ತುಮಕೂರು: ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಒಂದು ತಿಂಗಳ ಪುಣ್ಯ ಸ್ಮರಣೆ ಮಾಡಲು ಸಿದ್ಧತೆಗಳು ನಡೆದಿವೆ.
ಫೆ.21ಕ್ಕೆ ಶ್ರೀಗಳು ಲಿಂಗೈಕ್ಯರಾಗಿ ಒಂದು ತಿಂಗಳು ತುಂಬುತ್ತಿದೆ. ಇದರ ನಿಮಿತ್ತ ಶ್ರೀಗಳ ಗದ್ದುಗೆಯಲ್ಲಿ ವಿವಿಧ ಪೂಜೆ ಆಯೋಜನೆ ಮಾಡಲಾಗಿದೆ. ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ ಶ್ರೀಗಳ ಗದ್ದುಗೆಗೆ ಅಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿ ದಂತೆ ವಿವಿಧ ಧಾರ್ಮಿಕ ಕಾರ್ಯ ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಒಂದು ತಿಂಗಳ ಕಾರ್ಯಕ್ಕಾಗಿ ಶ್ರೀಗಳ ಗದ್ದುಗೆಯ ಮುಂದೆ ಹಸಿರು ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲು ತಯಾರಿ ನಡೆದಿದೆ. ಮಠದ ಭಕ್ತರಿಗೆ ದಾಸೋಹದ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ. ಒಂದು ತಿಂಗಳ ಪೂಜೆಗೆ ನಾಡಿನ ವಿವಿಧ ಮಠಾಧೀಶರು ಬರುವ ಸಾಧ್ಯತೆ ಇದೆ¨
26ರಿಂದ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರೆ ತುಮಕೂರು: ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಫೆ.26 ರಿಂದ ಮಾ.7 ರವರೆಗೆ ಜರುಗಲಿದ್ದು, ಜಾತ್ರೆ ಪ್ರಯುಕ್ತ ಮಾ.5ರಂದು ರಥೋತ್ಸವ ಏರ್ಪಡಿ ಸಲಾಗುವುದು ಎಂದು ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಫೆ.26ರ ರಾತ್ರಿ ಗೋಸಲ ಸಿದ್ಧೇಶ್ವರಸ್ವಾಮಿ ಉತ್ಸವ, ಶೂನ್ಯ ಸಿಂಹಾಸನರೋಹಣೋತ್ಸವ, ವೃಷಭ ವಾಹನ ಉತ್ಸವಗಳು ನಡೆಯಲಿದ್ದು, ಫೆ.27ರಂದು ನಂದಿ ವಾಹನ ಹಾಗೂ ಗಜ ವಾಹನ, ಫೆ.28ರಂದು ಹುಲಿವಾಹನ ಹಾಗೂ ಸಿಂಹ ವಾಹನ, ಮಾ.1ರಂದು ಹುತ್ತದ ವಾಹನ ಹಾಗೂ ಶೇಷವಾಹನ, ಮಾ.2 ರಂದು ಅಶ್ವವಾಹನ ಹಾಗೂ ನವಿಲುವಾಹನ, ಮಾ.3ರಂದು ರಾವಣವಾಹನ, ಬಿಲ್ವವೃಕ್ಷ ವಾಹನ ಹಾಗೂ ನವರಂಗ ಪಲ್ಲಕ್ಕಿ
ಉತ್ಸವ, ಮಾ.4ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳ್ಳಿ ರಥೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿವೆ. ಅಲ್ಲದೇ ಮಾ.5ರಂದು ರಥೋತ್ಸವ ಹಾಗೂ ರುದ್ರಾಕ್ಷಿ ಮಂಟಪೋತ್ಸವ, ಮಾ.6ರಂದು ಬೆಳ್ಳಿಪಲ್ಲಕ್ಕಿ ಉತ್ಸವ, ಮಾ.7ರಂದು ತೆಪ್ಪೋತ್ಸವ, ಪಂಚಬ್ರಹ್ಮೋತ್ಸವ ಪೂಜೆ ನಡೆಯಲಿವೆ ಎಂದು ತಿಳಿಸಿದ್ದಾರೆ.