷ ಬೆಳೆಯುತ್ತಿರುವುದು ವಿಷಾದನೀಯ. ಇಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರೀಯತೆ, ಸಮಾನತೆ, ಸೌಹಾರ್ದತೆ ಇಂಥ ಶಬ್ದಗಳು ಕೇವಲ ವೇದಿಕೆಯ ಭಾಷಣದ ಆಕರ್ಷಕ ಶಬ್ದಗಳಷ್ಟೆ. ಇಂತಹ ನಡವಳಿಕೆಗಳಿಂದ ಭಾರತೀಯ ಆತ್ಮ ಮತ್ತು ಭಾರತೀಯತೆಯ ಅಸ್ಮಿತೆಗೆ ಧಕ್ಕೆಯುಂಟಾಗುತ್ತಿದೆ ಎಂಬ ಸತ್ಯದ ಅರಿವಿನೊಂದಿಗೆ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ಜಾಗೃತವಾಗಬೇಕಾಗಿದೆ.

ಒಂದು ಭಾಷೆಯ ಉಳಿವು ಅದರೊಂದಿಗಿನ ಭಾಷಾ ಜ್ಞಾನ, ಸಂವಹನ ಮತ್ತು ಸಾಹಿತ್ಯ ವಿಕಾಸದಲ್ಲಡಗಿದೆ. ಆಂಗ್ಲ ಭಾಷೆಯನ್ನು ವ್ಯವಹಾರಿಕ ಭಾಷೆಯಾಗಿ ಬಳಸಬೇಕಾದುದು ಅನಿವಾರ್ಯ ಸತ್ಯ. ಆದರೂ ಸ್ವಾತಂತ್ರ್ಯ ದೊರಕಿದ 75 ವರ್ಷಗಳ ಅಭಿವೃದ್ಧಿ ಪಥದಲ್ಲಿ ದೇಶವು ಸಾಗುತ್ತಿರುವ ಸಮಯದಲ್ಲಿ ವಿಶ್ವವ್ಯಾಪಿಯಾಗಿ ಪಸರಿಸುತ್ತಿರುವ ನಮ್ಮದೇ ದೇಶ ಭಾಷೆ ಹಿಂದಿಯನ್ನು ಕಲಿಸಿ, ಬೆಳೆಸಿ, ಉಳಿಸುವುದು ಭಾರತೀಯರೆಲ್ಲರ ಕರ್ತವ್ಯವಾಗಿದೆ.

-ಪ್ರಫ‌ುಲ್ಲಾ ಬಿ., ಕುಂದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next