Advertisement
ಮೂರು ದಿನಗಳೂ ಪ್ರಾತಃಕಾಲದಿಂದ ಸಂಕಲ್ಪ, ಹೋಮ, ಅಗಸೆಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಸಂಗಮದ ಎರಡೂ ದ್ವೀಪಗಳಲ್ಲಿ ಯಾಗ ಮಂಟಪ, ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದೆ.
Related Articles
Advertisement
ಸಂಜೆ 5 ಗಂಟೆಗೆ 11ನೇ ಕುಂಭಮೇಳಕ್ಕೆ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಧಾರ್ಮಿಕ ಶ್ರದ್ಧೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಸಂಸ್ಕೃತಿ ಚಿಂತಕಿ ಡಾ.ಟಿ.ಸಿ.ಪೂರ್ಣಿಮಾ ಉಪನ್ಯಾಸ ಮಾಡಲಿದ್ದಾರೆ.
18ರಂದು ಪ್ರಾತಃಕಾಲ 9 ಗಂಟೆಗೆ ಚತುರ್ದಶಿ, ನದಿಪಾತ್ರದಲ್ಲಿ ಪುಣ್ಯಾಹ ನವಗ್ರಹ ಹೋಮ, ಸುದರ್ಶನ ಹೋಮ, ರುದ್ರಹೋಮ,ಪೂರ್ಣಾಹುತಿ, ಇತ್ಯಾದಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯನ್ನು ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಮಾಘ ಸ್ನಾನದ ಮಹತ್ವ ಕುರಿತು ಶ್ರೀ ಲಗಧಮಹರ್ಷಿ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಜಿ.ಬಿ.ಅಮರೇಶ ಶಾಸಿŒ ಉಪನ್ಯಾಸ ನೀಡಲಿದ್ದಾರೆ.
ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ತಿ.ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಾತ್ಮರು-ಸಂತರ ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ಮತ್ತು ಉತ್ಸವ, ಸಂಜೆ 6.30ಕ್ಕೆ ಯಾಗಶಾಲಾ ಪ್ರವೇಶ ಶ್ರೀ ರುದ್ರಹೋಮ ಮತ್ತು ಪೂರ್ಣಾಹುತಿ ನಡೆಯಲಿದ್ದು, ರಾತ್ರಿ 7ಗಂಟೆಗೆ ವಾರಾಣಸಿ ಮಾದರಿಯಂತೆ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ನೆರವೇರಿಸಲಾಗುತ್ತದೆ.
19ರಂದು ಬೆಳಗ್ಗೆ ನದಿಪಾತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಮಾಡುವುದರೊಂದಿಗೆ ಮಹೋದಯ ಪುಣ್ಯಸ್ನಾನ ಆರಂಭವಾಗಲಿದೆ. ಪ್ರಾತಃ 9.35 ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30 ರಿಂದ 12ಗಂಟೆ ನಡುವಿನ ವೃಷಭ ಲಗ್ನ ಹಾಗೂ ಅಭಿಜಿತ್ ಮುಹೂರ್ತ, ವಿಧಿ ಮುಹೂರ್ತ, ವೇದ ಮುಹೂರ್ತಗಳು ಮಹೋದಯ ಪುಣ್ಯಸ್ನಾನಕ್ಕೆ ಶುಭ ಮುಹೂರ್ತಗಳು ಎಂದು ಹೇಳಲಾಗಿದೆ.
ಮಧ್ಯಾಹ್ನ 12ಗಂಟೆಗೆ ನಡೆಯುವ ಧರ್ಮಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಪರಮೇಶ್ವರ ನಾಯಕ್, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ.
ವಿಶೇಷ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಶಾಸಕ ಎಚ್.ವಿಶ್ವನಾಥ್, ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಧರ್ಮಸಭೆಯಲ್ಲಿ ನದಿ ಸ್ನಾನದ ಮಹತ್ವ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಶೆಲ್ವಪಿಳ್ಳೆ„ ಅಯ್ಯಂಗಾರ್ ಉಪನ್ಯಾಸ ನೀಡಲಿದ್ದಾರೆ.
ಮುಖ್ಯಮಂತ್ರಿ, ಮಹಾತ್ಮರಿಂದ ಪುಣ್ಯಸ್ನಾನ: ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಶ್ರೀಅಗಸೆöàಶ್ವರ ಸ್ವಾಮಿ ದೇವಸ್ಥಾನದ ನಡುವೆ ತೇಲುವ ಸೇತುವೆಯನ್ನು ಯೋಧರು ನಿರ್ಮಿಸಿಕೊಟ್ಟಿದ್ದಾರೆ. ಕುಂಭಮೇಳದಲ್ಲಿ ಮಹಾತ್ಮರು, ಸಂತರು, ಯೋಗಿಗಳ ಕುಂಭಸ್ನಾನಕ್ಕಾಗಿ ಯಾಗಶಾಲೆಗೆ ಹೊಂದಿಕೊಂಡಂತೆ ಕಾವೇರಿ, ಕಪಿಲ ಸೇರುವಲ್ಲಿ ಸ್ಫಟಿಕ ಸರೋವರವನ್ನು ಗುರುತಿಸಿ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಂಭಮೇಳದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಂಭಸ್ನಾನ ಮಾಡುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಪುಣ್ಯಸ್ನಾನಕ್ಕಾಗಿ ಪ್ರತ್ಯೇಕ ಸ್ನಾನಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಅವರಿಗಾಗಿಯೇ 20-40 ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕ ಸ್ನಾನದ ಸ್ಥಳ ನಿಗದಿಪಡಿಸಿದ್ದು, ಸುರಕ್ಷತೆಗಾಗಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕುಂಬ ಮೇಳಕ್ಕೆ ತಿ.ನರಸೀಪುರ ಝಗಮಗ: 11ನೇ ಕುಂಭಮೇಳಕ್ಕೆ ಸಜ್ಜಾಗಿರುವ ತಿ.ನರಸೀಪುರ ಪಟ್ಟಣದಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳನ್ನು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಇಡೀ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಮುಖ ಸರ್ಕಾರಿ ಕಚೇರಿಗಳು, ಕಟ್ಟಡಗಳ ಮೇಲೂ ವಿದ್ಯುತ್ ದೀಪಗಳು ಮಿನುಗಲಿವೆ.
ಏಕಮುಖ ಸಂಚಾರ ವ್ಯವಸ್ಥೆ: ಸುಗಮ ಸಂಚಾರಕ್ಕಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಸ್ವತ್ಛತೆ, ಭದ್ರತೆ ದೃಷ್ಟಿಯಿಂದ ಶನಿವಾರವೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಗಣ್ಯರಿಗೆ ಪ್ರತ್ಯೇಕ ವಾಹನ ನಿಲುಗಡೆ ಸೇರಿದಂತೆ 5 ಕಡೆ ತಾತ್ಕಾಲಿಕ ವಾಹನ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಪುಣ್ಯಸ್ನಾನಕ್ಕೆ ಇಳಿಯುವ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ 60 ಜನ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಮಂಗಳೂರಿನ ಅಗ್ನಿಶಾಮಕ ದಳದ ಎರಡು ಬೋಟಿಂಗ್ ಮತ್ತು ಸೇನೆಯ ಎರಡು ಮೋಟಾರ್ ಬೋಟುಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
* ಗಿರೀಶ್ ಹುಣಸೂರು