Advertisement
ಮಗನಿಗೆ ಅಪ್ಪ ತರುವ ವಸ್ತುಗಳು ಬೇಕೇ ವಿನಃ ಅಪ್ಪ ಮಾತ್ರ ಬೇಡ. ಆಟಿಕೆ, ಬಟ್ಟೆ, ಬುಕ್, ಮೊಬೈಲ್ ಎಲ್ಲದಕ್ಕೂ ಅಮ್ಮನ ಹಿಂದೆ ಸುತ್ತೋ ಮಕ್ಕಳಿಗೆ ಅಪ್ಪ ನಮಗಾಗಿ ಏನು ಮಾಡುತ್ತಾರೆ ಅನ್ನುವುದು ತಿಳಿದೇ ಇಲ್ಲ. ಅಪ್ಪನೂ ಅಷ್ಟೇ, ತಾನು ಮಾಡಿದ್ದನ್ನು ಎಂದಿಗೂ ಮನೆಯಲ್ಲಿ ಎಲ್ಲರೆದುರಿಗಾಗಲಿ ಅಥವಾ ಮಕ್ಕಳ ಮುಂದೆ ಆಗಲಿ ಹೇಳುವುದೂ ಇಲ್ಲ. ಜತೆಗೆ ಗಂಭೀರ ಮುಖ ಮುದ್ರೆ, ಸಿಡುಕು ಸ್ವಭಾವ. ಮಕ್ಕಳು ಬೆಳೆದಂತೆಲ್ಲ ಹೆಗಲೇರುವ ಜವಾಬ್ದಾರಿಗಳು ಅಪ್ಪನನ್ನು ತನ್ನವರಿಂದ ಇನ್ನಷ್ಟು ದೂರ ಕೊಂಡೊಯ್ಯುತ್ತವೆ.
ಕಳೆದು ಹೋಗುತ್ತಿರುವ ಅಪ್ಪ…! ಇಂದು ಅಪ್ಪ, ಮಕ್ಕಳ ಬೇಕು-ಬೇಡಗಳೆಲ್ಲವನ್ನು ಈಡೇರಿಸುವುದಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿದ್ದಾರೆ. ಅದರಲ್ಲೂ ನಗರದಲ್ಲಿ ಇರುವ ಅಪ್ಪಂದಿರಂತೂ ಒಂದು ಹೆಜ್ಜೆ ಮುಂದೆ ಸಾಗಿ ಮಕ್ಕಳ ಪಾಲಿನ ಎಟಿಎಂ ಆಗಿ ಬಿಟ್ಟಿದ್ದಾರೆ. ಬೇಕಾದುದನ್ನು ಕೊಳ್ಳಲು, ಕೇಳಿದಷ್ಟು ಪಾಕೆಟ್ ಮನಿ ಕೊಡುವ ಅಪ್ಪನಿಗೆ ಮಕ್ಕಳು ಏನು ಮಾಡುತ್ತಾರೆ, ಓದುತ್ತಾರೆಯೇ ಅಥವಾ ಕೆಟ್ಟವರ ಸಂಘ ಮಾಡಿ ಹಾಳಾಗುತ್ತಿದ್ದಾರೆಯೇ ಅಂತ ತಿಳಿದುಕೊಳ್ಳಲೂ ಪುರು ಸೊತ್ತಿಲ್ಲ. ಗಾಣದ ಎತ್ತಿನಂತೆ ದುಡಿಯುವುದು, ಕೈಗೆ ಸಿಕ್ಕ ಸಂಬಳವನ್ನು ತನ್ನ ಕುಟುಂಬಕ್ಕೆ ಖರ್ಚು ಮಾಡುವುದಷ್ಟೇ ಅಪ್ಪನ ಜೀವನ ಆಗಿದೆ. ಮಕ್ಕಳ ಬಾಲ್ಯ, ಆಟ, ಪಾಠ, ಪ್ರವಾಸದಲ್ಲಿ ಕಾಲ ಕಳೆಯಬೇಕಿದ್ದ ಅಪ್ಪ ಇಂದು ಎಲ್ಲೋ ಕಳೆದು ಹೋಗುತ್ತಿದ್ದಾರೆ.
Related Articles
Advertisement
ಅಪ್ಪಂದಿರಿಗೆ ಕೃತಜ್ಞತೆ, ಗೌರವಪಾಶ್ಚಾತ್ಯ ದೇಶಗಳಲ್ಲಿ ತಂದೆಯಂದಿರ ದಿನವನ್ನು ಮೊದಲು ಆಚರಣೆಗೆ ತಂದವರು ಅಮೆರಿಕದವರು. ವಾಷಿಂಗ್ಟನ್‌ನ ಎಪಿಸ್ಕೋಪಲ್ ಚರ್ಚ್‌ನಲ್ಲಿ ತಾಯಂದಿರ ದಿನಾಚರಣೆ ಅತ್ಯಂತ ಸಡಗರದಿಂದ ನಡೆಯು ತ್ತಿದ್ದುದನ್ನು ಕಂಡ ಸುನೋರಾ ಸ್ನಾರ್ಟ್ ಡಾಡ್ ಎಂಬಾಕೆ ತಂದೆಯನ್ನು ಸ್ಮರಿಸುವ ದಿನವೊಂದನ್ನು ಆಚರಿಸ ಬೇಕೆಂದುಕೊಂಡರು. ಅದರಂತೆ 1910ರಲ್ಲಿ ತನ್ನ ತಂದೆಗೆ ಕೃತಜ್ಞತೆ ಸಲ್ಲಿಸಿದರು. ಸುನೋರಾಳ ಈ ಅರ್ಥಪೂರ್ಣ ಚಿಂತನೆ ಪಾಶ್ವಾತ್ಯ ದೇಶಗಳಲ್ಲಿ ವಿಶ್ವ ಅಪ್ಪಂದಿರ ದಿನದ ಆಚರಣೆಗೆ ಪ್ರೇರಣೆಯಾಯಿತು. ಇಂದಿಗೂ ಸುಮಾರು 50ಕ್ಕೂ ಅಧಿಕ ದೇಶಗಳು ಜೂನ್ ಮೂರನೇ ರವಿವಾರವನ್ನು ವಿಶ್ವ ತಂದೆಯಂದಿರ ದಿನವೆಂದು ಆಚರಿಸಿದರೆ ಉಳಿದ ಕೆಲವು ದೇಶಗಳು ವರ್ಷದ ಬೇರೆ ಬೇರೆ ದಿನಗಳಲ್ಲಿ ಅಪ್ಪಂದಿರ ದಿನವನ್ನು ಆಚರಿಸುತ್ತವೆ. ಈ ದಿನಕ್ಕೆ ಸೀಮಿತವಾಗದಿರಲಿ…
“ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ…” ಈ ಹಾಡು ನೀವು ಕೇಳಿರಬಹುದು. ವಯಸ್ಸಾದ ಅಪ್ಪನನ್ನು ಕಂಡು ಮಗ ಅರ್ಥೈಸಿದ ಬಗೆಯನ್ನು ಈ ಹಾಡಿನಲ್ಲಿ ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸಲಾಗಿದೆ. “ನಿನ್ನಂಥ ಅಪ್ಪ ಇಲ್ಲ… ಒಂದೊಂದು ಮಾತು ಬೆಲ್ಲ…” ಈ ಹಾಡು ಅಪ್ಪನೇ ಸರ್ವಸ್ವ ಅನ್ನುವ ಮಗಳ ದೃಷ್ಟಿಯಲ್ಲಿ ಬಿತ್ತರಗೊಂಡಿದೆ. “ಡ್ಯಾಡಿ ಮೈ ಲವ್ಲೀ ಡ್ಯಾಡಿ…’, “ಅಪ್ಪ ಐ ಲವ್ ಯೂ ಅಪ್ಪ…”, “ನಾನು ನೋಡಿದ ಮೊದಲ ವೀರ… ಬಾಳು ಕಳುಹಿಸಿದ ಸಾಹುಕಾರ…” ಹೀಗೆ ಕನ್ನಡದ ಹತ್ತಾರು ಸಿನೆಮಾಗಳಲ್ಲಿ ಅಪ್ಪನ ಮಹತ್ವವನ್ನು ಸಾರುವ ಹಾಡುಗಳು ಪ್ರಸಿದ್ಧಿ ಪಡೆದಿವೆ. ಅಪ್ಪಂದಿರ ದಿನಕ್ಕೆ ಆ ಹಾಡುಗಳೆಲ್ಲ ಒಮ್ಮೆ ನಮ್ಮ ಮನಸ್ಸಿನಲ್ಲಿ ಗುನುಗುನಿಸಲ್ಪಡುತ್ತವೆ. ಆದರೆ ಈ ಸಿನೆಮಾ ಹಾಡುಗಳು ನಿಜ ಜೀವನಕ್ಕೆ ಅಷ್ಟೊಂದು ತಾಳೆಯಾಗುವುದಿಲ್ಲ. ತಾಯಿಯ ಬಗ್ಗೆ ವ್ಯಕ್ತವಾಗುವ ಭಾವನೆಗಳು ತಂದೆಯೊಂದಿಗೆ ಅಷ್ಟಾಗಿ ಹೋಲುವುದೇ ಇಲ್ಲ. ತಾಯಿ ತನ್ನ ಗರ್ಭದಿಂದಲೇ ನಂಟು ಇಟ್ಟುಕೊಂಡು, ಲಾಲಿಸಿ, ಪಾಲಿಸಿ, ಎದೆ ಹಾಲು ಉಣಿಸಿ ಮಕ್ಕಳನ್ನು ಸಲಹುತ್ತಾಳೆ. ಆದರೆ ತಂದೆಗೆ ಈ ವಿಶೇಷ ಅನುಭೂತಿಯ ಸುಖ ಸಹ ಸಿಗಲಾರದು. ಈ ಒಂದು ದಿನದ ಸ್ಟೇಟಸ್ ಪ್ರೀತಿಯ ತೋರ್ಪಡಿಕೆಗಿಂತಲೂ ಅಪ್ಪನೊಂದಿಗೆ ಮನಃಪೂರ್ವಕವಾದ ಸಂವಹನ ಲೇಸು. ಆದ್ದರಿಂದ ಅಪ್ಪಂದಿರ ದಿನದಂದು ಮಕ್ಕಳು ತಂದೆಯ ಬಗೆಗೆ ತೋರುವ ಪ್ರೀತಿ, ಗೌರವ, ಮಮತೆ ಈ ಒಂದು ದಿನಕ್ಕೆ ಸೀಮಿತವಾಗದೇ, ನಿತ್ಯ ನಿರಂತರವಾಗಿರಲಿ. ಭಾವನೆಯ ಸ್ನೇಹ ಜೀವಿ
ಏನಪ್ಪ ಹಿಟ್ಲರ್ ತರ ಆಡ್ತಿಯಾ ಅನ್ನೋ ಮಕ್ಕಳಿಗೆ ಆ ಹಿಟ್ಲರ್‌ನೊಳಗೊಬ್ಬ ಭಾವಜೀವಿ ಇದ್ಧಾನೆ ಎಂಬ ಸತ್ಯ ಬಹುತೇಕರಿಗೆ ಗೊತ್ತಿರಲಾರದು. ಮಕ್ಕಳು ಬಾಯ್ತುಂಬ ಅಪ್ಪ ಅಂದಾಗ ಖುಷಿಯಾಗಿ ಬಿಗಿದಪ್ಪುತ್ತಿದ್ದ ಅಪ್ಪ, ಮಕ್ಕಳು ಬೆಳೆಯುತ್ತಾ ಸ್ವಲ್ಪ ದೂರಾನೆ ಉಳಿಯಬೇಕು. ಸಾವಿರ ಹೊಲಿಗೆ ಕಾಣುವ ಬಟ್ಟೆ ತೊಟ್ಟ ಅಪ್ಪನನ್ನು ಬಾಯ್ತುಂಬ ಕರೆಯಲು ಮಕ್ಕಳಿಗೆ ಮುಜುಗರ. ಆದರೆ ಅದೇ ಮಕ್ಕಳ ಮೂಗಿನಲ್ಲಿನ ಗೊಣ್ಣೆ ಒರೆಸಿದ್ದು ಅದೇ ಬಟ್ಟೆಯಲ್ಲಿ ಎಂಬುದನ್ನು ಮಕ್ಕಳು ಈಗ ಮರೆತಿದ್ದಾರೆ. ಅಪ್ಪ ಯಾವಾಗಲೂ ಮನೆಯ ಜೋರಿನ, ಬೋರಿನ ವ್ಯಕ್ತಿ. ಆತ ಎಂದಿಗೂ ಭಾವನೆ ತೋರಿಸಲ್ಲ. ಮಕ್ಕಳ ಮುಂದೆ ರೇಗಾಡಿ ಕೆಟ್ಟ ವ್ಯಕ್ತಿ ಎನಿಸಿದರೂ ಬೆನ್ನ ಹಿಂದೆ ಸದಾ ಒಳಿತು ಬಯಸುವ ನಿಸ್ವಾರ್ಥಿ. ತನ್ನ ಮನೆಯಿಂದ, ಮತ್ತೂಂದು ಮನೆ ಬೆಳಗಲು ಹೊರಡುವ ಮಗಳನ್ನು ಕಳುಹಿಸುವಾಗ ಬರುವ ಕಣ್ಣೀರನ್ನು ಅಪ್ಪ ತೋರಿಸುವಂತಿಲ್ಲ. “ಅಳುವ ಗಂಡಸರನ್ನು ನಂಬಬೇಡಿ” ಎಂಬುದೇ ಲೋಕರೂಢಿ ಅಲ್ಲವೆ? ತಾಯಿಯ ಕಣ್ಣೀರಿಗೆ ಅರ್ಥವಿದೆ, ಆದರೆ ತಂದೆಯ ಅಳುವಿಗೆ ಬೆಲೆ ಇಲ್ಲ ಅನ್ನುವುದು ಮಾತ್ರ ವಿಪರ್ಯಾಸ. ಸಮಾಜಪ್ರೇರಿತ ಪೂರ್ವಾಗ್ರಹಗಳನ್ನು ತೊರೆಯಲು ಸಾಧ್ಯವಿಲ್ಲವೇ? ಗಂಡಸು ಅಳಬಾರದು ಅಥವಾ ತನ್ನ ಭಾವನೆಯನ್ನು ಹತ್ತಿಕ್ಕಬೇಕೆಂಬ ಮನಃಸ್ಥಿತಿ ಬದಲಾಗಿ ತಂದೆಯಾದವರು ಮಕ್ಕಳೊಂದಿಗೆ ಆಪ್ತವಾಗಿ ಬೆರೆಯು ವುದಕ್ಕೇನು? ತಂದೆ ಬೆರೆಯಲಿ. ಮಕ್ಕಳಿಗಾಗಿ ಹೆಣ್ಣಿಗನೆಂ ದೆನಿಸಿದರೂ ಪರವಾಗಿಲ್ಲ. ಅಪ್ಪನ ಗದರುವ ಮೀಸೆಯ ಹಿಂದಿರುವ ಪ್ರೀತಿಯನ್ನು ಹುಡುಕುವ ಪ್ರಯತ್ನವನ್ನು ಮಕ್ಕಳಾದವರು ಮಾಡಬೇಕು. ಅಪ್ಪನೂ ಅಮ್ಮನಂತೆ ಭಾವಜೀವಿ ಅನ್ನುವುದು ಈ ಜಗಕ್ಕೆ ಗೊತ್ತಾಗಲಿ. ಆ ಮೂಲಕವಾದರೂ ಅಪ್ಪನ ಹೃದಯವಂತಿಕೆ, ನಿಸ್ವಾರ್ಥ ಮನೋಭಾವ ಅನಾವರಣಗೊಳ್ಳಲಿ. ರಾಧಿಕಾ ಕುಂದಾಪುರ